20ನಿಮಿಷ 20ಸುದ್ದಿ
ತಪಾಸಣೆ ತೀವ್ರಗೊಳಿಸಿದ ಜಲಮಂಡಳಿ
ರಾಮನಗರ: ಕೊಳಾಯಿ ಸಂಪರ್ಕದಿಂದ ರಭಸವಾಗಿ ನೀರು ಬರಲೆಂದು ಅದಕ್ಕೆ ವಿದ್ಯುತ್ ಚಾಲಿತ ಮೋಟಾರ್ ಪಂಪ್ ಅಳವಡಿಸಿಕೊಳ್ಳುವ ವೇಳೆ ವಿದ್ಯುತ್ ಅವಘಡದಿಂದ ಮಹಿಳೆ ಸಾವಿನ ಹಿನ್ನೆಲೆಯಲ್ಲಿ ಎಚ್ಚೆತ್ತ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳು ಇದೀಗ ನಗರಾದ್ಯಂತ ತಪಾಸಣೆ ತೀವ್ರಗೊಳಿಸಿದ್ದಾರೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪಾಷಾ ನೇತಣತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತ್ಯೇಕ ತಂಡಗಳಲ್ಲಿ ಶನಿವಾರ ನಗರಾದ್ಯಂತ ತಪಾಸಣೆ ನಡೆಸಿದರು. ನಲ್ಲಿಗಳಿಗೆ ಮೋಟಾರ್ ಪಂಪ್ ಅಳವಡಿಕೆಯಿಂದಾಗುತ್ತಿರುವ ಅನಾಹುತ, ಅವಘಡಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡುವ ಮೂಲಕ ಅಂತಹ ಸಂಪರ್ಕ ಕಡಿತಗೊಳಿಸಲು ಸೂಚನೆ ನೀಡಿದ್ದಾರೆ. ರಾಘವೇಂದ್ರ ಬಡಾವಣೆಯಲ್ಲಿ ಹೇಮಾ ಎಂಬಾಕೆ ಮೋಟಾರ್ ಪಂಪ್ ಅಳವಡಿಸುವಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದರು. ಈ ಘಟನೆಗೆ ಮಂಡಳಿ ಅಧಿಕಾರಿಗಳೇ ಕಾರಣವೆಂದು ಆರೋಪಿಸಿದ್ದರು. ಈ ಬೆನ್ನಲ್ಲೇ ಎಚ್ಚೆತ್ತಿರುವ ಮಂಡಳಿ ಅಧಿಕಾರಿಗಳು ನಗರ ಸಂಚಾರ ಪ್ರಾರಂಭಿಸಿದ್ದಾರೆ.
ಸಮಾಜಮುಖಿಗಳಾಗಲು ಬೈರಲಿಂಗಯ್ಯ ಕರೆ
ರಾಮನಗರ: ಶಿಕ್ಷಕರು ಸ್ವಹಿತಾಸಕ್ತಿಯನ್ನು ಬದಿಗೊತ್ತಿ ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಲು ಅಹರ್ನಿಷಿ ದುಡಿಯಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ಕೆ.ಬೈರಲಿಂಗಯ್ಯ ಕರೆ ನೀಡಿದರು. ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಅನುದಾನಿತ ಮತ್ತು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜನಪದಗೀತೆ, ಕನ್ನಡ ನಾಡು, ನುಡಿ, ಸಂಸ್ಕಣತಿ ಕುರಿತ ಗೀತ ಗಾಯನ ಮತ್ತು ಚರ್ಚಾಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮ ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ.ಕುಮಾರಸ್ವಾಮಿ ಮಾತನಾಡಿದರು. ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು.
ನರಸೀಪುರ ಗ್ರಾಪಂ ನೂತನ ಅಧ್ಯಕ್ಷರಾಗಿ ರತ್ನಮ್ಮ ಆಯ್ಕೆ
ನೆಲಮಂಗಲ: ತಾಲೂಕಿನ ನರಸೀಪುರ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ರತ್ನಮ್ಮ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಹನುಮನಾಯಕ್ ತಿಳಿಸಿದ್ದಾರೆ. ಹಿಂದಿನ ಅಧ್ಯಕ್ಷರ ಅಕಾಲಿಕ ಮರಣಾ ನಂತರ ತೆರವುಗೊಂಡಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ನೂತನ ಅಧ್ಯಕ್ಷರನ್ನು ಗ್ರಾ.ಪಂ.ಸದಸ್ಯರು ಆಯ್ಕೆಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಜಿ.ನಾಗರಾಜು, ಬೆಟ್ಟಸ್ವಾಮಿಗೌಡ, ನಂಜುಂಡಪ್ಪ, ಮುಖಂಡರಾದ ವೆಂಕಟಾಚಲಯ್ಯ, ಸದಸ್ಯರಾದ ವಿ.ಪ್ರಕಾಶ್, ಶೋಭಾರಾಣಿ, ಮಂಜುನಾಥ, ಪೂರ್ಣಿಮ, ಸಿದ್ದರಾಜು, ಸರಸ್ವತಮ್ಮ, ಪ್ರೇಮ ಇದ್ದರು.
23 ಸ್ಥಾನಗಳಲ್ಲಿ ಗೆಲ್ಲಲು ಬಿಜೆಪಿ ಪಣ: ಸಿ.ಟಿ. ರವಿ
ರಾಮನಗರ: ಮುಂಬರುವ ಚುನಾವಣೆಯಲ್ಲಿ ಕನಿಷ್ಠ 23 ಸ್ಥಾನಗಳಲ್ಲಿ ಗೆಲ್ಲಲು ಬಿಜೆಪಿ ಪಣ ತೊಟ್ಟಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ತಿಳಿಸಿದರು. ರಾಜ್ಯದ 5 ಲೋಕಸಭೆ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 23 ಕಡೆ ಒಂದಿಲ್ಲೊಂದು ಬಾರಿ ಬಿಜೆಪಿ ಗೆಲವು ಸಾಧಿಸಿದೆ. ಕಳೆದ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೇ ಇರುವುದೂ ಒಂದು ರಾಜಕೀಯ ತಂತ್ರವಾಗಿತ್ತು. ಈ ಬಾರಿ ಎಲ್ಲ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗುವುದು ಎಂದರು. ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಕಾಂಗ್ರೆಸ್ ವಿರುದ್ಧ ಜನತೆ ತಿರುಗಿಬಿದ್ದಿದ್ದಾರೆ. ಪಕ್ಷ ತೊರೆದಿದ್ದವರನ್ನು ವಾಪಸ್ ಕರೆತಂದು, ನರೇಂದ್ರ ಮೋದಿ ಅಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಕಾಂಗ್ರೆಸ್, ಜೆಡಿಎಸ್ ಸೋಲಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಇದರಲ್ಲಿ ಖಂಡಿತ ಯಶಸ್ಸು ಸಾಧಿಸಲಾಗುವುದು ಎಂದು ಹೇಳಿದರು.
ಬಿ.ಇಡಿ. ಪ್ರವೇಶಕ್ಕೆ ಸೂಚನೆ
ರಾಮನಗರ: 2013-14ನೇ ಸಾಲಿನ ಬಿ.ಇಡಿ. ಪ್ರವೇಶಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಜ.10ರೊಳಗಾಗಿ ಮೂಲ ದಾಖಲೆಗಳನ್ನು ಹಾಜರುಪಡಿಸಿ ಪ್ರವೇಶ ಪತ್ರ ಪಡೆದುಕೊಳ್ಳುವಂತೆ ಡಯಟ್ ಉಪ ನಿರ್ದೇಶಕರು(ಆಡಳಿತ) ಸೂಚಿಸಿದ್ದಾರೆ. ಬೆಂಗಳೂರಿನ ಕೇಂದ್ರೀಕೃತ ದಾಖಲಾತಿ ಘಟಕ ಈಗಾಗಲೇ ಅಂತಿಮ ಆಯ್ಕೆ ಪ್ರಕಟಿಸಿದೆ. ಆಯ್ಕೆಯಾಗಿರುವ ಅಭ್ಯರ್ಥಿಗಳು ಸೂಚನಾ ಫಲಕದಲ್ಲಿ ನೀಡಲಾಗಿರುವ ಸೂಚನೆಗಳ ಪ್ರಕಾರ ಮತ್ತು ನಿರ್ದಿಷ್ಟಪಡಿಸಲಾದ ಮೂಲ ದಾಖಲೆಗಳನ್ನು ಹೊಂದಿಸಿಕೊಂಡು ಸದರಿ ಕಚೇರಿಗೆ ಹಾಜರಾಗಬೇಕಿದೆ. ದಾಖಲೆಗಳನ್ನೆಲ್ಲಾ ಪರಿಶೀಲಿಸಿ, ಅವು ಸಿಂಧುತ್ವ ಎಂದಾದಲ್ಲಿ ಅರ್ಜಿದಾರರು ದಾಖಲಾತಿ ಶುಲ್ಕ ಪಾವತಿಗಾಗಿ ಕಚೇರಿಯಿಂದ ಚಲನ್ ಪಡೆದು, ರಾಮನಗರದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಹಣ ಸಂದಾಯ ಮಾಡಬಹುದು. ಅದರ ಸ್ವೀಕೃತಿ ಹಾಜರುಪಡಿಸುತ್ತಿದ್ದಂತೆಯೇ ಪ್ರವೇಶ ಪತ್ರವನ್ನು ವಿತರಿಸಲಾಗುತ್ತದೆ ಎಂದು ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಪ್ರಗತಿಪರ ಕಾರ್ಯಕ್ರಮಗಳ ಅನುಷ್ಠಾನ ಸ್ವಾಗತಾರ್ಹ
ಕನಕಪುರ: ಇತ್ತೀಚಿನ ದಿನಗಳಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಅನೇಕ ಪ್ರಗತಿಪರ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಕಬ್ಬಾಳು ಗ್ರಾಪಂ ಅಧ್ಯಕ್ಷ ಮಾರೇಗೌಡ ಹೇಳಿದ್ದಾರೆ. ಅವರು ಕನಕಪುರ ತಾಲೂಕು ಹೊಸಕಬ್ಬಾಳು ಗ್ರಾಮದ ಅಂಬೇಡ್ಕರ್ ಪ್ರೌಢಶಾಲೆಯ ವಿದ್ಯಾಥಿಗಳಿಗೆ ಸೈಕಲ್ಗಳ ವಿತರಣೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಸಮಾರಂಭದಲ್ಲಿ ಶಾಲೆಯ 46 ಮಂದಿ ಮಕ್ಕಳಿಗೆ ಸೈಕಲ್ಗಳನ್ನು ವಿತರಿಸಲಾಯಿತು. ಮುಖ್ಯ ಶಿಕ್ಷಕ ಸಿ.ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಶಿವಲಿಂಗಯ್ಯ, ರಾಮದಾಸ್, ನಾಗಮ್ಮ, ರಂಗರಾಜು, ನರಸಿಂಹಯ್ಯ ಪಾಲ್ಗೊಂಡಿದ್ದರು.
ನಾಗರಿಕ ಬಂದೂಕು ತರಬೇತಿ
ರಾಮನಗರ: ಜಿಲ್ಲಾ ಪೊಲೀಸ್ ವತಿಯಿಂದ ಚನ್ನಪಟ್ಟಣ ತಾಲೂಕಿನ 100 ನಾಗರಿಕರಿಗೆ ಆತ್ಮರಕ್ಷಣೆಗಾಗಿ ಬಂದೂಕು ತರಬೇತಿ ಶಿಬಿರವನ್ನು ಜ.25 ರಿಂದ ಫೆ.2ರವರೆಗೆ ಆ ಪಟ್ಟಣದ ಡಿಎಆರ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದೆ. ತರಬೇತಿಯು ಪ್ರತಿ ದಿನ 7 ರಿಂದ 9ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ 15 ರೌಂಡ್ ಸಬ್ಲೆಟ್ಗಳಿಗೆ ತಗಲುವ ವೆಚ್ಚ, ತರಬೇತಿ ವೆಚ್ಚ ಮತ್ತು ಮಾಹಿತಿ ಪುಸ್ತಕ ಸಹಿತ ಇತರೆ ಸಾಮಗ್ರಿಗಳಿಗೆ ತಗಲುವ ರು.400 ಅನ್ನು ತರಬೇತಿ ಪಡೆಯಲು ಇಚ್ಛಿಸುವ ನಾಗರಿಕರು ಸಂದಾಯ ಮಾಡಬೇಕಿದೆ. ತರಬೇತಿ ಹೊಂದಿದವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ತರಬೇತಿ ಪತ್ರ ನೀಡಲಾಗುವುದು. ಆಸಕ್ತರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಡಿಎಆರ್ ಕಚೇರಿ ಅಥವಾ ಚನ್ನಪಟ್ಟಣ ಪೊಲೀಸ್ ಕಚೇರಿಯಲ್ಲಿ ಪಡೆದು, ಗುರುತಿನ ಚೀಟಿ ಮತ್ತು ಇತ್ತೀಚಿನ 3 ಭಾವ ಚಿತ್ರಗಳೊಡನೆ ಭರ್ತಿ ಮಾಡಿದ ಅರ್ಜಿಯನ್ನು ಸ್ಥಳೀಯ ಪೊಲೀಸ್ ಠಾಣೆಯ ಮೊಹರಿನೊಂದಿಗೆ ಅರ್ಜಿ ಪಡೆದ ಸ್ಥಳಗಳಿಗೆ ಜ.22ರೊಳಗಾಗಿ ಸಲ್ಲಿಸಬೇಕು. ಅಭ್ಯರ್ಥಿಯು ಭಾರತೀಯ ಪ್ರಜೆ ಮತ್ತು ಚನ್ನಪಟ್ಟಣ ತಾಲೂಕಿನ ನಿವಾಸಿ ಆಗಿರಬೇಕು. ಅಭ್ಯರ್ಥಿಯ ವಯಸ್ಸು 21 ವರ್ಷ ಮೇಲ್ಪಟ್ಟು, ಆರೋಗ್ಯವಂತರಾಗಿರಬೇಕು. ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿರಬಾರದು. ವಿವರಗಳಿಗಾಗಿ ಮೊ.9480802806 ಣ 9611777798 ಸಂಪರ್ಕಿಸಬಹುದು.
ಪ್ರತಿಯೊಬ್ಬ ವಿದ್ಯಾರ್ಥಿ ಜೀವನ ಅತ್ಯಮೂಲ್ಯ
ನೆಲಮಂಗಲ: ಪ್ರತಿಯೊಬ್ಬ ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದೆ ಎಂದು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಅವರು ಶನಿವಾರ ತಾಲೂಕಿನ ಶಿವಗಂಗಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ವಾರ್ಷಿಕೋತ್ಸವಗಳು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲು ಅತ್ಯಮೂಲ್ಯವಾಗಿರುತ್ತದೆ. ನೀವು ಭಾಗವಹಿಸುವ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆಗಳಲ್ಲಿ ಸೋಲು ಗೆಲವುಗಳನ್ನು ಪಡೆಯುತ್ತಿರ. ಇಲ್ಲಿಂದಲೇ ನಿಮ್ಮಲ್ಲಿರುವ ಆತ್ಮವಿಶ್ವಾಸಕ್ಕೆ ಪುಷ್ಟಿ ದೊರಕುತ್ತದೆ ಎಂದರು. ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಇದು ಉತ್ತಮ ಸಂದರ್ಭವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ತಮ್ಮ ಸಮಯವನ್ನು ಸದುಪಯೋಗ ನಿರ್ದಿಷ್ಟ ಗುರಿ ಸಾಧನೆಗಾಗಿ ಶ್ರಮ ಪಡೆಬೇಕು. ಈ ದೆಸೆಯಲ್ಲಿ ಪ್ರತಿಯೊಬ್ಬರೂ ಮನಸ್ಸನ್ನು ಚಂಚಲವಾಗಿಸದೇ ಉತ್ತಮ ವ್ಯಕ್ತಿಯಾಗಿ ಸಮಾಜಕ್ಕೆ ಕೆಟ್ಟದು ಮಾಡದೇ ಒಳ್ಳೆ ರೀತಿಯಲ್ಲಿ ಬಾಳಿ ಬದುಕಿ ಎಂದರು. ಕೈಗಾರಿಕೋಧ್ಯಮಿ ನಾಗರಾಜು ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ಸನನಡತೆ ರೂಪಿಸಿಕೊಳ್ಳಬೇಕು ಎಂದರು.
ಮೌಲ್ಯರಹಿತ ಅಭಿವೃದ್ಧಿ ಕಡೆಗೆ ಸಾಗುತ್ತಿರುವುದು ವಿಷಾದನೀಯ
ಕನಕಪುರ: ಜಾಗತೀಕರಣದ ಆಧುನಿಕ ಯುಗದಲ್ಲಿ ಮಾನವ ಪ್ರಕೃತಿಯೊಂದಿಗೆ ಇರುವ ಅವಿನಾಭಾವ ಸಂಬಂಧವನ್ನು ಮರೆತು, ಮೌಲ್ಯರಹಿತ ಅಭಿವೃದ್ಧಿಯ ಕಡೆಗೆ ಸಾಗುತ್ತಿರುವುದು ವಿಶಾದನೀಯವಾಗಿದೆ, ಮನುಕುಲದ ಒಳಿತಿಗಾಗಿ ಜೀವ ವೈವಿಧ್ಯದ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಅಗತ್ಯವಾಗಿದೆ ಎಂದು ಸಾತನೂರು ವಲಯ ಅರಣ್ಯಾಧಿಕಾರಿ ಜಗನ್ನಾಥ್ಹೇಳಿದ್ದಾರೆ.
ಅವರು ಕನಕಪುರ ತಾಲೂಕಿನ ತಮಿಳುನಾಡಿನ ಗಡಿಭಾಗವಾದ ಹುಣಸನಹಳ್ಳಿ ಗ್ರಾಮದಲ್ಲಿನ ಮಹಾಲಿಂಗೇಶ್ವರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಎಕೋ ಕ್ಲಬ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ನೆರವೇರಿಸಿದರು. ಪ್ರಾಂಶುಪಾಲ ಶಶಿಧರ್ ಅಧ್ಯಕ್ಷತೆ ವಹಿಸಿದ್ದರು.
ಶಿವಕಮಾರ್ಗೆ ಸಾಹಿತಿ ನಿಸಾರ್ ಅಹ್ಮದ್ ಅಭಿನಂದನೆ
ಕನಕಪುರ:ನಾಡೋಜ, ಸಾಹಿತಿ ಡಾ.ಕೆ.ಎಸ್.ನಿಸಾರ್ ಅಹ್ಮದ್ ಅವರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ಸಚಿವರ ನಿವಾಸದಲ್ಲಿ ಭೇಟಿಮಾಡಿ ಅಭಿನಂದನೆ ಸಲ್ಲಿಸಿದರು.
ಕನಕಪುರ ತಾಲೂಕಿನ ಕೊಕ್ಕರೆ ಹೊಸಹಳ್ಳಿ ಗ್ರಾಮದಲ್ಲಿ ಜನಿಸಿ,ದೇವನಹಳ್ಳಿಯಲ್ಲಿ ಬೆಳೆದ ತಮಗೆ ಕನಕಪುರ ತಾಲೂಕಿನೊಂದಿಗೆ ಇರುವ ಅವಿನಾಭಾವ ಸಂಬಂಧವನ್ನು ಕವಿ ನಿಸಾರ್ ನೆನಪಿಸಿಕೊಂಡರು. ಶಾಸಕರಾಗಿ, ಸಚಿವರಾಗಿ ಡಿ.ಕೆ. ಶಿವಕುಮಾರ್ ಅವರು ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಶಾಸಕರ ಪತ್ರಿಕಾ ಕಾರ್ಯದರ್ಶಿ ಮರಸಪ್ಪರವಿ ಪಾಲ್ಗೊಂಡಿದ್ದರು.