ಸುದ್ದಿ ಸಂಕ್ಷೇಪ
ಅಕ್ಷರ ಕಲಿಯದ ವ್ಯಕ್ತಿಯ ಬದುಕು ನಶ್ವರ: ಪ್ರಕಾಶ್
ನೆಲಮಂಗಲ: ಅಕ್ಷರ ಕಲಿಯದ ವ್ಯಕ್ತಿಯ ಬದುಕು ನಶ್ವರ ಎಂದು ಅಗಳಕುಪ್ಪೆ ಗ್ರಾ.ಪಂ.ಅಧ್ಯಕ್ಷ ಎಲ್.ಎಸ್.ಪ್ರಕಾಶ್ ತಿಳಿಸಿದರು. ಅವರು ಶನಿವಾರ ತಾಲೂಕಿನ ಅಗಳಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಗ್ರಾಮ ಲೋಕ ಶಿಕ್ಷಣ ಕೇಂದ್ರದ 2ನೇ ಹಂತದ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ ಅನಕ್ಷರಸ್ಥರು ಈ ಕಾರ್ಯಕ್ರಮದಲ್ಲಾದರೂ ಭಾಗವಹಿಸಿ ಅಕ್ಷರವನ್ನು ಕಲಿಯಬೇಕು. ಕಲಿತು ತಮ್ಮ ಜಮೀನಿನ ಪತ್ರವನ್ನು ಓದುವಷ್ಟರ ಮಟ್ಟಿಗಾದರೂ ತಯಾರಾಗಬೇಕು.
ಈ ಯೋಜನೆಯು ಸರ್ಕಾರ ಕಾರ್ಯಕ್ರಮವಾದ್ದರಿಂದ ಅಕ್ಷರ ಕಲಿತ ನಂತರ ಎಲ್ಲರಿಗೂ ಅಂಕಪಟ್ಟಿ ನೀಡಲಾಗುವುದು. ಸ್ವಯಂ ಸೇವಕರಿಗೆ ಪ್ರಶಂಸನಾ ಪತ್ರ ಹಾಗೂ ವೈಯಕ್ತಿಕವಾಗಿ ಸ್ವಯಂ ಸೇವಕರಿಗೆ ಬಹುಮಾನ ನೀಡಲಾಗುವುದು ಎಂದರು. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕ ಜಿ.ಆರ್. ಮಹಾದೇವಯ್ಯ ಕಾರ್ಯಗಾರದ ಅಧ್ಯಕ್ಷತೆವಹಿಸಿದ್ದರು. ಪಿ.ಡಿ.ಓ.ಎಸ್.ರಾಮಕೃಷ್ಣಯ್ಯ, ಸಹ ಶಿಕ್ಷಕ ಶಿವಕುಮಾರ್, ಪ್ರೇರಕರಾದ ಸಿದ್ದರಾಮಯ್ಯ, ಮುಖ್ಯ ತರಬೇತಿಗಾರ ವೆಂಕಟಶಾಮಯ್ಯ, ಹಾಗೂ ಗ್ರಾ.ಪಂ.ಸದಸ್ಯರು ಇದ್ದರು.
ಇಬ್ಬರು ಆಟೋ ಚಾಲಕರ ಬರ್ಬರ ಹತ್ಯೆ
ನೆಲಮಂಗಲ: ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಮಾಚೋಹಳ್ಳಿಯ ಖಾಸಗಿ ಬಡಾವಣೆಯಲ್ಲಿ ಇಬ್ಬರು ಆಟೋ ಚಾಲಕರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ತಲೆಯನ್ನು ಜಜ್ಜಿ ಬರ್ಬರವಾಗಿ ಕೊಲೆಗೈದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕೊಲೆಯಾದವರನ್ನು ಬೆಂಗಳೂರಿನ ಲಗ್ಗೆರೆ ವಾಸಿ ಮಂಜುನಾಥ (33), ಗಾಯಿತ್ರಿ ನಗರದ ಉಮೇಶ್ ಬಾಬು(35) ಎಂದು ಗುರುತಿಸಲಾಗಿದೆ. ಇವರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದರು. ಮಾಗಡಿ ರಸ್ತೆ ಬಳಿ ಮಾಚೋಹಳ್ಳಿ ಆಸ್ಪತ್ರೆ ಹಿಂಭಾಗ ಬರುವ ಖಾಸಗಿ ಬಡಾವಣೆಯಲ್ಲಿ ಇವರಿಬ್ಬರಿಗೂ ಚಾಕುವಿನಿಂದ ದೇಹದ ಎಲ್ಲಾ ಭಾಗಕ್ಕೂ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಶನಿವಾರ ಬೆಳಗ್ಗೆ ಸಾರ್ವಜನಿಕರು ಕೊಲೆಯಾಗಿರುವ ಶವಗಳನ್ನು ನೋಡಿ ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಅಮರ್ಕುಮಾರ್ ಪಾಂಡೆ, ವರಿಷ್ಠಾಧಿಕಾರಿ ರಮೇಶ್ ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ಕೊಲೆಯಾದ ಸಂಬಂಧಿಕರ ದೂರು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಪಘಾತ: ಮಹಿಳೆ ಸಾವು
ಕನಕಪುರ: ಕನಕಪುರ ತಾಲೂಕು ಜಕ್ಕೇಗೌಡನ ದೊಡ್ಡಿ ಸಮೀಪ ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಲಗೂನಾ ಗಾರ್ಮೆಟ್ಸ್ ಉದ್ಯೋಗಿ ಸಾತನೂರು ಸಮೀಪದ ತೋಟಹಳ್ಳಿಯ ಪವಿತ್ರಾ(23)ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತಳ ಪತಿ ಮಧು(30) ತೀವ್ರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ನಿರಂತರ ವಿದ್ಯುತ್ ಸೌಲಭ್ಯಕ್ಕೆ ಆಗ್ರಹ
ಹೊಸಕೋಟೆ: ತಾಲೂಕಿನಲ್ಲಿ ನಿರಂತರ ವಿದ್ಯುತ್ ಸರಬರಾಜು ಯೋಜನೆಯನ್ನು ಎಲ್ಲಾ ಗ್ರಾಮಗಳಿಗೂ ಸಮರ್ಪಕವಾಗಿ ವಿಸ್ತರಿಸಬೇಕು ಎಂದು ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರೈತರು ಒತ್ತಾಯಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ಪ್ರತಿದಿನ ಹಗಲು ವೇಳೆಯಲ್ಲಿ ಕೇವಲ 4 ಗಂಟೆಗಳ 3 ಫೇಸ್ ವಿದ್ಯುತ್ ಸರಬರಾಜಾಗುತ್ತಿದ್ದು, ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆಗೂ ಸಹ ಬಹಳಷ್ಟು ತೊಂದರೆಯಾಗಿದೆ. ಪ್ರಸ್ತುತ ತಾಲೂಕಿಗೆ ಮಾಲೂರು ಉಪ ಕೇಂದ್ರದಿಂದ ವಿದ್ಯುತ್ ಸರಬರಾಜಾಗುತ್ತಿದ್ದು, ತೀವ್ರ ಅಡಚಣೆ ಉಂಟಾಗುತ್ತಿದೆ. ಸಮಸ್ಯೆ ನಿವಾರಿಸಲು ತಾಲೂಕಿನ ಏಕರಾಜಪುರದ ಉಪಕೇಂದ್ರದಿಂದ ವಿತರಣೆಗೆ ವ್ಯವಸ್ಥೆ ಮಾಡಬೇಕು. 4 ಗಂಟೆ ಅವಧಿಯನ್ನು ಇನ್ನೂ ಹೆಚ್ಚಿನ 4ಗಂಟೆಗಳಿಗೆ ವಿಸ್ತರಿಸಬೇಕು. ದೊಡ್ಡಗಟ್ಟಿಗನಬ್ಬೆ ಗ್ರಾಮದ ಬಳಿ ನಿರಂತರ ಜ್ಯೋತಿ ಯೋಜನೆ ಮಂಜೂರಾಗಿದ್ದು ಕೂಡಲೇ ಕಾರ್ಯ ಪ್ರಾರಂಭಿಸಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ್ದ ಬೆಸ್ಕಾಂನ ಸಿಇಇ ಉದಯಕುಮಾರ್ ಮಾತನಾಡಿ, ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಸರಬರಾಜು ಮಾಡಲು ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಒಂದು ವಾರದೊಳಗಾಗಿ ರೈತರ ಸಭೆಯನ್ನು ಏರ್ಪಡಿಸಲಾಗುವುದು. ವಿದ್ಯುತ್ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮುಖಂಡರಾದ ಹನುಮಂತೇಗೌಡ, ರಾಜಗೋಪಾಲ್, ಭಗವಂತಪ್ಪ, ಮುನಿರಾಜು, ಮರಿಯಪ್ಪ, ಬೆಸ್ಕಾಂನ ಎಸ್ಇ ನಾಗರಾಜ್, ಇಇ ಪುರುಷೋತ್ತಮ್, ಎಇಇ ಕಾಂತರೆಡ್ಡಿ ಭಾಗವಹಿಸಿದ್ದರು.
ಅಸ್ವಸ್ಥನಾಗಿದ್ದ ವ್ಯಕ್ತಿ ಸಾವು
ಸೂಲಿಬೆಲೆ: ತೀವ್ರ ಅಸ್ವಸ್ಥನಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗಿದ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಸೂಲಿಬೆಲೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಈತನ ವಾರಸುದಾರರ ಯಾರಾದರೂ ಇದ್ದಲ್ಲಿ ಸೂಲಿಬೆಲೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
ಈತನ ವಯಸ್ಸು 60 ರಿಂದ 65 ಆಗಿದ್ದು, ಸುಮಾರು 5.3 ಅಡಿ ಎತ್ತರವಿದ್ದಾನೆ. ಎಡಗೈ ಮೇಲೆ ಆಂಜನೇಯಸ್ವಾಮಿ ಹಚ್ಚೆ ಹಾಕಿರುತ್ತೆ. ಬಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದಾನೆ. ಈತನ ವಾರಸುದಾರರ ಇದ್ದಲ್ಲಿ ಸೂಲಿಬೆಲೆ ಪೊಲೀಸ್ ಠಾಣೆ ದೂ. ಸಂಖ್ಯೆ 080-27952415 ಅಥವಾ 948080244 ಸಂಪರ್ಕಿಸುವಂತೆ ಕೋರಲಾಗಿದೆ.