ನರಭಕ್ಷಕ ಹುಲಿ ಬನ್ನೇರುಘಟ್ಟಕ್ಕೆ
ಆನೇಕಲ್ಲು: ಚಾಮರಾಜನಗರ ಬಂಡೀಪುರ ಅರಣ್ಯ ವಲಯ ಪ್ರದೇಶದ ಮದ್ದೂರು ಬಳಿ ಜೀವಂತ ಸೆರೆ ಹಿಡಿದ ನರ ಬಕ್ಷಕ ಹುಲಿಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆ ತರಲಾಗಿದೆ.
ಹುಲಿಯು ಬೇರೆ ಹುಲಿಯೊಂದಿಗೆ ಕಾದಾಟವಾಡಿದ್ದು ಮೈಮೇಲೆ ಹಲವು ಗಾಯಗಳಾಗಿವೆ. ಜೊತೆಗೆ ಪ್ರಯಾಣದಿಂದಲೂ ಬಳಲಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉದ್ಯಾನವನ ಆರೋಗ್ಯಾಧಿಕಾರಿ ಡಾ. ಚೆಟ್ಟಿಯಪ್ಪ ತಿಳಿಸಿದರು.
ಮದ್ದೂರು ಬಳಿ ಸೆರೆ ಸಿಕ್ಕ ಹುಲಿಯು ಚಾಮರಾಜನಗರದ ದನಗಾಹಿ ರೈತನೊಬ್ಬನ ಮೇಲೆರಗಿ ಕೊಂದು ಹಾಕಿತ್ತು. ಗ್ರಾಮಸ್ಥರ ಸಹಕಾರದಿಂದ ಹುಲಿಯನ್ನು ಹಿಡಿಯಲು ಕಳೆದ 3 ದಿನಗಳಿಂದ ಕರುಮೊಂದನ್ನು ಬೋನಿನೊಳಗೆ ಇಡಲಾಗಿತ್ತು. ಗುರುವಾರ ಸೆರೆ ಸಿಕ್ಕ ಹುಲಿಯನ್ನು 200 ಕಿಮೀ ದೂರದ ಬನ್ನೇರುಘಟ್ಟಕ್ಕೆ ಬಂದೋಬಸ್ತಿನಿಂದ ತರಲಾಗಿತ್ತು. ಹಾದಿಯಲ್ಲಿ ಕುಡಿಯಲು ನೀರು ನೀಡಲಾಗಿತ್ತು. ಸ್ವಚ್ಛಂದವಾಗಿ ಬೆಳೆದ ಹುಲಿಯು ಮೊದಲು ಗಾಬರಿಯಿಂದಾಗಿ ಅಸಹಕಾರದಿಂದ ವರ್ತಿಸುತ್ತಿತ್ತು. ಉದ್ಯಾನವನದ ಚಿಕಿತ್ಸಾ ಘಟಕದಲ್ಲಿರುವ ಬೋನಿಗೆ ವರ್ಗಾಯಿಸಿಕೊಂಡು ತಜ್ಞರ ತಂಡದಿಂದ ಗಾಯಗಳಿಗೆ ಚಿಕಿತ್ಸೆ ನೀಡಲಾಯಿತು. ಶುಕ್ರವಾರ ಬೆಳಗ್ಗೆ 8 ಕೆಜಿ ಮಾಂಸ ನೀಡಿದ್ದು, ಗಾಯಗೊಂಡ ಹುಲಿ ಆಹಾರ ಸೇವಿಸಿದೆ. ಈ ಲಕ್ಷಣದಿಂದ ಇದು ಔಷಧಿಗೆ ಸ್ಪಂದಿಸುತ್ತಿದ್ದು 8 ದಿನದಲ್ಲಿ ಸುಧಾರಿಸುವುದು ಡಾ. ಚೆಟ್ಟಿಯಪ್ಪ ತಿಳಿಸಿದರು.
ನರ ಹಂತಕ ಪರಿಣತ: ಈ ಮೊದಲು ನಾಗರಹೊಳೆ ಹಾಗೂ ಮಾದೇಶ್ವರ ವಲಯದಲ್ಲಿ ಸೆರೆ ಹಿಡಿಯಲಾಗಿದ್ದ ನರಹಂತಕ ಹುಲಿಗಳಾದ ಮಾಸ್ತಿ ಹಾಗೂ ಮಾದೇಶ್ ಎಂಬ ಹುಲಿಗಳಿಗೆ ಇಲ್ಲಿ ಆಶ್ರಯ ನೀಡಿ ಚಿಕಿತ್ಸೆ ನೀಡಲಾಗಿತ್ತು. ಕಳೆದ ತಿಂಗಳಲ್ಲಿ ಸೆರೆ ಸಿಕ್ಕ ಹುಲಿಯು ಮೈಸೂರು ಝೂ ನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಆ ಹುಲಿಯನ್ನೂ ಬನ್ನೇರುಘಟ್ಟಕ್ಕೆ ಕರೆತರುವ ಪ್ರಸ್ಥಾವನೆಯಿದ್ದಿತು ಎಂದರು.
ನರಹಂತಕ ಹುಲಿಯನ್ನು ಪ್ರತ್ಯೇಕ ಬೋನಿನಲ್ಲಿ ಇಡಲಾಗಿದ್ದು ಅದನ್ನು ಸೂಕ್ಮವಾಗಿ ಗಮನಿಸಲಾಗುತ್ತದೆ. ಬೇರೆ ಹುಲಿಯೊಂದಿಗೆ ಹೊಂದಿಕೊಳ್ಳುವುದೇ ಅಥವಾ ತನ್ನ ಸ್ವಭಾವ ಮೆರೆಯುವುದೇ ಎಂಬುದನ್ನು ಗ್ರಹಿಸಿ ಜನರ ವೀಕ್ಷಣೆಗೆ ಬಿಡಲಾಗುವುದು ಎಂದು ಸಿಸಿಎಫ್ ರಂಗಸ್ವಾಮಿ ತಿಳಿಸಿದ್ದಾರೆ.