ಕಳಂಕಿತರು ಸಂಪುಟಕ್ಕೆ: ಆಕ್ರೋಶ
ಕ.ಪ್ರ.ವಾರ್ತೆ ರಾಮನಗರ ಜ.6
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂಪುಟದಲ್ಲಿ ಕಳಂಕಿತರಿಗೆ ಸ್ಥಾನ ಕಲ್ಪಿಸಿರುವುದನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್ ಮತ್ತು ಆರ್. ರೋಷನ್ ಬೇಗ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಿದೆ ಪರಿಶುದ್ಧತೆ: ಕಳಂಕಿತರನ್ನು ಹೊರಗಿಟ್ಟು, ಪರಿಶುದ್ಧ ಮಂತ್ರಿ ಮಂಡಲ ರಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ವಾಗ್ದಾನ ನೀಡಿದ್ದರು. ಮಂತ್ರಿ ಮಂಡಲದಲ್ಲಿ ಈಗೆಲ್ಲಿದೆ ಪರಿಶುದ್ಧತೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಅಕ್ರಮ ಗಾಣಿಗಾರಿಕೆ ವಿರುದ್ಧ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಈಗ ಅದೇ ಅಕ್ರಮ ಗಣಿಗಾರಿಕೆ ಸಂಬಂಧ ಗಂಭೀರ ಆರೋಪಗಳನ್ನು ಹೊತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿರುವುದನ್ನು ಅವರು ಟೀಕಿಸಿದರು.
ನಿರಂತರ ಹೋರಾಟ: ಶತಮಾನದ ಇತಿಹಾಸವಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಸೈದ್ಧಾಂತಿಕ ನೆಲೆಗಟ್ಟಿಲ್ಲ. ಭ್ರಷ್ಟರು, ಕಳಂಕಿತರೇ ಆ ಪಕ್ಷದ ಆಸ್ತಿಯಾಗಿದ್ದಾರೆ. ಕಾಂಗ್ರೆಸ್ ಧೋರಣೆಯಿಂದ ರೋಸಿ ಹೋಗಿರುವ ಮತದಾರರು ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷಕ್ಕೆ ತಕ್ಕಪಾಠ ಕಲಿಸುವರು ಎಂದು ಪ್ರತಿಭಟನಾಕಾರರು ತಿಳಿಸಿದರು.
ಕಳಂಕಿತರನ್ನು ಸಂಪುಟದಿಂದ ಕೈಬಿಡುವವರೆಗೂ ಬಿಜೆಪಿ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಅವರು ಎಚ್ಚರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ನಾಗರಾಜು, ಶಿವಮಾದು, ಎಸ್.ಆರ್. ನಾಗರಾಜು, ಪದ್ಮನಾಭ, ರವಿಕುಮಾರಗೌಡ, ಮಂಜು, ನವೀನ್, ಮುರಳಿ, ರುದ್ರದೇವರು, ಸತೀಶ್, ನೇರಳೂರು ನಾಗರಾಜು, ರಾಮಾಂಜನೇಯ, ಕೃಷ್ಣಪ್ಪ, ಗೋಪಾಲ್ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.
ಕಾಂಗ್ರೆಸ್ ಇಬ್ಬಗೆ ನೀತಿ
ಆರೋಪ ಬಂದ ಕೂಡಲೇ ಸಂತೋಷ್ ಲಾಡ್ ಅವರಿಂದ ಸಚಿವ ಸ್ಥಾನಕ್ಕೆ ರಾಜಿನಾಮೆ ಪಡೆದುಕೊಂಡ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಕಳಂಕಿತರಿಗೆ ಮಣೆ ಹಾಕುವ ಮೂಲಕ ವಚನಭ್ರಷ್ಟರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಡಿ.ಕೆ.ಶಿವಕುಮಾರ್ ಅವರಷ್ಟೇ ಗಂಭೀರ ಆರೋಪವನ್ನು ರೋಷನ್ ಬೇಗ್ ಕೂಡ ಹೊಂದಿದ್ದಾರೆ. ಜಾತಿ ಲೆಕ್ಕಾಚಾರ, ಮತಗಳಿಗೆ ತಂತ್ರದಿಂದ ಭ್ರಷ್ಟರಿಬ್ಬರಿಗೂ ಸ್ಥಾನ ಕಲ್ಪಿಸಿ ತನ್ನ ಮಾತಿಗೂ ಕೃತಿಗೂ ಅಜಗಜಾಂತರ ಎನ್ನುವುದನ್ನು ಕಾಂಗ್ರೆಸ್ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು.