ಸುದ್ದಿ ಸಂಕ್ಷೇಪ
ಇಂದು ಯುವಜನ ಜಾಗೃತಿ ಶಿಬಿರ
ಕೊರಟಗೆರೆ: ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಸಮಿತಿ, ವಾಸವಿ ಮಹಿಳಾ ಮಂಡಲಿ, ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಯುವಜನ ಜಾಗೃತಿ ಶಿಬಿರವನ್ನು ಪಟ್ಟಣದ ಕನ್ನಿಕಾ ಮಹಲ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಸಾನಿಧ್ಯವನ್ನು ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಗೊರವನಹಳ್ಳಿಯ ಪ್ರಧಾನ ಅರ್ಚಕ ಪ್ರಸನ್ನಕುಮಾರ್, ಕನ್ನಿಕಾ ಮಹಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ಕುಮಾರ್ ಹಾಜರಿರುವರು.
ಬತ್ತ, ಮಾವು ಬೆಳೆಗಾರರಿಗೆ ಸಲಹೆ
ಮೈಸೂರು: ಜಿಲ್ಲೆಯಲ್ಲಿನ ಬತ್ತ ಮತ್ತು ಮಾವು ಬೆಳೆಗಾರರಿಗೆ ನಾಗನಹಳ್ಳಿ ಸಮಗ್ರ ಕೃಷಿ ಹವಾಮಾನ ವಿಭಾಗದ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಬತ್ತ ಕಟಾವಿನ ಹಂತದಲ್ಲಿದ್ದಾಗ ಕಟಾವಿನ ಒಂದು ವಾರ ಮುಂಚೆ ಬಿಸಿಗಾಲುವೆ ತೆಗೆದು ನೀರು ಬಸಿಯಬೇಕು. ಮಾವು ಹೂ ಬಿಡುವ ವೇಳೆ ಜಿಗಿಹುಳು ಮತ್ತು ಬೂದಿರೋಗ ಕೀಟ ಬಾಧಿಸಲಿದೆ. ಈ ಹಿನ್ನೆಲೆಯಲ್ಲಿ ಮಾವಿನಲ್ಲಿ ಹೂ ಬಿಡುವುದಕ್ಕೆ ಮುಂಚೆ ಹಾಗೂ ಕಾಯಿ ಕಚ್ಚಿದ ಕೂಡಲೆ ಜಿಗಿಹುಳು ಮತ್ತು ಬೂದಿ ರೋಗದ ನಿಯಂತ್ರಣಕ್ಕೆ ಗಿಡಗಳಿಗೆ 1.5 ಮಿ.ಲೀ. ರೋಗರ್ ಜೊತೆಗೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಮಾಹಿತಿಗೆ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ.ಗೋವಿಂದರಾಜು ಅಥವಾ ಸಹ ಸಂಶೋಧಕ ಎನ್. ನರೇಂದ್ರ ಬಾಬು ಅವರ ದೂ.0821- 2591267 ಸಂಪರ್ಕಿಸಬಹುದು.
ವಿಶ್ವನಾಥ್ಗೆ ಸನ್ಮಾನ
ಮೈಸೂರು: ಮಡಿಕೇರಿಯಲ್ಲಿ ನಡೆಯುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಮೈಸೂರಿನ ಎಂ.ಬಿ. ವಿಶ್ವನಾಥ್ ಅವರನ್ನು ಸನ್ಮಾನಿಸಲಾಗುವುದು. ಜ.9 ರಂದು ಈ ಸನ್ಮಾನ ನಡೆಯಲಿದ್ದು, ಸೇವೆ ಸಲ್ಲಿಸಿರುವ ಗಣ್ಯರನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನು ಪರಿಷತ್ತು ಪಾಲಿಸಿಕೊಂಡು ಬರುತ್ತಿದ್ದು, ಕನ್ನಡಪರ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ.
ವ್ಯಕ್ತಿ ಸಾವು
ಮೈಸೂರು: ಅನಾರೋಗ್ಯದಿಂದ ಬಳಲಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುಮಾರು 55 ರಿಂದ 60 ವರ್ಷ ವಯಸ್ಸಿನ ವ್ಯಕ್ತಿ ಅಕ್ಕಿಚೌಕದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಜ.1 ರಂದು ಮೃತಪಟ್ಟಿದ್ದಾರೆ. ವಿವಿರಕ್ಕೆ ದೂರವಾಣಿ- 2418107, 2418307 ಇಲ್ಲಿಗೆ ಸಂಪರ್ಕಿಸಬಹುದು.
ಮರಳು ಲಾರಿ ಮುಷ್ಕರ 4ನೇ ದಿನಕ್ಕೆ
ಮದ್ದೂರು: ಸರ್ಕಾರ ಜಾರಿಗೆ ತಂದಿರುವ ಹೊಸ ಮರಳು ನೀತಿ ವಿರೋಧಿಸಿ ಮರಳು ಸಾಗಾಣಿಕೆ ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರ ಶುಕ್ರವಾರ 4ನೇ ದಿನಕ್ಕೆ ಮುಂದುವರೆದಿದೆ.
ಪಟ್ಟಣದ ಹೊರವಲಯದ ಕೆಸ್ತೂರು ಕ್ರಾಸ್ ಎದುರಿನ ಮೈದಾನದಲ್ಲಿ ತಾಲೂಕು ಮರಳು ಸಾಗಾಣಿಕೆ ಲಾರಿ ಮಾಲೀಕರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರದಲ್ಲಿ ಮಾಲೀಕರು ತಮ್ಮ ನೂರಾರು ಲಾರಿಗಳ ಸಂಚಾರವನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸಿದ್ದಾರೆ.
ಸ್ದಳದಲ್ಲೇ ಶಾಮಿಯಾನ ಹಾಕಿ ನಿರಂತರವಾಗಿ ಧರಣಿ ಮುಂದುವರೆಸಿರುವ ಲಾರಿ ಮಾಲೀಕರು ಹಾಗೂ ಚಾಲಕರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಹೊಸ ಮರಳು ನೀತಿಯನ್ನು ಖಂಡಿಸಿದರು. ಸರ್ಕಾರದ ನೂತನ ಮರಳು ನೀತಿಯಿಂದಾಗಿ ಲಾರಿ ಮಾಲೀಕರ ಹಿತಕ್ಕೆ ದಕ್ಕೆ ಉಂಟಾಗಿದೆ.
ಸರ್ಕಾರ ಮಧ್ಯ ಪ್ರವೇಶ ಮಾಡುವ ಮೂಲಕ ಮರಳು ನೀತಿಗೆ ಪರಿಹಾರ ರೂಪಿಸುವಂತೆ ಪ್ರತಿಭಟನಾ ನಿರತ ಲಾರಿ ಮಾಲೀಕರು ಅಗ್ರಹಪಡಿಸಿದರು. ಪ್ರತಿಭಟನೆಯಲ್ಲಿ ಲಾರಿ ಮಾಲೀಕರ ಸಂಘದ ಚಾಕನಹಳ್ಳಿ ಕುಮಾರ್, ರಾಜೇಶ್, ಮಲ್ಲೇಶ್, ಮಾರುತಿ, ರಾಜು, ರವಿ, ಜಗದೀಶ, ಕುಮಾರ, ವಿರೇಂದ್ರ, ದೊಡ್ಡಯ್ಯ, ಶೇಖರ್, ಶಿವು ಭಾಗವಹಿಸಿದ್ದರು.