ರಾಮನಗರದಲ್ಲಿ ಶೇ.92ರಷ್ಟು ಮತದಾನ
ಕ.ಪ್ರ.ವಾರ್ತೆ ರಾಮನಗರ ಜ.5
ರಾಜ್ಯದ 2ನೇ ಪ್ರಬಲ ಒಕ್ಕಲಿಗ ಜನಾಂಗದ ಶಕ್ತಿ ಕೇಂದ್ರವೆಂದೇ ಹೆಸರಾಗಿರುವ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆಯು ಶಾಂತಿಯುತವಾಗಿ ನಡೆಯಿತು. ರಾಮನಗರದಲ್ಲಿ ಶೇ.92ರಷ್ಟು ಮತದಾನವಾಗಿದೆ. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 8ರಿಂದ ಸಂಜೆ 4 ರವರೆಗೆ ನಡೆದ ಚುನಾವಣೆಯಲ್ಲಿ ಜನಾಂಗದ ಮತದಾರರು ಉತ್ಸಾಹದಿಂದ ಮತದಾನ ಮಾಡಿದರು. ರಾಮನಗರ ತಾಲೂಕಿನಲ್ಲಿ ಒಟ್ಟು 3671 ಮತಗಳ ಪೈಕಿ 3316 ಮತಗಳು ಚಲಾವಣೆಯಾಗಿದ್ದು, ಶೇ.92ರಷ್ಟು ಮತದಾನವಾಗಿದೆ. ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಾಗಿ ರಾಮನಗರದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರಿದೇವರು, ಕೈಲಾಂಚ ಹೋಬಳಿ ಗುನ್ನೂರಿನ ಕಾಳೇಗೌಡ, ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಂಜುನಾಥ್ ಸೇರಿ 3 ಮಂದಿ ಕಣದಲ್ಲಿದ್ದರು. ಒಕ್ಕಲಿಗರ ಸಂಘದ ಒಟ್ಟು 35 ಸ್ಥಾನಗಳ ಪೈಕಿ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ವ್ಯಾಪ್ತಿಗೆ 15 ಸ್ಥಾನಗಳು ಮೀಸಲಾಗಿದ್ದು, ಸಂಘದ ಚುಕ್ಕಾಣಿ ಹಿಡಿಯಲು ಈ ಭಾಗವೇ ನಿರ್ಣಾಯಕ ಆಗಿರುವುದರಿಂದ ಚುನಾವಣೆಯು ತೀವ್ರ ಪೈಪೂಟಿಯಿಂದ ಕೂಡಿತ್ತು. ವಾರ್ಷಿಕ ಸಾವಿರ ಕೋಟಿ ರು.ಗಳಷ್ಟು ವಹಿವಾಟು ನಡೆಸುತ್ತಿದೆ ಎಂದು ಹೇಳಲಾಗುವ ಒಕ್ಕಲಿಗರ ಸಂಘಕ್ಕೆ ನಿರ್ದೇಶಕರಾಗಲು ಜಿದ್ದಿಗೆ ಬಿದ್ದಿದ್ದ ಆಕಾಂಕ್ಷಿಗಳು 15 ಸ್ಥಾನಕ್ಕೆ ಒಟ್ಟಾರೆ 140 ಮಂದಿ ಸ್ಪರ್ಧಾಕಣಕ್ಕೆ ಇಳಿದಿದ್ದರು. ಒಕ್ಕಲಿಗರ ಸಂಘದ ಚುನಾವಣೆ ನಿಮಿತ್ತ ಮತದಾನ ಕೇಂದ್ರವಾಗಿದ್ದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಅಭ್ಯರ್ಥಿಗಳ ಏಜೆಂಟರು ಹಾಗೂ ಬೆಂಬಲಿಗರು ಟೆಂಟ್ಗಳನ್ನು ಹಾಕಿಕೊಂಡು ಮತ ಚಲಾಯಿಸಲು ಬರುವ ಮತದಾರರನ್ನು ಕೈ ಕುಲುಕಿ ನಮ್ಮ ಅಭ್ಯರ್ಥಿಗೆ ಓಟು ಹಾಕಿ ಎಂದು ಮನವಿ ಮಾಡುತ್ತಾ ಕೊನೆ ಕ್ಷಣದ ಕಸರತ್ತು ನಡೆಸಿದರು. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಒಕ್ಕಲಿಗ ಸಂಘಕ್ಕೆ ಚುನಾವಣೆ ನಡೆದಿದೆ. ಜ.6ರಂದು ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಹಣೆಬರಹ ಗೊತ್ತಾಗಲಿದೆ.