ಸಾವಿತ್ರಿ ಬಾಯಿ ಫುಲೆ ಅಕ್ಷರ ಸಂಸ್ಕೃತಿ ಬೆಳಕು
ದೊಡ್ಡಬಳ್ಳಾಪುರ: ಭಾರತದಲ್ಲಿ ಅಕ್ಷರ ಸಂಸ್ಕೃತಿಯ ಬೆಳಕನ್ನು ಸಾರ್ವತ್ರೀಕರಣಗೊಳಿಸುವಲ್ಲಿ, ಮಹಿಳೆಯರು ಮತ್ತು ತಳಸಮುದಾಯದ ಜನರನ್ನು ಅಕ್ಷರಸ್ಥರನ್ನಾಗಿ ಬೆಳೆಸುವ ಮಹತ್ತರ ಕೆಲಸ ಮಾಡಿದ ಮಾತೆ ಸಾವಿತ್ರಿಬಾಯಿ ಫುಲೆ ಈ ಸಮಾಜದ ಆದರ್ಶವಾಗಬೇಕು ಎಂದು ಪ್ರಜಾ ವಿಮೋಚನಾ ಚಳವಳಿ-ಸಮತಾವಾದದ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ಹೇಳಿದರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ದೊಡ್ಡಬಳ್ಳಾಪುರ ತಾಲೂಕು ಪ್ರಜಾ ವಿಮೋಚನಾ ಚಳವಳಿ(ಸಮತಾವಾದ) ನೇತೃತ್ವದಲ್ಲಿ ಶುಕ್ರವಾರ ನಡೆದ ಆಧುನಿಕ ಭಾರತದ ವಿದ್ಯಾದಾತೆ ಮಾತೆ ಸಾವಿತ್ರಿಬಾಯಿ ಫುಲೆ ಅವರ 184ನೇ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಸಾಮಾಜಿಕ ಅಸಮಾನತೆಯ ಕೊಳೆಯನ್ನು ಬೇರು ಸಹಿತ ಕಿತ್ತೆಸೆಯಲು ದುಡಿದ ಬುದ್ಧ, ಬಸವ, ಅಂಬೇಡ್ಕರ್ರಂತೆ ಶೋಷಿತ ಮಹಿಳೆಯರ ಪರ ನಿಲುವು ಹೊಂದಿದ್ದ ಸಾವಿತ್ರಿ ಬಾಯಿ ಕೂಡ ಚಿಂತನೆಗಳು ಆಧುನಿಕ ಭಾರತದ ಹಣೆಬರೆಹವನ್ನು ಬರೆದಿವೆ. ಅಸ್ಪೃಶ್ಯತೆ ತೊಡೆದು ಹಾಕಿ ಮಹಿಳಾ ಶಿಕ್ಷಣ, ಸಬಲೀಕರಣ ಮತ್ತು ಅಕ್ಷರ ಕ್ರಾಂತಿಯ ಸಾಮಾಜಿಕ ಚಳವಳಿ ಶೋಷಿತ ಸಮುದಾಯಕ್ಕೆ ದೊರೆತ ದೊಡ್ಡ ಆಶಾಕಿರಣ.ಬ್ರಾಹ್ಮಣ್ಯದ ಬೆಸುಗೆಯಲ್ಲಿ ಬಿದ್ದು ನರಳುತ್ತಿದ್ದ ಅಕ್ಷರ ಸಂಸ್ಕೃತಿಯ ಸಾರ್ವತ್ರೀಕರಣಕ್ಕೆ ಅವರು ಕೈಗೊಂಡ ಸಾತ್ವಿಕ ಸಂಘರ್ಷ ಈ ದೇಶದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗಿದೆ. ಮೇಲ್ವರ್ಗದ ಟೀಕೆ-ಟಿಪ್ಪಣಿ, ಅಡ್ಡಿ-ಆತಂಕಗಳನ್ನು ಮೆಟ್ಟಿನಿಂತು ಮಹಿಳೆಯರಿಗೆ ಶಿಕ್ಷಣ ಕೊಟ್ಟ ಭಾರತದ ಮೊದಲ ಅಧ್ಯಾಪಕಿ ಸಾವಿತ್ರಿಬಾಯಿ ಎಲ್ಲ ತಳ ಸಮುದಾಯದ ದನಿ. ಜ್ಯೋತಿ ಬಾ ಪುಲೆ ಸತ್ಯಶೋಧಕ ಸಮಾಜದ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರೆ ಅವರ ಪತ್ನಿ ಮಹತ್ವದ ಚಿಂತನೆಗಳ ಮೂಲಕ ಸಮಾಜ ಕಟ್ಟಿದರು ಎಂದರು.
ಮಠಮಾನ್ಯಗಳು ಇಂದು ಜನಪರವಾಗಿಲ್ಲ. ರಾಜಕಾರಣ, ಜಾತಿ-ಜಾತಿಗಳ ಮಧ್ಯೆ ಕಂದರ ಸೃಷ್ಟಿಸುವ ಕೆಲಸವನ್ನು ಕೆಲ ಮಠಾಧಿಪತಿಗಳು ಮಾಡುತ್ತಿದ್ದಾರೆ. ವಿಶ್ವಕುಟುಂಬದ ಸಾಮರಸ್ಯಕ್ಕೆ ಧಕ್ಕೆ ತರುವ ಮೂಲಕ ಮತ್ತೆ ಮನುವಾದಿ ವೈದಿಕ ಆಲೋಚನೆಗಳನ್ನು ಹೇರುವ ವ್ಯವಸ್ಥಿತ ಕುತಂತ್ರ ನಡೆಯುತ್ತಿದೆ. ಪಠ್ಯಪುಸ್ತಕಗಳಲ್ಲಿ ಮನು ಸಂಸ್ಕೃತಿಯ ಪ್ರತಿರೂಪಗಳನ್ನೇ ನೋಡುತ್ತಿದ್ದೇವೆಯೇ ಹೊರತು ನೆಲದ ಸಂಸ್ಕೃತಿಯ ಪ್ರತಿನಿಧಿಗಳನ್ನಲ್ಲ ಎಂದರು.
ಪಿವಿಸಿ ಬೆಂ.ವಿಭಾಗ ಶಾಖೆಯ ಅಧ್ಯಕ್ಷ ಇಂಡ್ಲವಾಡಿ ಬಸವರಾಜು, ಉಪಾಧ್ಯಕ್ಷ ಚಿಕ್ಕನರಸಯ್ಯ, ಜಿಲ್ಲಾಧ್ಯಕ್ಷ ಮುನಿಕೃಷ್ಣ, ತಾ.ಕಸಾಪ ಅಧ್ಯಕ್ಷ ಕೆ.ಆರ್. ರವಿಕಿರಣ್ ಮತ್ತಿತರರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಹಲವು ಸರ್ಕಾರಿ ಶಾಲೆಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅರ್ಹ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪಿವಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿಆಂಜನಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಎಲ್. ಶಂಕರ್, ಮುನಿಕೃಷ್ಣಪ್ಪ, ತಾಲೂಕು ಅಧ್ಯಕ್ಷ ಸುತ್ತಳ್ಳಿ ಚಂದ್ರು, ಉಪಾಧ್ಯಕ್ಷ ಹಣಬೆ ಮೂರ್ತಿ, ಕಾರ್ಮಿಕ ಘಟಕದ ನಂಜೇಶ್, ಎನ್.ಓಬಳೇಶ್, ಮುನಿರಾಜು, ಶ್ರೀನಿವಾಸ್, ಮೂರ್ತಿ, ಮಹಿಳಾ ಘಟಕದ ಮಧು ಪ್ರಕಾಶ್, ಶ್ಯಾಮಲ ಜಗದೀಶ್ ಇದ್ದರು.