ಸುದ್ದಿ ಸಂಕ್ಷೇಪ
ಇಂದು ಬಿಸಿಯೂಟ ಸಿಬ್ಬಂದಿ ಪ್ರತಿಭಟನೆ
ಚನ್ನಪಟ್ಟಣ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ಪೆಢರೇಷನ್ ಶನಿವಾರ ಹಮ್ಮಿಕೊಂಡಿರುವ ಬೆಂಗಳೂರು ಚಲೋ ಚಳುವಳಿಯ ಹಂಗವಾಗಿ ತಾಲೂಕು ಸಮಿತಿ ವತಿಯಿಂದ ಪ್ರತಿಭಟನಾ ಮೆರೆವಣಿಗೆ ಮತ್ತು ರಸ್ತೆ ತಡೆ ಕಾರ್ಯಕ್ರಮ ಹಮ್ಮಿ ಕೊಂಡಿರುವುದಾಗಿ ಒಕ್ಕೂಟದ ತಾಲೂಕು ಅಧ್ಯಕ್ಷೆ ನಿರ್ಮಲಾ ತಿಳಿಸಿದ್ದಾರೆ. ಬಿಸಿಯೂಟ ನೌಕರರ ಸಮಸ್ಯೆಗಳಿಗೆ ಇಂದಿಗೂ ಪರಿಹಾರ ಸಿಗದಿದ್ದು, ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರೂ ಸರ್ಕಾರ ನಮ್ಮ ಸಮಸ್ಯೆಗೆ ಗಮನ ಹರಿಸುತ್ತಿಲ್ಲ, ಮಾಸಿಕ ರು. 1200 ವೇತನ ನೀಡಿ ಕೈತೊಳೆದು ಕೊಳ್ಳುತ್ತಿರುವ ಸರ್ಕಾರ ನಮಗೆ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ, ಸಾಮಾಜಿಕ ಭದ್ರತಾ ಯೋಜನೆಗಳು ಇಲ್ಲದಕಾರಣ ಜೀವನ ಭದ್ರತೆಯೆ ಇಲ್ಲವಾಗಿದ್ದು ನಮ್ಮ ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಚುಂಚಿಯಲ್ಲಿ ಇಬ್ಬರು ನೀರು ಪಾಲು
ಕನಕಪುರ: ಕನಕಪುರ ತಾಲೂಕಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾದ ಏಳಗಳ್ಳಿ ಸಮೀಪದ ಚುಂಚಿ ಜಲಪಾತದಲ್ಲಿ ಈಜಲು ಹೋಗಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಹಾರೋಹಳ್ಳಿ ಗ್ರಾಮದ ಅರುಣ್(20) ಹಾಗೂ ಬೆಂಗಳೂರಿನ ಆನಂದ್(23) ಎಂದು ತಿಳಿದು ಬಂದಿದೆ. ಶುಕ್ರವಾರ ಬೆಳಗ್ಗೆ ಆರು ಮಂದಿ ಗೆಳೆಯರು ಕನಕಪುರ ತಾಲೂಕಿನಲ್ಲಿನ ಚುಂಚಿ ಜಲಪಾತಕ್ಕೆ ವಿಹಾರಕ್ಕಾಗಿ ತೆರಳಿದ್ದರು. ಅವರಲ್ಲಿ ಮೂವರು ನೀರಿನಲ್ಲಿ ಈಜಲು ತೆರಳಿದ್ದು ಮಿಕ್ಕವರು ದಂಡೆಯ ಮೇಲಿದ್ದರು. ನೀರಿನ ಹರಿವು ಹಾಗೂ ರಭಸವನ್ನು ಅರಿಯದೆ ಯುವಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮೃತರಿಗಾಗಿ ಶೋಧ ನಡೆದಿದೆ. ಸಾತನೂರು ಠಾಣೆ ಸಹಾಯಕ ನಿರೀಕ್ಷಕ ಸಿದ್ಧಪ್ಪ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಿಧ ತರಬೇತಿ
ರಾಮನಗರ: ಮಣಿಪಾಲ್ ಇನ್ಸ್ಟಿಟ್ಯೂಟ್ ಕಂಪ್ಯೂಟರ್ ಎಜುಕೇಷನ್ ಮತ್ತು ಸರಸ್ವತಿ ಫೌಂಡೇಷನ್ ಸಂಸ್ಥೆಯು ನಿರುದ್ಯೋಗಿ ಯುವಕ, ಯುವತಿಯರಿಗೆ ಮೊಬೈಲ್ ರಿಪೇರಿ, ಕಂಪ್ಯೂಟರ್ ತರಬೇತಿ, ಬ್ಯೂಟಿ ಪಾರ್ಲರ್ ಸೇರಿದಂತೆ ವಿವಿಧ ತರಬೇತಿಗಳನ್ನು 21 ದಿನಗಳ ಉಚಿತವಾಗಿ ತರಬೇತಿ ನೀಡಲಿದೆ. ಆಸಕ್ತರು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಷನ್, ವೆಂಕಟಸ್ವಾಮಿ ಕಾಂಪ್ಲೆಕ್ಸ್ ಅಂಬೇಡ್ಕರ್ ಭವನ ಎದುರು, ಕೋರ್ಟ್ ರಸ್ತೆ, ರಾಮನಗರ ಇಲ್ಲಿಂದ ಅರ್ಜಿಯನ್ನು ಪಡೆದು, ಜ.10ರೊಳಗೆ ಸಲ್ಲಿಸುವುದು. ಮಾಹಿತಿಗೆ ಮೊ. 98447-19173, 99646-19344 ಸಂಪರ್ಕಿಸಬಹುದು.