ಮೃತಪಟ್ಟು ನಾಲ್ಕು ದಿನವಾದರೂ ಅಂತ್ಯಸಂಸ್ಕಾರ ಮಾಡದೆ ಪ್ರತಿಭಟನೆ
ದೊಡ್ಡಬಳ್ಳಾಪುರ: ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮದಲ್ಲಿ ದಲಿತ ವ್ಯಕ್ತಿಯೊಬ್ಬನ ಮೇಲೆ ಕಳೆದ ಜನವರಿ 1ರಂದು ಮಾರಣಾಂತಿಕ ಹಲ್ಲೆಯಾಗಿ ಆತ ಸಾವನ್ನಪ್ಪಿದ್ದಾನೆ. ಆದರೆ ಪೊಲೀಸರು ಪ್ರಕರಣವನ್ನು ತಿರುಚಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಮೃತನ ಸಂಬಂಧಿಕರು 4 ದಿನಗಳಿಂದ ಶವವನ್ನು ಸಂಸ್ಕಾರ ಮಾಡದೆ ಮನೆ ಮುಂದೆಯೇ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಸವರ್ಣೀಯರ ಹಲ್ಲೆಯಿಂದ ಆತ ಮೃತಪಟ್ಟಿದ್ದಾನೆ. ಆದರೆ ಪೊಲೀಸರು ಇದನ್ನು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳು ಪರಾರಿಯಾಗಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಮತ್ತು ಪ್ರಕರಣವನ್ನು ಕೊಲೆ ಎಂದು ಪರಿಗಣಿಸಿ ದೂರು ದಾಖಲಿಸಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.
ನಡೆದದ್ದೇನು: ಜ.1ರ ಸಂಜೆ ಗ್ರಾಮದ ಮುನಿಸ್ವಾಮಿ ಎಂಬಾತ ಕುಡಿದ ಅಮಲಿನಲ್ಲಿ ಮಹಿಳೆಯೊಬ್ಬರೊಂದಿಗೆ ಅನೂಚಿತವಾಗಿ ವರ್ತಿಸಿದ್ದಾರೆ. ಈ ವೇಳೆ ಮುನಿಸ್ವಾಮಿಯ ಸ್ನೇಹಿತ ಮೂರ್ತಿ ಎಂಬಾತನೊಂದಿಗೆ ಜಗಳವಾಗಿದೆ. ನಂತರ ಆತನನ್ನು ಸಮೀಪದ ಅಂಗಡಿಯೊಂದರ ಬಳಿಗೆ ಕರೆದೊಯ್ದು ಮುನೇಗೌಡ, ಮುರಳಿ ಎಂಬಿಬ್ಬರ ಸಹಾಯದಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಮುನಿಸ್ವಾಮಿ ಮನೆ ಸಮೀಪದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂಬುದು ಮೃತನ ಕುಟುಂಬ ಮತ್ತು ಸಂಬಂಧಿಗಳ ಆರೋಪ.
ನ್ಯಾಯಕೊಡಿ ಸ್ವಾಮಿ: ನಮಗೆ ನ್ಯಾಯ ಕೊಡಿ ಸ್ವಾಮಿ.. ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಕೊಡಿ. ನಿರಂತರವಾಗಿ ಇದೇ ರೀತಿಯ ಶೋಷಣೆಯಿಂದ ನಮ್ಮ ಬದುಕನ್ನೇ ಕಸಿದುಕೊಳ್ಳುತ್ತಿದ್ದೀರಿ. ಆಡಳಿತಯಂತ್ರ ನಮ್ಮ ಮನವಿಗೆ ಕಿವಿಗೊಡಬೇಕು. ಸಮಾಜದಲ್ಲಿ ಸರ್ವರಿಗೂ ಸಮಾನ ಅವಕಾಶ ಮತ್ತು ನ್ಯಾಯ ಇರಬೇಕು ಎಂಬ ಆಕ್ರೋಶಭರಿತ ಮಾತುಗಳು ಸಂಬಂಧಿಕರದ್ದಾದರೆ, ಈ ಕುರಿತು ಪ್ರತಿಕ್ರಿಯಿಸಿರುವ ಮೃತ ಮುನಿಸ್ವಾಮಿಯ ಪತ್ನಿ ನಾಗಮಣಿ, ನನ್ನ ಗಂಡನನ್ನು ಹೊಡೆದು ಕೊಂದಿದ್ದಾರೆ. ಆದರೆ ಪೊಲೀಸರು ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಕೆಲ ರಾಜಕಾರಣಿಗಳು ಸವರ್ಣೀಯ ಆರೋಪಿಗಳಿಗೆ ರಕ್ಷಣೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವ್ಯಕ್ತಿ ಮೃತಪಟ್ಟು ಈಗಾಗಲೇ 4 ದಿನಗಳಾಗಿದೆ. ತೆರೆದ ವಾತಾವರಣದಲ್ಲೇ ಶವ ಇರುವುದರಿಂದ ಶವ ಕೆಡುವ ಹಂತಕ್ಕೆ ಬಂದಿದೆ. ಆದಾಗ್ಯೂ ಬೇಡಿಕೆ ಈಡೇರುವವರೆಗೆ ಶವ ಸಂಸ್ಕಾರ ಮಾಡಲ್ಲ ಎಂದು ಕುಟುಂಬ ಪಟ್ಟು ಹಿಡಿದಿದೆ. ಇತ್ತ ಪೊಲೀಸರು ಮರಣೋತ್ತರ ಪರೀಕ್ಷೆ ಬಂದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ. ಪ್ರಕರಣ ಯಾವ ಹಂತಕ್ಕೆ ತಲುಪುವುದೋ ಕಾದು ನೋಡಬೇಕು.