ಜನಲೋಕಪಾಲ್ ಮಸೂದೆ ಹೋರಾಟಕ್ಕೆ ಸಂದ ಜಯ
ರಾಮನಗರ: ಕಳೆದ ಐದು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಜನಲೋಕಪಾಲ್ ಮಸೂದೆಯು ಅಂಗೀಕಾರ ಗೊಂಡಿರುವುದು ಈ ಮಸೂದೆಯನ್ನು ಜಾರಿಗೊಳಿಸುವಂತೆ ಹೋರಾಡಿದವರಿಗೆ ಸಂದ ಜಯ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ನಗರ ಕಾರ್ಯದರ್ಶಿ ಶ್ರೇಯಸ್ ತಿಳಿಸಿದರು.
ಭ್ರಷ್ಟಾಚಾರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಅಂಕಿತ ಹಾಕಿದ ಹಿನ್ನೆಲೆಯಲ್ಲಿ ನಗರದ ಐಜೂರು ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಮಾತನಾಡಿದ ಅವರು ಲೋಕಪಾಲ್ ಮಸೂದೆಯು ಕಳೆದ ಐದು ದಶಕದಿಂದ ನೆನಗುದಿಗೆ ಬಿದ್ದಿತ್ತು. ಈ ಮಸೂದೆಯನ್ನು ಜಾರಿಗೊಳಿಸುವಂತೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ರೂಪಿಸಿದ್ದ ಹೋರಾಟಕ್ಕೆ ರಾಷ್ಟ್ರವ್ಯಾಪಿ ಜನಬೆಂಬಲ ದೊರೆತಿತ್ತು ಎಂದರು.
ಕಡೆಗೂ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಸರ್ಕಾರವು ಮಸೂದೆಯನ್ನು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಮಂಡಿಸಿತ್ತು. ಎರಡೂ ಸದನಗಳಲ್ಲಿ ಮಸೂದೆ ಅನುಮೋದನೆಗೊಂಡ ಹಿನ್ನೆಲೆಯಲ್ಲಿ ಸದರಿ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು. ರಾಷ್ಟ್ರಪತಿಯವರು ಗುರುವಾರ ಅಂಕಿತ ಹಾಕಿದ್ದು, ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆ ಈ ಮಸೂದೆಯು ದುಸ್ವಪ್ನವಾಗಲಿದೆ ಎಂದರು. ಮಸೂದೆ ಜಾರಿಗಾಗಿ ಹೋರಾಟ ನಡೆಸಿದ ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ಮಿಥುನ್, ವೀರೇಶ್, ಸದಾಶಿವಯ್ಯ, ಮನೋಹರ್ ಇದ್ದರು.