ತಾಕತ್ತಿದ್ದರೆ ಶಾಸಕರು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ತಡೆಯಲಿ: ಮಂಜು ಸವಾಲು
ಮಾಗಡಿ:ತಾಕತ್ತಿದ್ದರೆ ಶಾಸಕರು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ತಡೆಯಲಿ ಎಂದು ಕೆಪಿಸಿಸಿ ಸದಸ್ಯ ಎ.ಮಂಜು ಸವಾಲು ಹಾಕಿದ್ದಾರೆ
ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಕಾಂಗ್ರೆಸ್ಸಿಗರು ಶಾಸಕರ ಅಡೆ, ತಡೆಗೆ ಹೆದರುವುದಿಲ್ಲ. ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಬಾಲಿಶ ವರ್ತನೆಯಿಂದಾಗಿ ಮಾಗಡಿ ಬಿಹಾರ ಎಂಬ ಭಾವನೆ ವ್ಯಕ್ತವಾಗುತ್ತಿದೆ. ನಾವು ಸಾರ್ವಜನಿಕ ಸೇವೆಯ ಉದ್ದೇಶದಿಂದ ಘಟಕ ಆರಂಭಿಸುತ್ತಿದ್ದೇವೆ. ಮಂಚನಬೆಲೆ ಜಲಾಶಯದಿಂದ ಪಟ್ಟಣದಕ್ಕೆ ಹುಳು, ಕಲ್ಲು, ಮಣ್ಣು ತುಂಬಿರುವ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಜನ ಸಾಮಾನ್ಯರು ಈ ನೀರನ್ನು ಕುಡಿದು ರೋಗಬಾಧೆಯಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಮಂಚನಬೆಲೆ ಜಲಾಶಯದಲ್ಲಿರುವ ನೀರು ಶುದ್ಧೀಕರಣ ಕೇಂದ್ರದಲ್ಲಿ ನೀರು ಶುದ್ಧೀಕರಣಕ್ಕವಾಗುತ್ತಿಲ್ಲ. ಶುದ್ಧೀಕರಣಕ್ಕೆ ಅಗತ್ಯಕ್ರಮ ವಹಿಸಲು ಶಾಸಕರು ಪ್ರಾಮಾಣಿಕವಾಗಿ ಶ್ರಮಿಸಲಿ ಎಂದರು.
ತಾಲೂಕಿಗೆ ಶಾಶ್ವತ ಹೇಮಾವತಿ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಈಗಾಗಲೇ ಸರ್ವೆ ಕಾರ್ಯ ಮುಗಿಸಿ, ಡಿಪಿಆರ್ ಸಿದ್ಧಪಡಿಸಲಾಗಿದೆ. ಸದ್ಯದಲ್ಲೇ ಡಿಪಿಆರ್ ಅನ್ನು ಸರ್ಕಾರಕ್ಕೆ ಸಂಸದ ಡಿ.ಕೆ. ಸುರೇಶ್ ಅವರು ಸಲ್ಲಿಸಲಿದ್ದಾರೆ. 4 ಬಾರಿ ಶಾಸಕರಾಗಿರುವ ಎಚ್.ಸಿ. ಬಾಲಕೃಷ್ಣ ಅವರಿಗೆ ಯೋಜನೆ ಅರಿವಿಲ್ಲ ಎನ್ನುತ್ತಾರೆ. ಕ್ಷೇತ್ರಕ್ಕೆ ನೀರು ಎಲ್ಲಿಂದ ಬರುತ್ತದೆ. ಹೇಗೆ ಬರುತ್ತದೆ ಎಂಬುದನ್ನು ಮೊದಲು ಅರಿತು ಮತದಾರರ ಋಣ ತೀರಿಸುವ ಕೆಲಸ ಮಾಡಲಿ. ಕೈಯಲ್ಲಾಗದವರು, ಮೈ ಪರಚಿಕೊಂಡರು ಎಂಬಂತೆ, ಬಾಯಿಗೆ ಬಂದಂತೆ ಮಾತನಾಡುವುದನ್ನು ಇನ್ನು ಮುಂದಾದರೂ ಶಾಸಕರು ನಿಲ್ಲಿಸಲಿ ಎಂದು ಎ.ಮಂಜು ತಿಳಿಸಿದರು.
ಪುರಸಭಾ ಸದಸ್ಯರಾದ ಎಂ.ಎನ್.ಮಂಜು,ಕೆ.ವಿ. ಬಾಲು, ಎಸ್.ಮಹದೇವ್, ಶಿವಕುಮಾರ್, ಮಹೇಶ್, ಮಾಜಿ ಅಧ್ಯಕ್ಷರಾದ ಪಿ.ವಿ.ಸೀತಾರಾಂ, ಕಾರ್ತೀಕ್ ರೇವಣ್ಣ, ಹೊಸಪೇಟೆ ಚಂದ್ರಣ್ಣ (ಕಿಟ್ಟಿ), ಕಾರ್ತೀಕ್ ಇತರರು ಇದ್ದರು.