ಕಾಡಾನೆ, ಚಿರತೆ, ಕರಡಿಗಳ ಕಾಟದಿಂದ ಸುಸ್ತೋ ಸುಸ್ತು
ಕ.ಪ್ರ.ವಾರ್ತೆ ನೆಲಮಂಗಲ ಜ.6
ಕಳೆದ ಎರಡೂವರೆ ತಿಂಗಳಿಂದಲೂ ಕಾಡಾನೆ, ಚಿರತೆ, ಕರಡಿಗಳ ಕಾಟದಿಂದ ತಾಲೂಕಿನ ಸೋಂಪುರ ಹೋಬಳಿಯ 50ಕ್ಕೂ ಹೆಚ್ಚಿನ ಹಳ್ಳಿಗಳ ರೈತರ ಜೀವನವೇ ದುಸ್ಥರವಾಗಿದೆ.
ವೀರಸಾಗರ ಗ್ರಾಮದಲ್ಲಿ ಒಂಟಿ ಸಲಗದ ದಾಳಿಯಿಂದ ದುರ್ಗಯ್ಯ, ಸಿದ್ದಗಂಗಯ್ಯ, ಗಿರೀಶ್, ಕೆಂಪನರಸಯ್ಯ ಮತ್ತು ಚಂದ್ರಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ರಾಗಿ, ಬತ್ತಸೇರಿದಂತೆ ತೋಟದ ಬೆಳೆಗಳನ್ನು ತಿಂದು ಹಾಳು ಮಾಡಿದೆ. ದುರ್ಗಯ್ಯ ಅವರ ತೋಟದಲ್ಲಿನ ಕೊಳವೆ ಬಾವಿಯ ವಸ್ತುಗಳನ್ನು ಮುರಿದು ಹಾಕಿದೆ. ಇದರಿಂದ ಎರಡು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಬೆಳೆಯನ್ನು ತಿಂದು ತುಳಿದು ಹಾಳು ಮಾಡಿರುವುದು ಅಲ್ಲದೆ ಆಸ್ತಿ ಪಾಸ್ತಿ ಮರ ಮಟ್ಟುಗಳನ್ನು ಹಾಳು ಮಾಡುತ್ತಿರುವುದರಿಂದ ಎಲ್ಲಾ ವರ್ಗದ ಜನರ ಬದುಕು ದಿನೇ ದಿನೆ ದುಸ್ಥರವಾಗುತ್ತಿದೆ.
ದೇವರಹೊಸಹಳ್ಳಿ, ಕಾಮಲಾಪುರ, ಸೀಗೆಪಾಳ್ಯ, ನಾರಾಯಣಪುರ, ವೀರಸಾಗರ, ಗೊಲ್ಲರಹಟ್ಟಿ, ಕೆಂಗಲ್, ಬೀರಗೊಂಡನಹಳ್ಳಿ, ಶ್ರೀಪತಿಹಳ್ಳಿ, ಕಲ್ಲಳ್ಳಯ್ಯನ ಪಾಳ್ಯ, ಮಾಗಡಯ್ಯನ ಪಾಳ್ಯ, ಹುರಿಯಪ್ಪನಪಾಳ್ಯ, ಕಂಬಾಳು, ಘಂಟೆಹೊಸಹಳ್ಳಿ, ಗೆದ್ದಲಹಳ್ಳಿ, ಮಾಚನಹಳ್ಳಿ ಕಾಲೋನಿ ಸೇರಿದಂತೆ ಇನ್ನು ಹತ್ತಾರು ಹಳ್ಳಿಗಳ ರೈತರ ಸ್ಥಿತಿ ಹೀನಾಯವಾಗಿದೆ.
ಕಾಡಾನೆಗಳ ದಾಳಿ ಕಳೆದ ಏಳೆಂಟು ವರ್ಷದಿಂದ ನಡೆಯುತ್ತಿದ್ದು ಕಳೆದ ವರ್ಷಗಳಲ್ಲಿ ಬೆಳೆ ನಷ್ಟವಾಗಿದ್ದಕ್ಕೆ ಇನ್ನು ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಸಿಕ್ಕರೂ ಬೆಳೆ ನಷ್ಟದ ಐದರಷ್ಟಾದರೂ ಸರ್ಕಾರ ಪರಿಹಾರ ನೀಡಿಲ್ಲ. ಇನ್ನು ಈಗ ಆಗಿರುವ ನಷ್ಟಕ್ಕೆ ಪೋಟೋ, ಪಹಣಿ, ಖಾತೆ ಎಂದು ಹಲವಾರು ದಾಖಲೆಗಳನ್ನು ನೀಡಲು ನೂರಾರು ರೂಪಾಯಿಗಳು ನಷ್ಟವಾಗುತ್ತದೆ. ಅದಕ್ಕಾಗಿ ದೂರು ನೀಡಲು ನಾವು ಮುಂದಾಗುತ್ತಿಲ್ಲ. ಮಾವಿನ ಮರ ಆನೆಯಿಂದ ಹಾಳಾದರೆ ಅದಕ್ಕೆ ತೋಟಗಾರಿಕೆ ಇಲಾಖೆಯ ವತಿಯಿಂದ ಬೆಳೆ ಮತ್ತು ಮರದ ನಷ್ಟಕ್ಕೆ ಪರಿಹಾರ ಸಿಗುವುದಿಲ್ಲ ಎಂದು ರೈತರಿಗೆ ಹಿಂಬರಹದಲ್ಲಿ ನೀಡಿರುವುದರಿಂದ ರೈತರು ತಮ್ಮ ಎಷ್ಟೇ ಬೆಳೆ ನಷ್ಟವಾದರೂ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಇವರಿಗೆ ಕಣ್ಣೀರೇ ಪರಿಹಾರವಾಗಿದೆ.