ಒತ್ತುವರಿಯಾಗಿದ್ದ ಸ್ಮಶಾನ ಜಾಗ ತೆರವು
ದೇವನಹಳ್ಳಿ: ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ಸಿಂಗ್ರಹಳ್ಳಿ ಗ್ರಾಮದ ಸರ್ವೆ ನಂ. 11 ರಲ್ಲಿ 1.20 ಎಕರೆ ಜಮೀನು ಸ್ಮಶಾನಕ್ಕಾಗಿ ಮೀಸಲಿಟ್ಟಿದ್ದು ಈ ಜಮೀನನ್ನು ಅಕ್ಕಪಕ್ಕದವರು ಒತ್ತುವರಿ ಮಾಡಿಕೊಂಡಿದ್ದು ಗ್ರಾಮಸ್ಥರು ತಹಸೀಲ್ದಾರರಿಗೆ ಮನವಿ ಮಾಡಿದ್ದ ಮೇರೆಗೆ ಶನಿವಾರ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಒತ್ತುವರಿಯಾಗಿದ್ದ ಎಲ್ಲ ಜಮೀನನ್ನು ತೆರವು ಗೊಳಿಸಿದರು.
ಕುಂದಾಣ ಹೋಬಳಿ ಉಪ ತಹಸೀಲ್ದಾರ್ ಡಿ.ಟಿ.ಅಜಿತ್ ರೈ, ರೆವಿನ್ಯೂ ಅಧಿಕಾರಿ ರಾಜು, ಗ್ರಾಮ ಲೆಕ್ಕಿಗ ಸುದರ್ಶನ್ ಆಗಮಿಸಿ ಜೆಸಿಬಿ ಸಹಾಯದಿಂದ ತೆರವು ಕಾರ್ಯಾಚರಣೆ ಮಾಡಿದರು ಎಂದು ಜಾಲಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಎಂ. ಆನಂದಕುಮಾರ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕುಂದಾಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಣ್ಣ, ಪಿವಿಸಿ ಸಂಘಟನೆಯ ಸಿಂಗರಹಳ್ಳಿ ನರಸಿಂಹಯ್ಯ ಉಪಸ್ಥಿತರಿದ್ದರು.
ಸರ್ಕಾರ ಸ್ಮಶಾನಕ್ಕಾಗಿ ಕಾದಿರಿಸಿದ ಜಮೀನನ್ನು ತಾಲೂಕು ಆಡಳಿತ ತೆರವುಗೊಳಿಸಿರುವುದಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆನಂದಕುಮಾರ್ ಅಭಿನಂದಿಸಿ ಗ್ರಾಮ ಪಂಚಾಯಿತಿಯಿಂದ ಕಾಂಪೌಂಡ್ ಹಾಕಿಸುವುದಾಗಿ ತಿಳಿಸಿದ್ದಾರೆ.