ಸುದ್ದಿ ಸಂಕ್ಷೇಪ
ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಪದಾಧಿಕಾರಿಗಳ ಆಯ್ಕೆ
ಹೊಸಕೋಟೆ: ತಾಲೂಕು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖಾ ನೌಕರರ ಸಂಘದ ಪದಾಧಿಕಾರಿಗಳಾಗಿ ಕೆಳಕಂಡವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ರಾಜಣ್ಣ, ಉಪಾಧ್ಯಕ್ಷರಾಗಿ ಶಂಕರಮ್ಮ, ಗೌರವ ಅಧ್ಯಕ್ಷರಾಗಿ ಡಾ. ಸೋಮೇಶ್ ಕುಮಾರ್.ಎನ್, ಖಜಾಂಸಿಯಾಗಿ ನಾಗರಾಜ್, ಜಂಟಿಕಾರ್ಯದರ್ಶಿಯಾಗಿ ಅಂಕುಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಮುನಿಗಂಗಯ್ಯ, ಪ್ರಚಾರ ಕಾರ್ಯದರ್ಶಿಯಾಗಿ ಬಿರೇಶ್, ಉಪಕಾರ್ಯದರ್ಶಿಯಾಗಿ ಶರೀಫ್, ಸಂಘಟನೆಯ ಕಾರ್ಯದರ್ಶಿ ಶ್ರೀನಿವಾಸ್, ನಿರ್ದೇಶಕರಾಗಿ ನಾಗರಾಜ್ ರಾವ್, ವೆಂಕಟೇಶ್, ಮಂಜುಳಾ. ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಕಾರ್ಯನಿರ್ವಾಹಕ ಅಧಿಕಾರಿ ದ್ಯಾವಪ್ಪನವರು ಅಭಿನಂದನೆ ಸಲ್ಲಿಸಿದರು.
ಅವೈಜ್ಞಾನಿಕ ಕ್ರಮ: ಎಬಿವಿಪಿ
ಕನಕಪುರ: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸೆಮಿಸ್ಟರ್ ಪದ್ಧತಿಯನ್ನು ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ) ವಿದ್ಯಾರ್ಥಿಗಳಿಗೆ ಜಾರಿ ಮಾಡುತ್ತಿರುವುದು ಅವೈಜ್ಞಾನಿಕ ಕ್ರಮವಾಗಿದೆ ಎಂದು ಎಬಿವಿಪಿ ಜಿಲ್ಲಾ ಸಮಿತಿ ಸಂಚಾಲಕ ರಘುರಾಂ ಟೀಕಿಸಿದ್ದಾರೆ. ಸರ್ಕಾರದ ನೀತಿಯನ್ನು ಖಂಡಿಸಿ ನಾಳೆ ಜ.6 ರಂದು ಪ್ರತಿಭಟನಾ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಘುರಾಂ ತಿಳಿಸಿದ್ದಾರೆ. ಐಟಿಐ ಕಾಲೇಜುಗಳ ನೂತನ ಸೆಮಿಸ್ಟರ್ ನಿಯಮಾವಳಿಗಳಂತೆ ಪ್ರಥಮ ವರ್ಷದ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗೆ ಎರಡನೇ ಸೆಮಿಸ್ಟರ್‌ಗೆ ಸೇರಲು ಅವಕಾಶವಿದ್ದು ಒಂದುವೇಳೆ ಅದರಲ್ಲಿ ಅನುತ್ತೀರ್ಣಗೊಂಡರೆ ದ್ವಿತೀಯ ವರ್ಷದ ಪ್ರವೇಶಾತಿ ನಿರಾಕರಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ಅನಾನುಕೂಲವಾಗುತ್ತಿದೆ. ಅಲ್ಲದೆ ವರ್ಷಕ್ಕೊಮ್ಮೆ ಶಾಲಾ ಶುಲ್ಕ ಪಾವತಿಸುವ ಬದಲಾಗಿ ಆರು ತಿಂಗಳಿಗೊಮ್ಮೆ ವಿದ್ಯಾರ್ಥಿಗಳು ಶುಲ್ಕ ಪಾವತಿಸಬೇಕಾಗಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಸರ್ಕಾರದ ಅವೈಜ್ಞಾನಿಕ ನೀತಿಯನ್ನು ಖಂಡಿಸಿ ಹೋರಾಟ ನಡೆಸುತ್ತಿರುವುದಾಗಿ ರಘುರಾಂ ತಿಳಿಸಿದ್ದಾರೆ.
ಶಿವಬಸವೇಗೌಡರಿಗೆ ಸನ್ಮಾನ
ಕನಕಪುರ: ಕನಕಪುರದ ರೋಟರಿ ಸಂಸ್ಥೆ ವತಿಯಿಂದ ರೂರಲ್ ಪದವಿ ಕಾಲೇಜಿನ ನೂತನ ಪ್ರಾಂಶುಪಾಲರಾದ ಡಾ.ಶಿವಬಸವೇ ಗೌಡ ಅವರನ್ನು ಅಧ್ಯಕ್ಷ ಸಿ. ವಿಜಯ್ ಆತ್ಮೀಯವಾಗಿ ಸನ್ಮಾನಿಸಿದರು. ರೋಟರಿ ಟ್ರಸ್ಟ್ ಅಧ್ಯಕ್ಷ ವಿಜಯದೇವ್, ಕಾರ್ಯದರ್ಶಿ ಮೋಹನದಾಸ್, ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಸಿ.ಎಸ್.ನಾಗರಾಜ, ಭಾನುಪ್ರಕಾಶ್, ರಾಜು ಭೈರೇಗೌಡ ಪಾಲ್ಗೊಂಡಿದ್ದರು.
ಗಣಿಗಾರಿಕೆಯಿಂದ ಆತಂಕ: ಪ್ರತಿಭಟನೆ
ಮಾಗಡಿ: ವೆಂಗಳಪ್ಪನಹಳ್ಳಿ ಬಳಿ ಗಣಿಗಾರಿಕೆಯಿಂದ ಮನೆ, ದೇವಾಲಯಗಳಿಗೆ ಆಗುತ್ತಿರುವ ನಷ್ಟವನ್ನು ತಡೆಯುವಂತೆ ತಿರುಮಲೆ ಗ್ರಾಮಸ್ಥರು ಹಾಗೂ ದಲಿತ ಕಾಲೋನಿ ಕುರುಬರ ಬೀದಿ ನಿವಾಸಿಗಳು ವೆಂಗಳಪ್ಪನಹಳ್ಳಿ ತಾಂಡ್ಯವರೆಗೆ ಜಾಥಾ ನಡೆಸಿ ಕ್ರಷರ್ ಮುಂದೆ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರ ದಾಳಿಯಿಂದಾಗಿ ಕಂಗಾಲದ ಕಲ್ಲು ಗಣಿ ಮಾಲೀಕ ಮತ್ತು ಕ್ರಷರ್‌ನಲ್ಲಿ ದುಡಿಯುತ್ತಿರುವ ಕಾರ್ಮಿಕರು ಕಲ್ಲು ಕ್ರಷರ್ ಕೆಲಸ ಸ್ಥಗಿತಗೊಳಿಸಿ ಪಲಾಯನ ಮಾಡಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಪುರಸಭೆ ಮಾಜಿ ಅಧ್ಯಕ್ಷ ರಂಗಹನುಮಯ್ಯ ಮಾತನಾಡಿ ಇಲ್ಲಿ 8 ಕ್ರಷರ್‌ಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಇಲ್ಲಿ ಭಾರಿ ಸ್ಫೋಟಕ ಬಳಿಸಿ ಸಿಡಿಮದ್ದು ಸಿಡಿಸಲಾಗುತ್ತಿದೆ. ಇದರಿಂದ ಪ್ರಸಿದ್ಧ ದೇವಾಲಯಗಳಿಗೆ ಹಾಗೂ ಮನೆ, ಕೊಳವೆ ಬಾವಿ, ಬೆಳೆಗಳಿಗೆ ಹಾನಿಯಾಗುತ್ತಿದೆ. ದಲಿತ ಕಾಲೋನಿಯ ಬಹುತೇಕ ಮನೆಗಳು ಬಿರುಕು ಬಿಟ್ಟಿದೆ. ಆದ್ದರಿಂದ ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿದರು. ತಿರುಮಲೆ ಬೈರಪ್ಪ, ನೀಲಕಂಠ ಇತರರು ಮಾತನಾಡಿ ಅಕ್ರಮ ಗಣಿಗಾರಿಕೆಯಿಂದ ಸಿಡಿಯುವ ಕಲ್ಲುಗಳು ರೈತರ ಹೊಲ, ಗದ್ದೆಗಳ ಮೇಲೆ ಬಿದ್ದು, ಬೆಳೆಗಳು ನಾಶವಾಗುತ್ತಿದೆ ಎಂದು ಆರೋಪಿಸಿದರು. ತಿರುಮಲೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.