ಘಾಟಿ ಸುಬ್ರಹ್ಮಣ್ಯದಲ್ಲಿ ಸಂಭ್ರಮದ ಬ್ರಹ್ಮರಥೋತ್ಸವ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ ಜ.6
ರಾಜ್ಯದ ಸುಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಸೋಮವಾರ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಮಂದಿ ಭಕ್ತಾದಿಗಳು ಶ್ರೀಸ್ವಾಮಿಗೆ ಹಣ್ಣು-ಧವನ ಅರ್ಪಿಸಿ ಭಕ್ತಿಭಾವ ಮೆರೆದರು.
ಪ್ರಸಿದ್ಧ ನಾಗದೇವತಾ ಆರಾಧನಾ ಕ್ಷೇತ್ರವಾಗಿರುವ ಘಾಟಿಯಲ್ಲಿ ಪ್ರತಿವರ್ಷ ಸುಬ್ರಹ್ಮಣ್ಯ ಷಷ್ಟಿಯ ಅಂಗವಾಗಿ ರಥೋತ್ಸವ ನಡೆದುಕೊಂಡು ಬರುತ್ತಿದೆ. ಮುಜರಾಯಿ ಇಲಾಖೆ ಮತ್ತು ಭಕ್ತಾದಿಗಳ ಸಹಯೋಗದಲ್ಲಿ ನಡೆದ ಶ್ರೀಸ್ವಾಮಿಯ ಪೂಜಾ ವಿಧಿವಿಧಾನಗಳು ಮತ್ತು ವೈಭವದ ಉತ್ಸವಗಳು ಭಕ್ತಾದಿಗಳ ಮನಸೂರೆಗೊಂಡವು. ದೇವಾಲಯದಲ್ಲಿ ಈ ಬಾರಿ ವ್ಯವಸ್ಥಿತವಾಗಿ ದರ್ಶನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸುಮಾರು 7 ಶತಮಾನಗಳ ಹಿಂದು ಸಂಡೂರು ಘೋರ್ಪಡೆ ಸಂಸ್ಥಾನದ ಮಹಾರಾಜರುಗಳಿಂದ ಸ್ಥಾಪಿತವಾದ ಶ್ರೀಕ್ಷೇತ್ರದಲ್ಲಿ ಇಂದಿಗೂ ಭಕ್ತಿಪರಂಪರೆ ಉಳಿದುಕೊಂಡು ಬಂದಿದೆ. ಕಾಲ ಕಾಲಕ್ಕೆ ತಕ್ಕಂತೆ ಮಾರ್ಪಾಟುಗಳಾಗುತ್ತಿದ್ದರೂ ಭಕ್ತಿಭಾವಕ್ಕೆ ಮಾತ್ರ ಎಲ್ಲೆಯಿಲ್ಲ. ರಾಜ್ಯದ ವಿವಿಧ ಮೂಲೆಗಳಿಂದ ಮತ್ತು ಹೊರರಾಜ್ಯಗಳಿಂದ ಕೂಡ ಇಲ್ಲಿಗೆ ಭಕ್ತಾದಿಗಳು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಶ್ರೀಕ್ಷೇತ್ರದಲ್ಲಿ ಎಲ್ಲೆಡೆಯೂ ಜನಜಾತ್ರೆ ಕಂಡುಬರುತ್ತಿತ್ತು. ಸೋಮವಾರ ಮಧ್ಯಾಹ್ನ 12.30ರ ಶುಭಮುಹೂರ್ತದಲ್ಲಿ ರಥೋತ್ಸವ ಜರುಗಿತು.
ಶ್ರೀಸ್ವಾಮಿಗೆ ವಿಶೇಷಾಲಂಕಾರ: ರಥೋತ್ಸವದ ಅಂಗವಾಗಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ಸಹಿತ ಒಂದೇ ಶಿಲೆಯಲ್ಲಿ ಮೂಡಿರುವ ಅಪರೂಪದ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷಾಲಂಕಾರ ಮಾಡಲಾಗಿತ್ತು. ಮುಮ್ಮುಖವಾಗಿ ಶ್ರೀಸುಬ್ರಹ್ಮಣ್ಯನಾಗಿ ಅವತರಿಸಿರುವ ಶ್ರೀಸ್ವಾಮಿ ತನ್ನ ಬೆನ್ನ ಮೇಲೆ ನರಸಿಂಹಸ್ವಾಮಿಯನ್ನೂ ಹೊತ್ತಿರುವುದು ವಿಶೇಷ. ಪುಷ್ಪಾಲಂಕೃತ ಶ್ರೀಸ್ವಾಮಿಗೆ ಭಕ್ತಾದಿಗಳು ಭಕ್ತಿಭಾವದಿಂದ ಪೂಜಿಸಿ ಧನ್ಯತಾಭಾವ ಪ್ರದರ್ಶಿಸಿದರು.
ನಾಗಶಿಲೆಗಳಿಗೆ ಪೂಜೆ: ಇನ್ನು ಶ್ರೀಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಸಾವಿರಾರು ನಾಗಶಿಲೆಗಳಿಗೆ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿತ್ತು.
ತರಾವರಿ ಜಾತ್ರೆ: ಈ ಬಾರಿಯ ಜಾತ್ರೆಯಲ್ಲಿ ರೇಷ್ಮೆ ಇಲಾಖೆ, ಕೈಮಗ್ಗ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ವಸ್ತುಪ್ರದರ್ಶನ ಮಳಿಗೆಗಳು ಗಮನ ಸೆಳೆದವು. ಇನ್ನು ತರಾವರಿ ಮಿಠಾಯಿ ಅಂಗಡಿಗಳು, ಬೆಂಡು-ಬತ್ತಾಸು, ಕಲ್ಯಾಣಸೇವೆ ಜಾತ್ರಾರ್ಥಿಗಳನ್ನು ಸೆಳೆದವು. ಈ ಬಾರಿ ಬ್ರಹ್ಮರಥೋತ್ಸವಕ್ಕೆ ವಿಶೇಷ ಬಸ್‌ವ್ಯವಸ್ಥೆಯನ್ನು ಎಂದಿನಂತೆ ಕಲ್ಪಿಸಲಾಗಿತ್ತು. ದೊಡ್ಡಬಳ್ಳಾಪುರ, ಬೆಂಗಳೂರಿನ ಕಾವೇರಿಭವನ, ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆಗಳಿಂದ ಬಸ್ ವ್ಯವಸ್ಥೆ ಒದಗಿಸಲಾಗಿತ್ತು. ಇದೇ ಸಂದರ್ಭದಲ್ಲಿ ರಂಗಮಂಟಪ ಸೇವೆ, ರಾಜಬೀದಿ ಉತ್ಸವ, ರಾತ್ರಿಕಟ್ಟೆ ಉತ್ಸವಗಳು ನಡೆದವು. ಫೆಬ್ರವರಿ 6ರ ಕುಮಾರಷಷ್ಟಿಯವರೆಗೆ ರಥೋತ್ಸವ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ ಎಂದು ದೇವಾಲಯ ಆಡಳಿತ ಮಂಡಲಿ ತಿಳಿಸಿದೆ.