ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಘಾಟಿ ಸುಬ್ರಹ್ಮಣ್ಯದಲ್ಲಿ ಇಂದು ಬ್ರಹ್ಮ ರಥೋತ್ಸವ

Mainashree
Updated On : 6 Jan 2014, 12:41 pm

ದೊಡ್ಡಬಳ್ಳಾಪುರ: ತಾಲೂಕಿನ ಸುಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜ.6ರ ಸೋಮವಾರ ಸಂಭ್ರಮದ ಬ್ರಹ್ಮರಥೋತ್ಸವ ನಡೆಯಲಿದೆ.
ಈಗಾಗಲೇ ಕ್ಷೇತ್ರದಲ್ಲಿ ರಥೋತ್ಸವ ಸಿದ್ಧತೆಗಳು ಭರದಿಂದ ನಡೆದಿದ್ದು, ದೇವಾಲಯ ಆಡಳಿತ ಮಂಡಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸೋಮವಾರ ಮಧ್ಯಾಹ್ನ 1 ಗಂಟೆಗೆ ರಥೋತ್ಸವ ಜರುಗಲಿದ್ದು, ನಾಡಿನ ವಿವಿಧೆಡೆಗಳಿಂದ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಪೂಜಾದಿಗಳಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ದೇವರ ದರ್ಶನ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಬೆಳಗಿನ ಜಾವ 4 ಗಂಟೆಗೇ ಆರಂಭವಾಗಲಿದ್ದು, ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ವಿಶೇಷ ಪಾಸುಗಳನ್ನು
ರದ್ದು ಮಾಡಲಾಗಿದ್ದು ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ ಕಳೆದ 1 ವಾರದಿಂದ ರಥೋತ್ಸವ ವಿಶೇಷ ಪೂಜಾ ಕಾರ್ಯಕ್ರಮಗಳು ರಾಜಬೀದಿ ಉತ್ಸವಗಳು ನಡೆಯುತ್ತಿವೆ. ಭಾನುವಾರ ಕೂಡ ವಿವಿಧ ಉತ್ಸವಾದಿಗಳು ಕ್ಷೇತ್ರದಲ್ಲಿ ಜರುಗಿದವು.
ಬಸ್ ವ್ಯವಸ್ಥೆ: ಘಾಟಿ ಜಾತ್ರೆ ಅಂಗವಾಗಿ ನಾಡಿನ ವಿವಿಧ ಸ್ಥಳಗಳಿಂದ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಬೆಂಗಳೂರಿನ ಕಾವೇರಿ ಭವನ ಮತ್ತು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು, ಗೌರಿಬಿದನೂರು ಸೇರಿದಂತೆ ವಿವಿಧ ಸ್ಥಳಗಳಿಂದ ನಿಯಮಿತವಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ದೊಡ್ಡಬಳ್ಳಾಪುರದಿಂದ ಪ್ರತಿ 10 ನಿಮಿಷಕ್ಕೊಂದರಂತೆ ಬಸ್ಸುಗಳು ಸಂಚರಿಸಲಿವೆ.
ಸಾಂಸ್ಕೃತಿಕ ಕಾರ್ಯಕ್ರಮ: ಜಾತ್ರೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಕ್ಷೇತ್ರದಲ್ಲಿ ವಿವಿಧ ಪೌರಾಣಿಕ ನಾಟಕಗಳು, ಕಲಾ ಪ್ರದರ್ಶನಗಳು ಏರ್ಪಾಟಾಗಿವೆ. ವಿವಿಧೆಡೆ ಅರವಂಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಮುಜರಾಯಿ ಇಲಾಖೆ, ಗ್ರಾಮ ಪಂಚಾಯಿತಿ ಕೂಡ ಸಹಕಾರ ನೀಡಿವೆ.
ರಥದ ಸಿದ್ಧತೆ: ರಥೋತ್ಸವದಂದು ಶ್ರೀಸ್ವಾಮಿಯನ್ನು ಮೆರವಣಿಗೆ ಮಾಡುವ ಬ್ರಹ್ಮರಥಕ್ಕೆ ಬಣ್ಣಗಳಿಂದ ಸಿಂಗಾರಗೊಳಿಸುವ ಪ್ರಕ್ರಿಯೆ ನಡೆಯಿತು. ರಥಕ್ಕೆ ಮತ್ತು ರಥದ ಚಕ್ರಗಳಿಗೆ ಬಣ್ಣಗಳಿಂದ ವಿಶೇಷವಾಗಿ ಅಲಂಕರಿಸುವ ಕಾರ್ಯದಲ್ಲಿ ಕಲಾವಿದರು ಮಗ್ನರಾಗಿದ್ದರು. ತುಳುಷಷ್ಠಿಯ ಅಂಗವಾಗಿ ಪ್ರತಿವರ್ಷ ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವ ನಡೆದುಕೊಂಡು ಬರುತ್ತಿದೆ. ಕ್ಷೇತ್ರದಲ್ಲಿ ಈಗ ಹಬ್ಬದ ಸಂಭ್ರಮ ಮನೆಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement