ಆರ್ಥಿಕ ಸಬಲತೆ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ಸ್ಥಾನಮಾನ
ಚನ್ನಪಟ್ಟಣ: ಆರ್ಥಿಕ ಸಬಲತೆ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ಹೆಚ್ಚಿನ ಸ್ಥಾನಪಡೆದು ಇತರರಿಗೆ ಸರಿಸಮಾನವಾಗಿ ಜೀವನ ನಡೆಸ ಬಹುದು ಎಂದು ನಬಾರ್ಡ್‌ನ ಸಹಾಯಕ ಮಹಾಪ್ರಬಂಧಕ ಸಿ.ವಸಂತ್ ಕುಮಾರ್ ಹೇಳಿದರು.
ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ನಬಾರ್ಡ್, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ವತಿಯಿಂದ ಜರುಗಿದ ಆರ್ಥಿಕ ಸಾಕ್ಷರ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಜೀವನದಲ್ಲಿ ಆರ್ಥಿಕವಾಗಿ ಸದೃಢ ಬೆಳವಣಿಗೆ ಕಾಣಲು ಹಲವು ಮಾರ್ಗೋಪಾಯವನ್ನು ಜನತೆ ಕಂಡುಕೊಳ್ಳಬೇಕಾಗಿದೆ.
ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳು ದುಡಿಯುವುದು ಸಾಮಾನ್ಯವಾದ ವಿಚಾರವಾಗಿದ್ದರೂ ಉಳಿತಾಯದ ಮನೋಭಾವ ಇಲ್ಲದಿರುವುದು ವಿಷಾದನೀಯ. ಗ್ರಾಮೀಣ ಪ್ರದೇಶದ ಪ್ರತಿ ಪ್ರಜೆಯು ಆರ್ಥಿಕ ಸಾಕ್ಷರತೆಯ ಅರಿವು ಪಡೆದುಕೊಳ್ಳಬೇಕು ಎಂದುರು. ನಬಾರ್ಡ್ ಹಾಗೂ ವಾಣಿಜ್ಯ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಯನ್ವಯ ಹಿಂದುಳಿದ ಜನರಿಗೆ ಬ್ಯಾಂಕ್‌ಗಳಲ್ಲಿ ಶೂನ್ಯ ಮೊತ್ತದಿಂದ ಉಳಿತಾಯ ಖಾತೆ ಪ್ರಾರಂಭಿಸಲು ಅವಕಾಶ ನೀಡಿದೆ.
ಹಣ ಗಳಿಸಲು ಬಡವರು ಮತ್ತು ಕೆಳ ಮಧ್ಯಮ ವರ್ಗದ ಕುಟುಂಬದವರಿಗೆ ಪಿಗ್ಮಿ ಯೋಜನೆ ವರದಾನವಾಗಿದೆ. ಆರೋಗ್ಯ ವಿಮೆ ಕೂಡ ರೈತರಿಗೆ ವರದಾನವಾಗಿದ್ದು, ಈ ಯೋಜನೆಗಳ ಬಗ್ಗೆ ಜನತೆ ಜಾಗೃತಿ ಹೊಂದಬೇಕು ಎಂದು ತಿಳಿಸಿದರು.
ಸ್ವ ಸಹಾಯ ಸಂಘಗಳ ಬಲವರ್ಧನೆ ಹಾಗೂ ನಬಾರ್ಡ್ ಪ್ರವರ್ಧಮಾನಕ್ಕೆ ತಂದಿರುವ ಜಂಟಿ ಬಾಧ್ಯತಾ ಗುಂಪುಗಳು ಮತ್ತು ರೈತಕೂಟಗಳು ಆರ್ಥಿಕ ಸೇರ್ಪಡೆಗೆ ಪೂರಕವಾದ ಕಾರ್ಯಕ್ರಮಗಳಾಗಿವೆ ಎಂದರು.
ಕಾರ್ಪೊರೇಷನ್ ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕ ನಾರಾಯಣಮೂರ್ತಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ನೌಕರರಿಗೆ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ 2006ರಿಂದ ನೂತನ ಪಿಂಚಣಿ ಯೋಜನೆಯನ್ನು ಆರಂಭಿಸಿದೆ. ವಾಣಿಜ್ಯ ಬ್ಯಾಂಕ್‌ಗಳು ಹಲವು ಕಾರ್ಯಕ್ರಮಗಳನ್ನು ಆರ್ಥಿಕ ಸಾಕ್ಷರತೆಗೆ ಪೂರಕವಾಗುವ ಕಾರ್ಯಕ್ರಮವಾಗಿ ರೂಪಿಸಿದ್ದು, ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲಿ ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೇಶ್, ಅಸ್ಸಾಂನ ಕಿಟ್ಟಿಮಾನ್, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು. ನಂತರ ಬ್ಯಾಂಕ್‌ನ ಅಧಿಕಾರಿಗಳೊಂದಿಗೆ ರೈತರು ಸಂವಾದ ನಡೆಸಿ. ಪರಿಸರ ಸಂಸ್ಥೆಯಿಂದ ಬೀದಿ ನಾಟಕ ಹಾಗೂ ಗೋಡೆ ಬರಹದ ಮೂಲಕ ಆರ್ಥಿಕ ಸಾಕ್ಷರತೆ ಕುರಿತು ಅರಿವು ಮೂಡಿಸಲಾಯಿತು.