ಇದು ಪುರಭವನವೋ ಪಾರ್ಕಿಂಗ್ ತಾಣವೋ?
ದೊಡ್ಡಬಳ್ಳಾಪುರ: ನಗರಸಭೆ ಅಧಿಕಾರಿಗಳೇ, ಊರಿನಲ್ಲಿ ಸರ್ಕಾರದ ಸುಪರ್ದಿನಲ್ಲಿರುವ ಒಂದೇ ಒಂದು ಸಾಂಸ್ಕೃತಿಕ ಚಟುವಟಿಕೆಗಳ ತಾಣ ಪುರಭವನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಿರಲಿ. ಇಡೀ ಪುರಭವನದ ಆವರಣ ಅಧಿಕೃತ ಪಾರ್ಕಿಂಗ್ ತಾಣವಾಗಿದೆ. ಇದರಿಂದಾಗಿ ಸಾಂಸ್ಕೃತಿಕ ವಾತಾವರಣಕ್ಕೆ ಧಕ್ಕೆಯಾಗಿದೆ. ಈ ಬಗ್ಗೆ ಗಮನ ಹರಿಸಿ.
ದೊಡ್ಡಬಳ್ಳಾಪುರದ ಪುರಭವನ (ಡಾ.ರಾಜ್ಕುಮಾರ್ ಕಲಾಭವನ) ಸುಮಾರು 4 ದಶಕಗಳ ಇತಿಹಾಸವಿದೆ. ಇಡೀ ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಂತ ಸುಸಜ್ಜಿತ ರಂಗಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪುರಭವನ ಈಗ ತನ್ನ ಹಳೆಯ ವೈಭವನಗಳನ್ನು ನೆನಪಿನ ಬುತ್ತಿಗೆ ಸರಿಸಿದೆ. ಬದಲಾದ ಕಾಲ ಮತ್ತು ಸನ್ನಿವೇಶಕ್ಕೆ ಪೂರಕವಾಗಿ ಪುರಭವನದ ವ್ಯವಸ್ಥೆಗಳು ಬದಲಾಗಬೇಕಿತ್ತು. ಮೊದಲು ವಿಶಾಲ ಹೊರಾಂಗಣವನ್ನು ಹೊಂದಿದ್ದ ಪುರಭವನ ನಗರಸಭೆ ವಾಣಿಜ್ಯ ಮಳಿಗೆ ನಿರ್ಮಾಣವಾದ ಮೇಲೆ ತನ್ನ ಆವರಣವನ್ನು ಕಿರಿದಾಗಿಸಿಕೊಂಡಿದೆ. ಕಿರಿದಾದ ಆವರಣವೂ ದ್ವಿಚಕ್ರವಾಹನಗಳ ಪಾರ್ಕಿಂಗ್ ತಾಣವಾಗಿ ಮಾರ್ಪಟ್ಟಿದ್ದು, ಗಂಭೀರ ಸಾಂಸ್ಕೃತಿಕ ರಂಗ ಚಟುವಟಿಕೆಗಳನ್ನು ನಡೆಸಲು ತೊಡಕಾಗಿದೆ.
ಅನಧಿಕೃತ ಪಾರ್ಕಿಂಗ್: ಕೆಲ ವರ್ಷಗಳಿಂದ ಈ ಜಾಗ ನಗರಸಭೆಯವರು ಅಧಿಕೃತವಾಗಿ ದ್ವಿಚಕ್ರವಾಹನಗಳ ಪಾರ್ಕಿಂಗ್ ಪ್ರದೇಶವಾಗಿಯೇ ಬಳಕೆ ಮಾಡಿಕೊಂಡು ಬಂದಿದ್ದರು. ಗುತ್ತಿಗೆಗೆ ಕೊಟ್ಟು ಪಾರ್ಕಿಂಗ್ ಶುಲ್ಕ ವಸೂಲಿಯೂ ನಡೆಯುತ್ತಿತ್ತು. ಆದರೆ ಈಗ ಇಲ್ಲಿ ಯಾವುದೇ ಪಾರ್ಕಿಂಗ್ ಶುಲ್ಕ ವಸೂಲಾತಿ ಇಲ್ಲ. ಜೊತೆಗೆ ಇಲ್ಲಿ ಪಾರ್ಕಿಂಗ್ ಮಾಡುವುದು ಅಧಿಕೃತವೂ ಅಲ್ಲ. ಪಾರ್ಕಿಂಗ್ ಮಾಡಿ ಹೋದ ವಾಹನಗಳಿಗೆ ಸೂಕ್ತ ಭದ್ರತೆಯೂ ಇಲ್ಲ. ಹೇಳುವವರಿಲ್ಲ-ಕೇಳುವವರಿಲ್ಲ. ಈ ಪುಣ್ಯಕ್ಕೆ ನಿರಾಳವಾಗಿರಬೇಕಾದ ಪುರಭವನ ಆವರಣ ಸದಾಕಾರ ಗಜಿಬಿಜಿ ಗೊಂದಲದ ತಾಣವಾಗಿರುವುದು ಏತಕ್ಕೆ ನಗರಸಭೆ ಪಾರ್ಕಿಂಗ್ ಸ್ಥಳಾಂತರಿಸುವ ಚಿಂತನೆ ಯಾಕೆ ಮಾಡಬಾರದು ಎಂಬುದು ನಾಗರೀಕರ ಪ್ರಶ್ನೆ.
ಅಡ್ಡಿ-ಆಂತಕ: ಇಲ್ಲಿ ಪಾರ್ಕಿಂಗ್ಗೆ ಅವಕಾಶ ಇರುವುದರಿಂದ ನೂರಾರು ವಾಹನಗಳನ್ನು ಜನ ತಂದು ನಿಲ್ಲಿಸುತ್ತಾರೆ. ಅಲ್ಲದೆ ಕೆಲವರು ಬೆಳಗ್ಗೆ ಬಂದು ಇಲ್ಲಿ ವಾಹನ ನಿಲ್ಲಿಸಿ ಹೋದರೆ ಮತ್ತೆ ರಾತ್ರಿಯೇ ತೆಗೆದುಕೊಂಡು ಹೋಗುವುದು. ಜೊತೆಗೆ ಪುರಭವನ ಪ್ರವೇಶಿಸಲೂ ಜಾಗವಿರದಂತೆ ವಾಹನಗಳನ್ನು ನಿಲ್ಲಿಸುತ್ತಾರೆ. ಇನ್ನು ಇಲ್ಲಿ ಕಾರ್ಯಕ್ರಮಗಳಿದ್ದ ವೇಳೆಯಂತೂ ಅವ್ಯವಸ್ಥೆಯ ಆಗರವಾಗುತ್ತದೆ. ಗಣ್ಯ ವ್ಯಕ್ತಿಗಳು ಬಂದರೆ, ಹೊರ ಊರುಗಳಿಂದ ಅತಿಥಿಗಳು ಬಂದರೆ ವಾಹನಗಳನ್ನು ನಿಲ್ಲಿಸಲೂ ಅವಕಾಶವಿರುವುದಿಲ್ಲ. ಇನ್ನು ಒಳಗೆ ಗಂಭೀರ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಪಾರ್ಕಿಂಗ್ ಜಾಗದಲ್ಲಿ ಸದ್ದುಗದ್ದಲಗಳೇ ತುಂಬಿರುತ್ತವೆ. ಸಾಹಿತ್ಯ-ಸಾಂಸ್ಕೃತಿಕ ಆಸಕ್ತ ಜನಕ್ಕೆ ಇದು ತಪ್ಪದ ಕಿರಿಕಿರಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸುವ ಕೆಲ ಸಾಹಿತ್ಯಾಸಕ್ತರು, ಪುರಭವನದಲ್ಲಿ ಗಂಭೀರ ಕಾರ್ಯಕ್ರಮಗಳು ನಡೆಯಲು ಅವಕಾಶವೇ ಇಲ್ಲದಾಗಿದೆ. ನಗರಸಭೆಗೂ ಆದಾಯ ತಾರದ ಪಾರ್ಕಿಂಗ್ನಿಂದ ಅನಗತ್ಯ ಸಮಸ್ಯೆ ಉಂಟಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಊರಿನ ಏಕೈಕ ಸಾಂಸ್ಕೃತಿಕ ಕಲಾ ಭವನದ ಸುತ್ತ ಸಾಂಸ್ಕೃತಿಕ ಶಿಸ್ತು ಇಲ್ಲದಿದ್ದರೆ ಹೇಗೆ ಎಂದು ಪ್ರಶ್ನೆ ಮಾಡುತ್ತಾರೆ.
ಪರ್ಯಾಯ ಚಿಂತಿಸಿ: ಬಸ್ನಿಲ್ದಾಣದ ಸುತ್ತಮುತ್ತ ದ್ವಿಚಕ್ರವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಪರ್ಯಾಯ ಮಾರ್ಗಗಳ ಕುರಿತು ಚಿಂತಿಸಬೇಕು. ಸೌಂದರ್ಯಮಹಲ್ ಹಿಂಭಾಗದ ನಗರಸಭೆ ಜಾಗವನ್ನು ಸ್ವಚ್ಥಗೊಳಿಸಿದರೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬಹುದು. ಕೋಟೆ ರಸ್ತೆಯ ಒಂದು ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೂ ಉತ್ತಮ. ಗಾಂಧಿನಗರ ಮುಖ್ಯರಸ್ತೆ, ಆಂಜನೇಯಸ್ವಾಮಿ ದೇವಾಲಯದಿಂದ ಗಾಂಧಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇವುಗಳಲ್ಲಿ ಯಾವುದಾದರೊಂದು ಜಾಗ ಸೂಕ್ತ ಎಂಬುದು ನಾಗರೀಕರ ಸಲಹೆ. ಅಧಿಕಾರಿಗಳು ಗಮನಹರಿಸಬೇಕಿದೆ.
ಕೆ.ಆರ್.ರವಿಕಿರಣ್