ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮೇರೆ ಮೀರಿದ 'ಶಿಕ್ಷಣ' ಶೀತಲ ಸಮರ

Mainashree
Updated On : 4 Jan 2014, 12:16 pm

ಚನ್ನಪಟ್ಟಣ: ತಾಲೂಕು ಶಿಕ್ಷಣ ಇಲಾಖೆಯ ಶೀತಲ ಸಮರ ಮತ್ತೊಮ್ಮೆ ಬೀದಿಗೆ ಬಂದಿದೆ. ಕಳೆದೆರಡು ವರ್ಷಗಳಿಂದ ಆರಂಭ ಗೊಂಡ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳ ನಡುವಿನ ಶೀತಲ ಸಮರ ಆಗಾಗ ಬಹಿರಂಗ ಗೊಳ್ಳುತ್ತಿದ್ದು, ಈ ಬಾರಿ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಹರಿದಾಸ್ ಅಮಾನತು ಆದೇಶದೊಂದಿಗೆ ಶಿಕ್ಷಣ ಇಲಾಖೆಯಲ್ಲಿ ಅಸಮಾಧಾನದ ಜ್ವಾಲಾಮುಖಿ ಮತ್ತೊಮ್ಮೆ ಆಸ್ಫೋಟ ಗೊಂಡಿದೆ.
ಪಟ್ಟಣದ ಕ್ಲಸ್ಟರ್-1 ರ ಸಂಪನ್ಮೂಲನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ಹರಿದಾಸ್‌ರನ್ನು ಕರ್ತವ್ಯ ಲೋಪ, ಹಿರಿಯ ಅಧಿಕಾರಿಗಳೊಂದಿಗೆ ಅನುಚಿತ ವರ್ತನೆ, ದುರ್ನಡತೆ, ಅವಿಧೇಯತೆ ಮೊದಲಾದ ಕಾರಣ ನೀಡಿ ಅಮಾನತು ಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ಆದೇಶ ಹೊರಡಿಸಿದ್ದಾರೆ.
ಈ ಆದೇಶ ಹೊರಬಿದ್ದ ಹಿನ್ನೆಲೆಯಲ್ಲಿ ಕೆಂಡ ಮಂಡಲವಾಗಿರುವ ಕೆಲ ಶಿಕ್ಷಕರ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಕಿಡಿಕಾರಿದ್ದು,  ಈ ಸಂಬಂಧ ವಿಧಾನಸೌಧದ ವರೆಗೆ ದೂರು ಹೊಯ್ಯುವ ಮೂಲಕ ಈ ಅಮಾನತು ಪ್ರಕರಣವನ್ನು ರಾಡಿ ಮಾಡಿದ್ದು, ಶಿಕ್ಷಣ ಇಲಾಖೆಯಲ್ಲೀಗ ಈ ಪ್ರಕರಣ ಬಿರುಗಾಳಿ ಎಬ್ಬಿಸಿದೆ.
ಸಂಘರ್ಷಕ್ಕೆ ಮುನ್ನುಡಿ: ಬಿಇಒ ಮತ್ತು ಶಿಕ್ಷಕರ ನಡುವಿನ ಸಂಘರ್ಷಕ್ಕೆ ಬರೋಬ್ಬರಿ ಎರಡು ವರ್ಷಗಳ ಇತಿಹಾಸವಿದ್ದು, 2ವರ್ಷಗಳ ಹಿಂದೆ ನಡೆದ ಗುರುಸ್ಪಂದನ ಕಾರ್ಯಕ್ರಮದಲ್ಲಿ ಅಂದಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಪಿ.ಪುಟ್ಟೇಗೌಡ, ಕಾರ್ಯದರ್ಶಿ ರಾಮಕೃಷ್ಣ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ರಾಜಶೇಖರ್, ಕ್ಷೇತ್ರಶಿಕ್ಷಣಾಧಿಕಾರ ಶಿವಪ್ಪ ವಿರುದ್ಧ ಆರೋಪಗಳ ಸುರಿಮಳೆ ಗರೆದಿದ್ದರು.
ಇದನ್ನು ಅನುಚಿತ ವರ್ತನೆ ಎಂದು ವ್ಯಾಖ್ಯಾನಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳು ಶಿಕ್ಷಣ ಇಲಾಖೆ ಪದಾಧಿಕಾರಿಗಳನ್ನು ಅಮಾನತು ಗೊಳಿಸುವ ಮೂಲಕ ಸಂಘರ್ಷಕ್ಕೆ ಮುನ್ನುಡಿ ಬರೆದರು. ಈ ಸಂದರ್ಭದಲ್ಲಿ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಪುಟ್ಟಣ ಮಧ್ಯ ಪ್ರವೇಶಿಸಿ ಶಿಕ್ಷಕರು ಮತ್ತು  ಶಿಕ್ಷಣಾಧಿಕಾರಿಗಳ ನಡುವಿನ ವಿವಾದಕ್ಕೆ ತೆರೆ ಎಳೆದರಾದರೂ, ಅಂದು ಅಂಕುರವಾದ ಶೀತಲ ಸಮರ ಇಂದಿಗೂ ಕೊನೆಯಾಗಿಲ್ಲ.
ಶಿಕ್ಷಕರ ಗುಂಪುಗಾರಿಕೆ: ತಾಲೂಕು ಶಿಕ್ಷಕರ ಸಂಘದಲ್ಲಿ ಎರಡು ಗುಂಪು ಸೃಷ್ಟಿಯಾಗಿದ್ದು, ಶಿಕ್ಷಕರ ಸಂಘದ ಪದಾಧಿಕಾರ ಹುದ್ದೆಗಾಗಿ ಉಭಯ ಗುಂಪುಗಳು ಯಾವ ವೃತ್ತಿಪರ ರಾಜಕಾರಣಿಗೂ ಕಡಿಮೆ ಇಲ್ಲದಂತೆ ಮಸಲತ್ತು ನಡೆಸುವಲ್ಲಿ ನಿಸ್ಸೀಮರಾಗಿದ್ದಾರೆ.
  ಇದರ ಪ್ರತಿಫಲವೇ ಇಂತಹ ಸಂಘರ್ಷಗಳು ಆಗಾಗ ಸ್ಫೋಟಗೊಳ್ಳುವಂತೆ ಮಾಡಿದೆ. ಅದಾಗಲೇ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾಶಿಕ್ಷಕರ ಸಂಘದಲ್ಲಿ ಇಂತಹ ಗುಂಪುಗಾರಿಗೆ ತೀವ್ರಗೊಂಡು ಅಧ್ಯಕ್ಷ ಬದಲಾವಣೆ ನಡೆದಿದೆ.
ಇತ್ತೀಚಿಗೆ ನಡೆದ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಒಂದು ತಂಡ ನಾವು ಬಿಇಒ ಬೆಂಬಲಿತ ಬಣ ಎಂದೇ ಕಣಕ್ಕಿಳಿದಿದ್ದರು. ಕ್ಷೇತ್ರಶಿಕ್ಷಣಾಧಿಕಾರಿಗಳು ಇದನ್ನು ನಿರಾಕರಿಸಿದರಾದರೂ ಚುನಾವಣೆಯ ತುಂಬ ಇಂತಹುದೇ ಪ್ರಚಾರ ನಡೆದಿತ್ತು. ಹರಿದಾಸ್ ಅಮಾನತು ಹಿಂದೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಆಪ್ತರಾಗಿರುವ ಕೆಲ ಮಂದಿ ಪಿತೂರಿ ನಡೆಸಿದ್ದಾರೆ ಎಂಬ ಆಪಾದನೆ ಹರಿದಾಸ್ ಬೆಂಬಲಿತ ಶಿಕ್ಷಕರದ್ದಾಗಿದೆ.
ವರ್ಷದಿಂದ ನಡೆದ ವಿವಾದ: ಸಿಆರ್‌ಪಿ ಹರಿದಾಸ್ ಮತ್ತು ಬಿಇಒ ನಡುವೆ ಒಂದು ವರ್ಷದಿಂದ ದೋಷಾರೋಪ, ತನಿಖೆ, ವಿವರಣೆ ಇಂತಹ ಬೆಳವಣಿಗೆಗಳು ನಡೆಯುತ್ತಲೇ ಬಂದಿವೆ.  
 ಕಳೆದ ಡಿ.9 ರಂದು ಕ್ಷೇತ್ರ ಶಿಕ್ಷಣಾಧಿಕಾರಿ ಹರಿದಾಸ್‌ಗೆ  ವಿವಿಧ ಆಪಾದನೆಗಳಿಗೆ ವಿವರಣೆ ನೀಡುವಂತೆ ಜಾರಿಮಾಡಿದ ನೊಟೀಸ್‌ಗೆ ನೀಡಿದ ಲಿಖಿತ ಉತ್ತರದಲ್ಲಿ ಹರಿದಾಸ್, ತಮ್ಮ ಮೇಲಿನ ಆಪಾದನೆಗಳಿಗೆ ಸ್ಪಷ್ಟನೆ ನೀಡುವ ಜತೆಗೆ ನಿಮ್ಮ ತಾಳಕ್ಕೆ ತಕ್ಕಂತೆ ನಾನು ಕುಣಿಯಲಿಲ್ಲ ಎಂಬ ಕಾರಣಕ್ಕೆ ಕಿರುಕುಳ ನೀಡುತ್ತಿದ್ದೀರಿ ಎಂದು ಗುರುತರ ಆರೋಪ ಮಾಡುವ ಜತೆಗೆ ಹಣ ನೀಡುವಂತೆ ಬಿಇಒ ನನ್ನನ್ನು ಕೇಳಿದ್ದರು ಎಂದು ಉತ್ತರ ನೀಡಿರುವುದು ಸಾಕಷ್ಟು ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.

ಸು.ನಾ.ನಂದಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement