ವಿದ್ಯುತ್ ಅವಘಡ; ಮಹಿಳೆ ಸಾವು
ರಾಮನಗರ: ಕೊಳಾಯಿಗೆ ಮೋಟಾರ್ ಪಂಪ್ ಅಳವಡಿಸಿ ನೀರು ಹಿಡಿಯುವುದಕ್ಕೆ ಮುಂದಾದ ಮಹಿಳೆಯೊಬ್ಬರು ವಿದ್ಯುತ್ ಅವಘಡದಿಂದ ಮೃತಪಟ್ಟ ಘಟನೆ ನಗರದ ರಾಘವೇಂದ್ರ ಬಡಾವಣೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ನಗರದ ರಾಘವೇಂದ್ರ ಬಡಾವಣೆಯ ಹೇಮಾ(29) ಮೃತ ಮಹಿಳೆ. ಆಕೆ ತನ್ನ ಮನೆಗೆ ಪಡೆದಿದ್ದ ಕೊಳಾಯಿ ಸಂಪರ್ಕಕ್ಕೆ ಮೋಟಾರ್ ಪಂಪ್ ಅಳವಡಿಸಿಕೊಂಡು, ಮನೆಗೆ ನೀರು ತುಂಬಿಸಿಕೊಳ್ಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಕೊಳಾಯಿಯಿಂದ ರಭಸವಾಗಿ ನೀರು ಬರಲೆಂದು ರಾಮನಗರದಲ್ಲಿ ಸಾಕಷ್ಟು ಮಂದಿ ಕೊಳಾಯಿಗೇ ಮೋಟಾರ್ ಪಂಪ್ ಅಳವಡಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಹೇಮಾ ಕೂಡ ತನ್ನ ಮನೆಯ ಕೊಳಾಯಿಗೆ ಮೋಟಾರ್ ಪಂಪ್ ಅಳವಡಿಸಿದ್ದರು. ಆಗಾಗ್ಗೆ ತಪಾಸಣೆಗೆ ಬರುವ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳು, ಸಿಬ್ಬಂದಿಯು ಕೊಳಾಯಿಗೆ ಅಳವಡಿಸಿದ ಮೋಟಾರ್ ಪಂಪ್ ಕಡಿದು ಹಾಕಿ ಇಂಥದ್ದೆಲ್ಲಾ ಮರುಕಳಿಸದಂತೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ.
ಶುಕ್ರವಾರ ಮಧ್ಯಾಹ್ನ ರಾಘವೇಂದ್ರ ಬಡಾವಣೆಗೆ ತೆರಳಿದ ಜಲ ಮಂಡಳಿ ಸಿಬ್ಬಂದಿ ಹೇಮಾ ಅವರ ಮನೆ ಕೊಳಾಯಿಗೆ ಅಳವಡಿಸಿದ್ದ ಮೋಟಾರ್ ಪಂಪ್ ಜತೆಗೆ ವಿದ್ಯುತ್ ಸಂಪರ್ಕದ ಪ್ಲಗ್ ಕಿತ್ತು ಹಾಕಿದ್ದಲ್ಲದೆ ತಂತಿಯನ್ನೂ ಹಾನಿಗೊಳಿಸಿ ಹೋಗಿದ್ದನು. ವಿಷಯ ತಿಳಿಯದ ಹೇಮಾ ವಿದ್ಯುತ್ ಮರು ಸಂಪರ್ಕಕ್ಕೆ ಮುಂದಾದಾಗ ಹಾನಿಗೊಳಗಾಗಿದ್ದ ತಂತಿಯಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆಗೆ ನಗರಸಭೆ, ಜಲ ಮಂಡಳಿಯೇ ಕಾರಣವಾಗಿದ್ದು ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿದ್ಯುತ್ ಅವಘಡದಿಂದ ಮಹಿಳೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಜಲ ಮಂಡಳಿ ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡರು. ಕಚೇರಿಯಲ್ಲೂ ಅವರ ಸುಳಿವಿರಲಿಲ್ಲ. ಸ್ಥಳಕ್ಕೆ ಪುರಪಿತೃ ಮುತ್ತುರಾಜ್ ಭೇಟಿ ನೀಡಿದ್ದರು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.