ಸುದ್ದಿ ಸಂಕ್ಷೇಪ
ಆಹಾರ ಸುರಕ್ಷತೆ, ಗುಣಮಟ್ಟ ಕಾಯ್ದೆ ಜಾರಿ
ರಾಮನಗರ: ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಲ್ಲೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಅನ್ನು 2011ನೇ ಆಗಸ್ಟ್ನಿಂದ ಜಾರಿಗೆ ತಂದಿದೆ. ಇದರನ್ವಯ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಪರವಾನಗಿ ಪಡೆಯದೇ ಆಹಾರ ವಸ್ತುಗಳ ವ್ಯಾಪಾರ ವಹಿವಾಟು ನಡೆಸುವಂತಿಲ್ಲ.
ಎಲ್ಲಾ ಆಹಾರ ವಸ್ತುಗಳ ಉತ್ಪಾದಕರು, ಪ್ಯಾಕರ್ಗಳು, ಸಗಟು ವ್ಯಾಪಾರಿಗಳು, ವಿತರಕರು ಮತ್ತು ಮಾರಾಟಗಾರರು, ಹೋಟಲ್ಗಳು, ರೆಸ್ಟೋರೆಂಟ್ಗಳು, ಕ್ಲಬ್ಗಳು, ಕ್ಯಾಂಟೀನ್ಗಳು, ಕ್ಯಾಟರಿಂಗ್ ವ್ಯವಹಾರ ಮಾಡುವವರು. ಆಹಾರ ವಸ್ತುಗಳ ಸಾಗಾಣೆ ದಾರರು, ಆಹಾರ ಉಗ್ರಾಣ ಸಂಘಟನೆಗಳು, ಆಹಾರ ಸಂಸ್ಕರಣಾ ಘಟಕಗಳು, ಆಹಾರ ವಸ್ತುಗಳ ಆಮದುದಾರರು, ಶೇ.100 ಆಹಾರ ವಸ್ತುಗಳ ರಫ್ತು ಘಟಕಗಳು ಈ ಕಾಯ್ದೆಯ ವ್ಯಾಪ್ತಿಗೊಳಪಡುವರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಕಾಯ್ದೆಯ ಪ್ರಕಾರ ಫೆ.4 ರೊಳಗೆ ಪರವಾನಗಿ ಅಥವಾ ನೊಂದಣಿ ಪಡೆದುಕೊಳ್ಳಬೇಕಿದೆ. ತಪ್ಪಿದ್ದಲ್ಲಿ ರು.5 ಲಕ್ಷ ದಂಡ ಮತ್ತು 6 ತಿಂಗಳ ಸೆರೆವಾಸ ವಿಧಿಸಲಾಗುತ್ತದೆ.
ಫೆ.4ರ ನಂತರ ಪರವಾನಗಿ ರಹಿತ ಆಹಾರ ವಸ್ತುಗಳ ವ್ಯವಹಾರವು ಕಾನೂನು ಬಾಹಿರವಾಗಿರುತ್ತದೆ. ನಿಗದಿಪಡಿಸಿರುವ ಅಂತಿಮ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ. ಜಿಲ್ಲೆಯ 4 ತಾಲೂಕುಗಳಲ್ಲಿನ ಆಹಾರ ವಸ್ತುಗಳ ಯಾವುದೇ ರೀತಿಯ ವಹಿವಾಟುದಾರರು ಈ ಕಾಯ್ದೆಯಡಿಗೆ ಬರುವರು. ಈ ಹಿನ್ನೆಲೆಯಲ್ಲಿ ನೋಂದಣಿ ಮತ್ತು ಪರವಾನಗಿ ಪಡೆಯಲು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣ, ರಾಮನಗರ ಅಥವಾ ದೂ.7411340333 ಹಾಗೂ ಆಯಾ ತಾಲೂಕಿನ ಆಹಾರ ಸುರಕ್ಷತಾ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ವಿಭಾಗದ ಅಂಕಿತ ಅಧಿಕಾರಿ ತಿಳಿಸಿದ್ದಾರೆ.
ಯೋಗ ಪ್ರಚಾರಕ್ಕೆ ಸರ್ಕಾರ ಕೈ ಜೋಡಿಸಲಿ
ಆನೇಕಲ್ಲು: ಯೋಗ ಅಭ್ಯಾಸದಿಂದ ಜನರಲ್ಲಿ ಆರೋಗ್ಯ ವೃದ್ಧಿಯಾಗಿ ಸಕಾರಾತ್ಮಕ ಭಾವನೆಗಳು ಮೂಡುತ್ತವೆ. ಆಧ್ಯಾತ್ಮಿಕ ಚಿಂತನೆಗಳ ಮೇಳೈಸಿದ ಯೋಗ ಕಲಿಕೆಯಿಂದಾಗುವ ಉಪಯೋಗ ಸಾರಲು ಸರ್ಕಾರವು ನೆರವು ಹಾಗೂ ಸಹಕಾರ ನೀಡಬೇಕೆಂದು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಕೋರಿದ್ದಾರೆ.
ಅವರು ಬೆಂಗಳೂರು ದಕ್ಷಿಣ ಜಿಗಣಿಯ ಕೇಂದ್ರದಲ್ಲಿ ಏರ್ಪಡಿಸಿದ್ದ 20ನೆಯ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಮಾತಾಡಿ ಜನರ ಹಾಗೂ ಸಮಾಜದ ಆರೋಗ್ಯದ ದೃಷ್ಟಿಯಿಂದ ಸರ್ಕಾರವು ನೂತನ ಯೋಜನೆಯನ್ನು ಜಾರಿಗೆ ತರಬೇಕಿದೆ ಎಂದರು.
ಮಧು ಮೇಹ ತಹಬಂದಿಗೆ: ಇಂದಿನ ಒತ್ತಡದ ವಾತಾವರಣದಲ್ಲಿ ಚಿಕ್ಕ ವಯಸ್ಸಿನಲ್ಲೇ ಮಧುಮೇಹದಂತಹ ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿದ್ದು ಇದರ ನಿಯಂತ್ರಣ ಮತ್ತು ದೇಹದ ಮೇಲಿನ ದುಷ್ಪರಿಣಾಮ ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿದೆ. ದೇಶ ವಿದೇಶಗಳ ತಜ್ಞರ ಸಮಾವೇಶದಲ್ಲಿ ಪರಿಹಾರ ಮಾರ್ಗ
ಸೂತ್ರಗಳು ಹಾಗೂ ನೂತನ ಆವಿಷ್ಕಾರಗಳನ್ನು ಅರಿಯುವ ಉತ್ತಮ ವೇದಿಕೆಯಾಗಿ ವ್ಯಾಸ ಕೆಲಸ ನಿರ್ವಹಿಸುತ್ತಿದೆ ಎಂದರು.
ಭಾರತ ದೇಶದಲ್ಲಿ ಇತರ ದೇಶಗಳಿಗೆ ಹೋಲಿಸಿದಲ್ಲಿ ಮಧುಮೇಹಿಗಳ ಅನುಪಾತ ಹೆಚ್ಚಾಗಿದ್ದು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡಿದಲ್ಲಿ ದೇಶವನ್ನು ಮಧುಮೇಹ ಮುಕ್ತ ನೆಲವಾಗಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿಚಾರ ಸಂಕಿರಣದಲ್ಲಿ ಆಯುಷ್ ಇಲಾಖೆ ನಿದೇಶಕ ವಿಜಯ್ಕುಮಾರ್ ಗೋಗಿ, ಪೋರ್ಚುಗಲ್ ಯೋಗ ಗುರು ಅಮೃತ ಸೂರ್ಯ ಮಹರಾಜ್, ಕೋಲ್ಕತ್ತಾದ ದಿವ್ಯಾನಂದಜಿ, ಹಾರ್ವರ್ಡ್ ಸ್ಕೂಲ್ ಆಪೆ ಮೆಡಿಸಿನ್ನ ಡಾ. ಸತ್ಬೀರ್ ಖಲ್ಸಾ, ಜರ್ಮನಿಯ ಕ್ರಿಸ್ಟೋಪರ್, ಡಾ. ದೇಶಪಾಂಡೆ, ಡಾ. ಎಚ್. ಆರ್. ನಾಗರತ್ನ ಮತ್ತು ಡಾ. ಸುಬ್ರಹ್ಮಣ್ಯ ಇದ್ದರು.
ದೇವನಹಳ್ಳಿ: ಲಯನೆಸ್ ಸಂಸ್ಥೆಯ 13ನೇ ವಾಷಿಕೋತ್ಸವ
ದೇವನಹಳ್ಳಿ: ಇಲ್ಲಿನ ಲಯನೆಸ್ ಸಂಸ್ಥೆಯ 13 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿವಿಧ ಸೇವಾ ಕಾರ್ಯಗಳನ್ನು ಅಲ್ಲದೆ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭವನ್ನು ಇಲ್ಲಿನ ಲಯನ್ ಸೇವಾ ಭವನದಲ್ಲಿ ಭಾನುವಾರ ಆಯೋಜಿಸಲಾಗಿತ್ತು.
ಸಮಾರಂಭದ ಉದ್ಘಾಟನೆಯನ್ನು ಲಯನೆಸ್ ಜಿಲ್ಲಾ ಅಧ್ಯಕ್ಷ ಎಂ.ಬಿ. ದೀಪಕ್ ಸುಮನ್ ನೆರವೇರಿಸಿ ಈ ಸಂಸ್ಥೆಯ ಅಧ್ಯಕ್ಷೆ ಪದ್ಮಾವತಮ್ಮ ತಮ್ಮ ಕುಟುಂಬದ ಎಲ್ಲ ಸದಸ್ಯರ ಸಹಕಾರದೊಂದಿಗೆ ಸಂಸ್ಥೆಯ ಸದಸ್ಯರೊಂದಿಗೆ ಅನೇಕ ಸೇವಾಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನೀಯ ಎಂದರು.
ಇದೇ ಸಂರ್ಭದಲ್ಲಿ ಲಯನೆಸ್ ಸಂಸ್ಥೆ ಸುಧಾಪತ್ರೆ ಮಾತನಾಡಿ ಇಲ್ಲಿನ ಲಯನ್ಸ್ ಮತ್ತು ಲಯನೆಸ್
ಸಂಸ್ಥೆಯವರು ನಿರಂತರವಾಗಿ ಸೇವಾ ಕಾರ್ಯಗಳನ್ನು ಗ್ರಾಮೀಣ ಭಾಗದ ಜನರಿಗಾಗಿ ಮಾಡುತ್ತಿರುವುದು ಅಭಿನಂದನೀಯ ಎಂದರು. ಇಂತಹ ಸೇವಾ ಕಾರ್ಯಗಳನ್ನು ದಾನಿಗಳ ಸಹಕಾರ ಪಡೆದು ಮುನ್ನಡೆಸಬೇಕು ಎಂದರು.
ಜಿಲ್ಲಾ ಲಯನೆಸ್ ಸಂಸ್ಥೆಯ ಸುಮಾ ಗಣೇಶ್, ಪ್ರಭಾವತಿ ಪ್ರಕಾಶ್, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಆರ್.ನಾಗರಾಜಯ್ಯ, ಮಾಜಿ ಅಧ್ಯಕ್ಷ ಎ. ಚಂದ್ರಪ್ಪ ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ಶಿಕ್ಷಕಿಯರಾದ ಗೀತಾ ಮತ್ತು ಸುನಂದ ಅವರನ್ನು ಸನ್ಮಾನಿಸಲಾಯಿತು. ಪದ್ಮಾವತಮ್ಮ ಮುನಿರಾಜು ಅಧ್ಯಕ್ಷತೆ ವಹಿಸಿದ್ದರು. ಬಡ ಮಹಿಳೆಯರಿಗೆ ಸುಮಾರು1.74 ಲಕ್ಷ ರು. ಬೆಲೆಯ ದಿನಬಳಕೆ ಪರಿಕರಗಳನ್ನು ವಿತರಿಸಲಾಯಿತು. ಕಾರ್ಯರ್ಶಿ ಕಲ್ಪನಾ ವಿಶ್ವನಾಥ್ ವರದಿ ನೀಡಿದರು. ಖಜಾಂಚಿ ನಿರ್ಮಲಕುಮಾರಿ ವಂದನೆ ಅರ್ಪಿಸಿದರು.