ಅನೈತಿಕ ಸಂಬಂಧ ಪ್ರಶ್ನಿಸಿದ ಯುವಕನ ಕೊಂದ ಪ್ರೇಯಸಿ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಹೊರವಲಯದ ಜಿಂಕೆ ಬಚ್ಚಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಜ.1ರಂದು ನಡೆದಿದ್ದ ಆತ್ಮಹತ್ಯೆ ಪ್ರಕರಣ ಅನಿರೀಕ್ಷಿತ ತಿರುವು ಪಡೆದಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಈ ಸಂಬಂಧ ಮಲ್ಲಮ್ಮ ಮತ್ತು ಸಾರಥಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಜಿಂಕೆಬಚ್ಚಹಳ್ಳಿಯ ನೀಲಗಿರಿ ತೋಪಿನಲ್ಲಿ ಗ್ರಾಮದ ನಿವಾಸಿ ನಾಗೇಶ್(28) ಸಾವನ್ನಪ್ಪಿದ್ದ. ನಾಗೇಶ್ ಇಲ್ಲಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರೂ ಸೋದರ ಸಂಬಂಧಿಗಳು. ಇವರ ಮನೆಯಲ್ಲಿ ಮದುವೆ ಮಾಡುವ ಸಿದ್ಧತೆಗಳೂ ನಡೆದಿದ್ದವು ಎನ್ನಲಾಗಿದೆ. ಆದರೆ ಅದೇ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ ಸಾರಥಿ ಎಂಬಾತನೊಂದಿಗೆ ಮಲ್ಲಮ್ಮನಿಗೆ ಅನೈತಿಕ ಸಂಬಂಧ ಇದೆ ಎಂಬುದು ನಾಗೇಶನಿಗೆ ತಿಳಿದಿದೆ. ವಿವಾಹಿತನಾಗಿದ್ದ ಸಾರಥಿ ಮನೆ ಮುಂದೆ ಆತ ಹೋಗಿ ಜಗಳ ಮಾಡಿದ್ದ. ಪರಿಣಾಮ ಸಾರಥಿಯ ಹೆಂಡತಿ ಆತನನ್ನು ತೊರೆದಿದ್ದಳು. ನಂತರ ಮಲ್ಲಮ್ಮ ಮತ್ತು ನಾಗೇಶನ ನಡುವೆ ಸಂಧಾನಕ್ಕೆ ಜಿಂಕೆಬಚ್ಚಹಳ್ಳಿಯ ನೀಲಗಿರಿ ತೋಪಿನಲ್ಲಿ ಮೂವರೂ ಸೇರಿದ್ದಾರೆ. ಆದರೆ ಮದುವೆಗೆ ಒಪ್ಪದ ನಾಗೇಶನನ್ನು ಮಲ್ಲಮ್ಮ ತನ್ನ ವೇಲ್ನಿಂದ ಬಿಗಿದು ಕೊಲೆ ಮಾಡಿದ್ದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.