ವಿಕಲಚೇತನರಿಗೆ ಅನುಕಂಪಕ್ಕಿಂತ ಅವಕಾಶ ನೀಡಿ
ಕ.ಪ್ರ.ವಾರ್ತೆ ರಾಮನಗರ ಜ.3
ವಿಕಲಚೇತನರಿಗೆ ಬೇಕಾಗಿರುವುದು ಅನುಕಂಪ ಅಲ್ಲ, ಅವಕಾಶ. ಇವರಿಗೆ ಸೂಕ್ತ ಪ್ರೋತ್ಸಾಹ ನೀಡಿದಲ್ಲಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬಲ್ಲರು. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಿತ ಎಡಿಪೈ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ವಿಕಲಚೇತರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ರಾಮಚಂದ್ರಯ್ಯ ಹೇಳಿದರು.
ಬಿಡದಿ ಬಳಿಯ ವಾಜರಹಳ್ಳಿಯಲ್ಲಿ ಎಡಿಪೈ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಎನೆಬಲ್ ಇಂಡಿಯಾ ಸಂಸ್ಥೆ, ಮತ್ತು ಎಡಿಪೈ ಸಂಸ್ಥೆಯಿಂದ ವಿಕಲಚೇತನರಿಗಾಗಿ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ವಿಕಲಚೇತನರಿಗೆ ಸರ್ಕಾರ ಹಲವಾರು ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ವಿಕಲಾಂಗರು ಈ ಕಾರ್ಯಕ್ರಮಗಳ ಬಗ್ಗೆ ಅರಿವು ಪಡೆದು, ಸವಲತ್ತುಗಳ ಲಾಭ ಪಡಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.
ವಿಕಲಚೇತನರಿಗಾಗಿ ನಡೆದ 13 ದಿನಗಳ ತರಬೇತಿ ಶಿಬಿರದಲ್ಲಿ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಹಲವಾರು ವಿಚಾರಗಳಲ್ಲಿ ತಮ್ಮ ಅನುಭವದ ಸಾರಾಂಶ ನೀಡಿದ್ದಾರೆ. ವಿವಿಧ ಉದ್ಯಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಉದ್ಯೋಗ ಆರಂಭಿಸಲು ಬೇಕಾದ ಅವಶ್ಯಕತೆಗಳು, ಕಾನೂನು ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ ಎಂದು ಎ.ಡಿ.ಪೈ ಸಂಸ್ಥೆಯ ನಿರ್ದೇಶಕ ಬಿ.ಪಿ.ಕಿಣಿ ವಿವರಿಸಿದರು.
ಮುಖ್ಯವಾಗಿ ಅಣಬೆ ಬೇಸಾಯ, ಅಗರಬತ್ತಿ ತಯಾರಿಕೆ, ಗೃಹೋಪಯೋಗಿ ರಾಸಾಯನಿಕ ವಸ್ತುಗಳ ತಯಾರಿಕೆ, ಲೆಕ್ಕ ಪುಸ್ತಕಗಳ ನಿರ್ವಹಣಾ ತರಬೇತಿ, ಕ್ಯಾಂಡಲ್
ತಯಾರಿಕೆ, ಮೌಲ್ಯವರ್ಧಿತ ರಾಗಿ ಪದಾರ್ಥಗಳ ತಯಾರಿಕೆ, ಆರ್ಥಿಕ ಸಾಕ್ಷರತೆ ಹಾಗೂ ಆರ್ಥಿಕ ಸೇರ್ಪಡೆಯ ಬಗ್ಗೆ ತರಬೇತಿ, ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯುವ ಬಗ್ಗೆ, ಸಾಲ ನಿರ್ವಹಣಾ ತರಬೇತಿ ಇತ್ಯಾದಿಗಳನ್ನು ಸಂಸ್ಥೆಯಿಂದ ನಿಯೋಜಿಸಲ್ಪಟ್ಟ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಗಿದೆ ಎಂದರು.
ರಾಮನಗರ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಾರಾಯಣಮೂರ್ತಿ, ಬಿಡದಿ ಶಾಖೆ ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ರವೀಂದ್ರನಾಥ್, ಕೆಪಿಜೆ ಪ್ರಭು ಕರಕುಶಲ ಸಂಸ್ಥೆಯ ನಿರ್ದೇಶಕ ವೆಂಕಟೇಶ್ ಪ್ರಭು, ಎನೆಬಲ್ ಇಂಡಿಯಾದ ಶಿವಪ್ರಸಾದ್, ಜಾವೇದ್, ಪ್ರದೀಪ್ ಮುಂತಾದವರು ಭಾಗವಹಿಸಿದ್ದರು.