ರಾಮನಗರ ರಾಜಕೀಯ ಏಳು-ಬೀಳು
ರಾಮನಗರ: ರಾಜಕಾರಣವೇ ಉಸಿರು, ಅದೇ ಹಾಸು-ಹೊದಿಕೆ ಎನ್ನುವಂತಿರುವ ರಾಮನಗರ ಜಿಲ್ಲೆ ಪಾಲಿಗೆ ಹೊಸ ವರ್ಷಾರಂಭದಲ್ಲೇ ರಾಜಕೀಯ ಏಳು-ಬೀಳು ಎದುರಾಗಿದೆ. ಸಚಿವ ಸ್ಥಾನ ವಂಚಿತರಾಗಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಲಕ್ ಕುದುರಿದರೆ, ವಿಪಕ್ಷ ನಾಯಕ ಸ್ಥಾನದಿಂದ ಎಚ್.ಡಿ.ಕುಮಾರಸ್ವಾಮಿ ವಂಚಿತರಾಗಲಿದ್ದಾರೆ.
ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಕನಕಪುರದ ಡಿ.ಕೆ.ಶಿವಕುಮಾರ್ ಅವರಿಗೆ ಕಳಂಕದ ಕಾರಣಕ್ಕೆ ಮುಚ್ಚಿದ್ದ ಸಂಪುಟದ ಬಾಗಿಲು ಕಡೆಗೂ ತೆರೆದಿದ್ದು, ಅವರಿಗೆ ಆಯಕಟ್ಟಿನ ಇಂಧನ ಖಾತೆಯೇ ಲಭಿಸಿದೆ. ಇಷ್ಟರಲ್ಲೇ ಅವರಿಗೆ ರಾಮನಗರ ಜಿಲ್ಲಾ ಉಸ್ತುವಾರಿ ಪಟ್ಟವೂ ದಕ್ಕಲಿದೆ.
ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಿಂಗ್ ಇಲ್ಲವೇ ಕಿಂಗ್ ಮೇಕರ್ ಎರಡೂ ಆಗದ ಎಚ್.ಡಿ.ಕುಮಾರಸ್ವಾಮಿ ಕಡೆಗೆ ವಿಪಕ್ಷ ನಾಯಕ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇದೀಗ ಬಿಜೆಪಿ ಜತೆ ಕೆಜೆಪಿ ವಿಲೀನದೊಂದಿಗೆ ಕುಮಾರಸ್ವಾಮಿ ಹುದ್ದೆಗೆ ಕುತ್ತುಂಟಾಗಲಿದೆ.
ವಿರೋಧಿಗಳಿಗೆ ದಿಗಿಲು: ಶಿವಕುಮಾರ್ ಸಚಿವರಾಗಿರುವುದು ಕಾಂಗ್ರೆಸ್ ಪಾಳಯದಲ್ಲಿ ಸಂತಸ ತಂದಿದ್ದರೆ. ವಿರೋಧಿ ಪಾಳಯಕ್ಕೆ ಅತೃಪ್ತಿ ಜತೆಗೆ ದಿಗಿಲೂ ಮೂಡಿದೆ. ಅದರಲ್ಲೂ ಜೆಡಿಎಸ್ ಪಡಸಾಲೆಗೆ ಮಂಕು ಕವಿದಿದೆ. ಹೊಸ ರಾಜಕೀಯ ಬೆಳವಣಿಗೆಯನ್ನು ದಳಪತಿಗಳು ಅರಗಿಸಿಕೊಳ್ಳಲಾಗುತ್ತಿಲ್ಲ.
ಹೇಳಿ ಕೇಳಿ ಶಿವಕುಮಾರ್ ಅವರದ್ದು ಸಂಘರ್ಷದ ರಾಜಕಾರಣ. ವಿರೋಧಿಗಳ ಮಾತಿಗೆ ಸೊಪ್ಪು ಹಾಕದೆ, ತಮ್ಮದೇ ಬೆಂಬಲಿಗರ ಬೆಂಗಾವಲಿಗೆ ನಿಲ್ಲುತ್ತಲೇ ಅವರು ಬಂದಿದ್ದಾರೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ದಕ್ಕಿರುವ ಆಪ್ತೇಷ್ಟರು, ಹಿಂಬಾಲಕರಿಗೆ ಸಹಜವಾಗಿಯೇ ಹರ್ಷ ಮೂಡಿಸಿದೆ.
ಇಕ್ಕಟ್ಟಿನಲ್ಲಿ ಎಚ್ಡಿಕೆ: ಸಂತೋಷ್ ಲಾಡ್ ವಿರುದ್ಧದ ಹೋರಾಟದಲ್ಲೂ ಮೌನಕ್ಕೆ ಮೊರೆ ಹೋಗಿದ್ದ ಎಚ್.ಡಿ.ಕುಮಾರಸ್ವಾಮಿ, ಸಂಪುಟಕ್ಕೆ ಡಿ.ಕೆ.ಶಿವಕುಮಾರ್ ಸೇರ್ಪಡೆ ಆಗಬೇಕಿತ್ತೆಂದು ಅದಾಗಲೇ ಹೇಳಿದ್ದರು. ಹೀಗಾಗಿ ಅವರು ಶಿವಕುಮಾರ್ ಸಚಿವರಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಜಿಲ್ಲೆಯ ಆಗು-ಹೋಗು, ಯೋಜನೆಗಳ ಕಾರ್ಯಗತ, ಆಡಳಿತದಲ್ಲಿ ಶಿವಕುಮಾರ್ ಎಂದೂ ವಿರೋಧಿಗಳ ಮಾತಿಗೆ ಸೊಪ್ಪು ಹಾಕುವ ಜಾಯಮಾನದವರಲ್ಲ. ಈ ಕಾರಣಕ್ಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ನಡುವೆ ನಿರಂತರ ತಿಕ್ಕಾಟ ಸಾಧ್ಯತೆ ತಳ್ಳಿ ಹಾಕಲಾಗದು.
ಸಂಸದ ಡಿ.ಕೆ.ಸುರೇಶ್ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮುಂದಾದ ಸಂದರ್ಭದಲ್ಲಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯವಾಗಿ ದೊಡ್ಡ ರಂಪಾಟವೇ ನಡೆದು, ಕಡೆಗೆ ಯೋಜನೆ ಸ್ಥಗಿತಗೊಂಡಿತು. ಇದೆಲ್ಲಾ ಮತ್ತೆ ಮರುಕಳಿಸದಿರದು.
ಸೈನಿಕನಿಗೆ ಸೇಡಿನ ಭಯ: ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಸಿ.ಪಿ.ಯೋಗೇಶ್ವರ್ ತಮ್ಮ ಅಧಿಕಾರಾವಧಿಯಲ್ಲಿ ಡಿಕೆಎಸ್ ಸಹೋದರರ ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದರು. ಅದನ್ನೇ ಕಾರಣವಾಗಿಟ್ಟುಕೊಂಡ ಶಿವಕುಮಾರ್ ಸಚಿವ ಸ್ಥಾನ ತೊರೆದು, ಪಕ್ಷಾಂತರಕ್ಕೆ ಮುಂದಾದ ಯೋಗೇಶ್ವರ್ ಅವರಿಗೆ ಕಾಂಗ್ರೆಸ್ ಬಾಗಿಲು ಮುಚ್ಚುವಂತೆ ನೋಡಿಕೊಂಡು ಸೇಡು ತೀರಿಸಿಕೊಂಡಿದ್ದರು.
ಅದಾದ ಬಳಿಕ ಸಮಾಜವಾದಿ ಪಕ್ಷದ ಮೂಲಕ ಯೋಗೇಶ್ವರ್ ವಿಧಾನಸಭೆಗೆ ಮರು ಪ್ರವೇಶ ಮಾಡಿದ್ದಾಯಿತು. ಲೋಕಸಭೆ ಉಪ ಚುನಾವಣೆಯಲ್ಲಿ ಡಿಕೆಎಸ್ ಸಹೋದರರೊಟ್ಟಿಗೆ ಕೈ ಜೋಡಿಸಿದರಾದರೂ ಸಂಬಂಧವೇನೂ ಸುಧಾರಿಸಿಲ್ಲ. ಈಗ ಸ್ವತಃ ಯೋಗೇಶ್ವರ್ ಅವರೇ ಡಿಕೆಎಸ್ ಸಹೋದರರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ, ಅಸ್ತಿತ್ವ ಪ್ರದರ್ಶಿಸುವ ಇರಾದೆಯನ್ನು ಯೋಗೇಶ್ವರ್ ವ್ಯಕ್ತಪಡಿಸಿದ್ದಾರೆ. ಹೀಗಾದಲ್ಲಿ ಕಾಂಗ್ರೆಸ್ಗೆ ದೊಡ್ಡ ಹೊಡೆತ ಬೀಳಲಿದೆ. ಅಲ್ಲಿಂದ ಮತ್ತೆ ಶಿವಕುಮಾರ್ ಮತ್ತು ಯೋಗೇಶ್ವರ್ ನಡುವಿನ ಕಚ್ಚಾಟ ಮತ್ತೆ ಶುರುವಿಟ್ಟುಕೊಳ್ಳುವುದು ನಿಶ್ಚಿತ.
ಬಾಲುಗೆ ಉಭಯ ಸಂಕಟ: ಮಾಗಡಿಯ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಪದೇ ಪದೇ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯುತ್ತಲೇ ಬಂದಿದ್ದಾರಾದರೂ ಉಭಯತ್ರರ ಸಂಬಂಧ ಹಳಸಿಲ್ಲವೆನ್ನುವುದು ಜಗಜ್ಜಾಹೀರಾದ ಸಂಗತಿ. ಒಂದೊಮ್ಮೆ ಕುಮಾರಸ್ವಾಮಿ ಮತ್ತು ಶಿವಕುಮಾರ್ ಸಂಘರ್ಷ ಮುಂದುವರೆದರೆ, ಬಾಲಕೃಷ್ಣ ಪಾಲಿಗೆ ಉಭಯ ಸಂಕಟ ಎದುರಾಗಲಿದೆ.
ವಿರೋಧಿಗಳ ಪಾಲಿಗೆ ಸವಾಲು: ರಾಜಕೀಯವಾಗಿ ಶಿವಕುಮಾರ್ ಸಾಕಷ್ಟು ಮಹತ್ವಾಕಾಂಕ್ಷೆ ಹೊಂದಿದ್ದು, ವಿರೋಧಿಗಳ ಪಾಲಿಗೆ ಸವಾಲಾಗಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸಿರುವ ಕಾರಣಕ್ಕೆ ಶಿವಕುಮಾರ್ ತಮ್ಮ ಗತ್ತು, ಗೈರತ್ತು, ಧೋರಣೆಗಳನ್ನು ಬದಿಗಿಟ್ಟೇ ಕೆಲಸ ಮಾಡಬಹುದು. ಫಲಿತಾಂಶ ನಂತರ ಜಿಲ್ಲೆಯಲ್ಲಿ ಅಧಿಪತ್ಯ ಸ್ಥಾಪನೆಗೆ ಹೋರಾಟ ಮುಂದುವರೆಸದೆ ಸುಮ್ಮನಿರಲಾರರು ಎನ್ನುವುದು ಸ್ಪಷ್ಟ.
ಮತ್ತೀಕೆರೆ ಜಯರಾಮ್