ರಣಹದ್ದುಗಳ ಸಂತತಿ ರಕ್ಷಿಸಲು ಕೈಜೋಡಿಸಿ
ಕ.ಪ್ರ.ವಾರ್ತೆ ರಾಮನಗರ ಜ.5
ರಣಹದ್ದುಗಳು ಪರಿಸರದ ಕೊಳಕನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು. ಇಂತಹ ಅಪರೂಪದ ರಣಹದ್ದುಗಳು ಇಂದು ಅಳಿವಿನಂಚಿಗೆ ತಲುಪಿದ್ದು, ಈ ಸಂತತಿಯನ್ನು ಸಂರಕ್ಷಿಸಲು ಸರ್ಕಾರದ ಜತೆಗೆ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಖ್ಯಾತ ಪರಿಸರವಾದಿ ಯಲ್ಲಪ್ಪರೆಡ್ಡಿ ಕರೆ ನೀಡಿದರು.
ತಾಲೂಕಿನ ರಾಮದೇವರ ಬೆಟ್ಟದಲ್ಲಿರುವ ರಣಹದ್ದು ವನ್ಯಧಾಮಕ್ಕೆ ಅಧ್ಯಯನ ತಂಡದ ಜತೆ ಭಾನುವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಪ್ರದೇಶದಲ್ಲಿ ಸತ್ತ ಪ್ರಾಣಿಗಳನ್ನು ಭಕ್ಷಿಸುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟುವ ಮಹತ್ವಪೂರ್ಣ ಕೆಲಸವನ್ನು ಈ ರಣಹದ್ದುಗಳು ಮಾಡುತ್ತವೆ ಎಂದರು.
ಅರಣ್ಯದಲ್ಲಿರುವ ಪ್ರಾಣಿಗಳು ಹಲವಾರು ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತವೆ. ಇದನ್ನು ಸುಮಾರು ಐದಾರು ಕಿ.ಮೀ. ದೂರದಿಂದಲೇ ಗ್ರಹಿಸುವ ರಣಹದ್ದುಗಳು ಸೂಕ್ಷ್ಮ ರೀತಿಯ ಸಂವಹನದಿಂದ ಒಟ್ಟುಗೂಡಿ ಬಂದು ಸತ್ತ ಪ್ರಾಣಿಗಳನ್ನು ತಿಂದು ಮುಗಿಸುತ್ತವೆ. ಹೀಗಾಗಿ ಆರೋಗ್ಯವಂತ ಪ್ರಾಣಿಗಳಿಗೆ ರೋಗ ಹರಡುವುದು ತಪ್ಪುತ್ತದೆ ಎಂದು ವಿವರಿಸಿದರು.
ಪ್ರಕೃತಿ ಮೇಲೆ ದೌರ್ಜನ್ಯ: ಮಾನವನ ದುರಾಸೆಯಿಂದ ದೇಶದಲ್ಲಿನ ಅರಣ್ಯ ಪ್ರದೇಶ ಶೇ.20ಕ್ಕೆ ಇಳಿದಿದೆ. ಪ್ರಕೃತಿಯ ಮೇಲೆ ಮಾನವನ ದೌರ್ಜನ್ಯ ಎಲ್ಲೆ ಮೀರಿದೆ. ಕುಡಿಯುವ ನೀರು ಹಾಗೂ ಆಹಾರದ ಕೊರತೆಯಿಂದ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ ಎಂದು ವಿಷಾದಿಸಿದರು.
ಅರಣ್ಯ ನಾಶದಿಂದ ಅತ್ಯಮೂಲ್ಯವಾದ ಪ್ರಾಣಿ ಸಂಕುಲ ಹಾಗೂ ಸಸ್ಯ ಸಂಕುಲಗಳು ನಾಶವಾಗಿವೆ. ಅದೆಷ್ಟೋ ಪ್ರಾಣಿ ಹಾಗೂ ಸಸ್ಯಗಳ ಪ್ರಬೇಧಗಳು ಅಳಿವಿನಂಚಿಗೆ ತಲುಪಿವೆ. ಇದರಿಂದಾಗಿ ಪರಿಸರ ಅಸಮತೋಲನ ಉಂಟಾಗುತ್ತಿದೆ. ಮನುಷ್ಯ ತನ್ನ ತಪ್ಪನ್ನು ಅರಿತುಕೊಂಡು ಎಚ್ಚೆತ್ತುಕೊಳ್ಳದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು. ಕೃತಕವಾಗಿ ನೀರು ಉತ್ಪಾದಿಸುವ ತಂತ್ರಜ್ಞಾನ ಅಭಿವೃದ್ಧಿ ಹೊಂದಿಲ್ಲ. ಸದ್ಯ ಲಭ್ಯವಿರುವ ನೀರನ್ನು ಜೀವ ಜಗತ್ತಿಗೆ ಉಳಿಸಿಕೊಳ್ಳಬೇಕು. ನೀರಿಗೆ ಮೊದಲ ಆದ್ಯತೆ ನೀಡುವುದಾದರೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಯಲ್ಲಪ್ಪರೆಡ್ಡಿ ಹೇಳಿದರು.
ಅಂತರ್ಜಲ ಅಭಿವೃದ್ಧಿಗೆ ಮುಂದಾಗಿ: ಕುಡಿಯುವ ನೀರಿಗಾಗಿ ಇಂದು ಹಾಹಾಕಾರ ಉಂಟಾಗಿದೆ. ಎಲ್ಲರಿಗೂ ಸಮರ್ಪಕ ನೀರು ಪೂರೈಸುವುದಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಬೇಕು. ಇಲ್ಲವಾದರೆ ಕಲ್ಲುಗಣಿಗಾರಿಕೆಗೆ, ಅರಣ್ಯ ಪ್ರದೇಶದ ತೆರವಿಗೆ ಅವಕಾಶ ನೀಡಲಿ. ನೀರಿನ ಸಮಸ್ಯೆಯನ್ನರಿತು ನಾಗರಿಕರು ಮಿತ ಬಳಕೆ ಹಾಗೂ ಅಂತರ್ಜಲದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಸಸ್ಯಗಳು, ಕಲ್ಲುಬಂಡೆಗಳು, ನೀರು ಮತ್ತು ಪ್ರಾಣಿ ಲೋಕದ ನಡುವಿನ ಅತ್ಯಂತ ಸೂಕ್ಷ್ಮ ಸಂಬಂಧವನ್ನು ಮಾನವ ಕುಲ ಅರ್ಥ ಮಾಡಿಕೊಳ್ಳಬೇಕಾಗಿದೆ. ಬಂಡೆಗಳ ನಡುವೆ ಬೆಳೆವ ಮಾಕಳಿ ಬೇರು, ಸೊಗದೆ ಬೇರು ಸೇರಿದಂತೆ ವಿವಿಧ ಬೇರುಗಳು ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುತ್ತವೆ. ಬೇರುಗಳು ಹೀಗೆ ನೀರನ್ನು ಹಿಡಿದಿಟ್ಟುಕೊಳ್ಳುವುದರಿಂದಲೇ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ನೀರಿನ ಬುಗ್ಗೆಗಳಿಗೆ ಕಾರಣ. ಶಿಲ, ಜಲ, ಸಸ್ಯಗಳ ನಡುವಿನ ಸಂಬಂಧವನ್ನು ಕಾಪಾಡಿದರೆ ಪ್ರಾಣಿ ಲೋಕದ ಉಳಿವಿಗೆ ಸಹಕಾರಿಯಾಗುತ್ತದೆ ಎಂದರು. ಬಿಳಿಗಿರಿರಂಗನ ಬೆಟ್ಟದಿಂದ ಆರಂಭವಾಗುವ ಗಿರಿಶ್ರೇಣಿಯ ಪ್ರತಿ 5 ಕಿಮೀಗೆ ಒಂದರಂತೆ ಬಂಡೆಗಳ ನಡುವಿನ ಕೊರಕಲು ಪ್ರದೇಶವನ್ನು ಪಾರಂಪರಿಕ ಪ್ರದೇಶ ಎಂದು ಗುರುತಿಸಿ ಅಲ್ಲಿ ಕೇವಲ ಸಸ್ಯಗಳು ಮರಗಳನ್ನು ಬೆಳೆಸಿ ಪ್ರಾಕೃತಿಕವಾಗಿ ನೀರನ್ನು ಹಿಡಿದಿಟ್ಟುಕೊಳ್ಳುವ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು.
ಹೀಗೆ ನಿರ್ಮಾಣಗೊಂಡ ಪ್ರಾಕೃತಿಕ ಚೆಕ್‌ಡ್ಯಾಂಗಳು ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದರಿಂದ ನಿರಂತರವಾಗಿ ನೀರು ಲಭ್ಯವಾಗಲಿದೆ. ಈ ನೀರು ಶುದ್ಧವಾಗಿದ್ದು, ಔಷಧೀಯ ಗುಣಗಳನ್ನು ಹೊಂದಿರುತ್ತವೆ ಎಂದರು.
ಅಮೆರಿಕಾದ ಟ್ರೆನಾ, ರಾಬಿನ್, ಬೆಂಗಳೂರಿನ ನಿವಾಸಿ ಆರ್ಜೂ ಮಿಸ್ತ್ರಿ, ಲಲಿತಾ ಮುಂತಾದ ಪ್ರವಾಸಿಗರಿಗೆ ಯಲ್ಲಪ್ಪರೆಡ್ಡಿ ರಾಮದೇವರ ಬೆಟ್ಟದ ಪ್ರಕೃತಿ, ರಣಹದ್ದುಗಳ ಬಗ್ಗೆ ಮಾಹಿತಿ ನೀಡಿದರು. ಎಸಿಎಫ್ ಕೆ. ಲಿಂಗಯ್ಯ ಹಾಜರಿದ್ದರು.