ಮುಗಬಾಳದಲ್ಲಿ ನಿಗೂಢ ಜ್ವರ ಪತ್ತೆಗೆ ಕ್ಯಾಂಪ್
ಸೂಲಿಬೆಲೆ: ಹೊಸಕೋಟೆ ತಾ.ಮುಗಬಾಳ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಗ್ರಾಮಸ್ಥರಲ್ಲಿ ಆವರಿಸಿಕೊಂಡಿದ್ದ ಡೆಂಘೀ ಜ್ವರದ ಭೀತಿಯ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಕ್ಯಾಂಪ್ ಹಮ್ಮಿಕೊಂಡು ಗ್ರಾಮಸ್ಥರನ್ನು ತೀವ್ರ ತಪಾಸಣಿಗೆ ಒಳಪಡಿಸಲಾಯಿತು.
ಕಳೆದ ಕೆಲ ದಿನಗಳಿಂದೆ ಮುಗಬಾಳ ಗ್ರಾಮದಲ್ಲಿ ತಿಂಗಳೊಂದರಲ್ಲಿಯೇ 8 ಜನ ಸಾವನ್ನಪ್ಪಿದ್ದರು. ಗ್ರಾಮದ ಪ್ರತಿ ಮನೆಯಲ್ಲಿ ಜ್ವರದಿಂದ ಆಸ್ಪತ್ರೆಗಳಿಗೆ ಎಡೆತಾಕುತ್ತಿದ್ದು ಭಯಕ್ಕೆ ಕಾರಣವಾಗಿತ್ತು. ಗ್ರಾಮದಲ್ಲಿ ಜ್ವರದಿಂದ ಮೃತಪಟ್ಟಿದ್ದಕ್ಕೆ ಡೆಂಘೀ ಕಾರಣ ಎಂಬ ಭೀತಿ ಇತ್ತು. ಆರೋಗ್ಯ ಇಲಾಖೆಯವರು ಮಾತ್ರ ಇದನ್ನು ನಿರಾಕರಿಸಿ ಸಾವುಗಳ ಘಟಿಸಲು ಕಾರಣವಾಗಿದ್ದ ಅಂಶಗಳನ್ನು ಹೇಳಿದರೂ ಜನ ಡೆಂಘೀ ಬಗ್ಗೆ ಭೀತಿಗೊಂಡಿದ್ದರು.
ಮಾಧ್ಯಮಗಳು ಈ ಬಗ್ಗೆ ಚುನಾಯಿತ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಗಮನಕ್ಕೆ ತಂದ ಪರಿಣಾಮ ಎಚ್ಚೆತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್, ಆಯೂಷ್ ಜಿಲ್ಲಾ ವೈದ್ಯಾಧಿಕಾರಿ ಡಾ.ಕದಿರ್ ರಾಮಲಿಂಗಮ್, ಹೊಸಕೋಟೆ ತಾ.ವೈದ್ಯಾಧಿಕಾರಿ ಡಾ.ಶಕೀಲ ಹಾಗೂ ಸ್ಥಳೀಯ ವೈದ್ಯಾಧಿಕಾರಿ ಡಾ. ಸ್ವತಂತ್ರಕುಮಾರ್
ನೇತೃತ್ವದ ತಂಡ ಬೆಂಗಳೂರಿನ ವೈದೇಹಿ ಆಸ್ಪತ್ರೆಯ 7 ಜನರ ವೈದ್ಯರ ತಂಡ ಗ್ರಾಮದಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಕ್ಯಾಂಪ್ ನಡೆಸಿ ಗ್ರಾಮಸ್ಥರ ಸಾವಿಗೆ ಹಾಗೂ ಆತಂಕಕ್ಕೆ ಕಾರಣವಾಗಿರುವ ನಿಗೂಢ ಜ್ವರದ ಬಗ್ಗೆ ತಪಾಸಣೆ ಮಾಡಿದರು. 25 ಜನರಲ್ಲಿ ಸಾಧಾರಣ ಜ್ವರ ಕಂಡು ಬಂದಿದ್ದು, ಇಬ್ಬರಲ್ಲಿ ಬಿಳಿ ರಕ್ತ ಕಣಗಳು ಕಡಿಮೆಯಾಗಿರುವುದು ಕಂಡು ಬಂದಿದೆ. ಈ ರಕ್ತ ಮಾದರಿಯನ್ನು ಹೆಚ್ಚಿನ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಸುನೀಲ್ ಹೇಳಿದ್ದಾರೆ.
ತಾಕತ್ತಿದ್ದರೆ ಶಾಸಕರು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ತಡೆಯಲಿ: ಮಂಜು ಸವಾಲು
ಮಾಗಡಿತಾಕತ್ತಿದ್ದರೆ ಶಾಸಕರು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ತಡೆಯಲಿ ಎಂದು ಕೆಪಿಸಿಸಿ ಸದಸ್ಯ ಎ.ಮಂಜು ಸವಾಲು ಹಾಕಿದ್ದಾರೆ
ಅವರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಕಾಂಗ್ರೆಸ್ಸಿಗರು ಶಾಸಕರ ಅಡೆ, ತಡೆಗೆ ಹೆದರುವುದಿಲ್ಲ. ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಬಾಲಿಶ ವರ್ತನೆಯಿಂದಾಗಿ ಮಾಗಡಿ ಬಿಹಾರ ಎಂಬ ಭಾವನೆ ವ್ಯಕ್ತವಾಗುತ್ತಿದೆ. ನಾವು ಸಾರ್ವಜನಿಕ ಸೇವೆಯ ಉದ್ದೇಶದಿಂದ ಘಟಕ ಆರಂಭಿಸುತ್ತಿದ್ದೇವೆ. ಮಂಚನಬೆಲೆ ಜಲಾಶಯದಿಂದ ಪಟ್ಟಣದಕ್ಕೆ ಹುಳು, ಕಲ್ಲು, ಮಣ್ಣು ತುಂಬಿರುವ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಜನ ಸಾಮಾನ್ಯರು ಈ ನೀರನ್ನು ಕುಡಿದು ರೋಗಬಾಧೆಯಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಮಂಚನಬೆಲೆ ಜಲಾಶಯದಲ್ಲಿರುವ ನೀರು ಶುದ್ಧೀಕರಣ ಕೇಂದ್ರದಲ್ಲಿ ನೀರು ಶುದ್ಧೀಕರಣಕ್ಕವಾಗುತ್ತಿಲ್ಲ. ಶುದ್ಧೀಕರಣಕ್ಕೆ ಅಗತ್ಯಕ್ರಮ ವಹಿಸಲು ಶಾಸಕರು ಪ್ರಾಮಾಣಿಕವಾಗಿ ಶ್ರಮಿಸಲಿ ಎಂದರು.
ತಾಲೂಕಿಗೆ ಶಾಶ್ವತ ಹೇಮಾವತಿ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಈಗಾಗಲೇ ಸರ್ವೆ ಕಾರ್ಯ ಮುಗಿಸಿ, ಡಿಪಿಆರ್ ಸಿದ್ಧಪಡಿಸಲಾಗಿದೆ. ಸದ್ಯದಲ್ಲೇ ಡಿಪಿಆರ್ ಅನ್ನು ಸರ್ಕಾರಕ್ಕೆ ಸಂಸದ ಡಿ.ಕೆ. ಸುರೇಶ್ ಅವರು ಸಲ್ಲಿಸಲಿದ್ದಾರೆ. 4 ಬಾರಿ ಶಾಸಕರಾಗಿರುವ ಎಚ್.ಸಿ. ಬಾಲಕೃಷ್ಣ ಅವರಿಗೆ ಯೋಜನೆ ಅರಿವಿಲ್ಲ ಎನ್ನುತ್ತಾರೆ. ಕ್ಷೇತ್ರಕ್ಕೆ ನೀರು ಎಲ್ಲಿಂದ ಬರುತ್ತದೆ. ಹೇಗೆ ಬರುತ್ತದೆ ಎಂಬುದನ್ನು ಮೊದಲು ಅರಿತು ಮತದಾರರ ಋಣ ತೀರಿಸುವ ಕೆಲಸ ಮಾಡಲಿ. ಕೈಯಲ್ಲಾಗದವರು, ಮೈ ಪರಚಿಕೊಂಡರು ಎಂಬಂತೆ, ಬಾಯಿಗೆ ಬಂದಂತೆ ಮಾತನಾಡುವುದನ್ನು ಇನ್ನು ಮುಂದಾದರೂ ಶಾಸಕರು ನಿಲ್ಲಿಸಲಿ ಎಂದು ಎ.ಮಂಜು ತಿಳಿಸಿದರು.
ಪುರಸಭಾ ಸದಸ್ಯರಾದ ಎಂ.ಎನ್.ಮಂಜು,ಕೆ.ವಿ. ಬಾಲು, ಎಸ್.ಮಹದೇವ್, ಶಿವಕುಮಾರ್, ಮಹೇಶ್, ಮಾಜಿ ಅಧ್ಯಕ್ಷರಾದ ಪಿ.ವಿ.ಸೀತಾರಾಂ, ಕಾರ್ತೀಕ್ ರೇವಣ್ಣ, ಹೊಸಪೇಟೆ ಚಂದ್ರಣ್ಣ (ಕಿಟ್ಟಿ), ಕಾರ್ತೀಕ್ ಇತರರು ಇದ್ದರು.