ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಎಚ್ಚರವಹಿಸಿ
ರಾಮನಗರ: ಮುಂಬರುವ ಬೇಸಿಗೆಯಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕಾಮಗಾರಿ ಅನುಷ್ಠಾನದಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಎಚ್ಚರವಹಿಸಲು ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು. ತಾ.ಪಂ. ಸಭಾಂಗಣದಲ್ಲಿ ಸೋಮವಾರ ರಾಮನಗರ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಉಪೇಕ್ಷಿಸಕೂಡದು ಎಂದು ಅವರು ಹೇಳಿದರು.
ತಪಾಸಣೆಗೆ ತಾಕೀತು: ಅಧಿಕಾರಿಗಳು ತಕ್ಷಣದಿಂದಲೇ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡು ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಬೇಕು. ತುರ್ತು ಅಗತ್ಯವಿರುವೆಡೆ ಕೊಳವೆ ಬಾವಿಗಳನ್ನು ಕೊರೆಸುವುದು, ಅಂತರ್ಜಲ ತೀರ ಕುಸಿದಿರುವೆಡೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಿಯಾ ಯೋಜನೆ ರೂಪಿಸಬೇಕು ಎಂದರು. ಕೊಳವೆ ಬಾವಿಗಳನ್ನು ಕೊರೆಸುವುದಕ್ಕೂ ಮುನ್ನ ಅಂತರ್ಜಲದ ಲಭ್ಯತೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳಿಂದ ತಪಾಸಣೆ ಮಾಡಿಸಿ, ಕಡ್ಡಾಯವಾಗಿ ವರದಿ ಪಡೆದುಕೊಳ್ಳಬೇಕು ಎಂದು ಲಕ್ಷ್ಮೀ ಮಂಜುನಾಥ್ ತಾಕೀತು ಮಾಡಿದರು.
ಲಸಿಕೆ ನೀಡಲು ಸೂಚನೆ: ಕಳೆದ ವರ್ಷ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳದ ಪರಿಣಾಮ ಜಿಲ್ಲೆಯಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರಬಾಧೆ ಆವರಿಸಿತ್ತು. 2 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದ್ದವು. ಹೀಗಾಗಿ ಈ ಬಾರಿ ಎಚ್ಚರ ವಹಿಸಬೇಕು ಎಂದರು.
ಕಾಲುಬಾಯಿ ಜ್ವರ ಮತ್ತು ಗಳಲೇ ರೋಗದ ಮುಂಜಾಗ್ರತಾ ಲಸಿಕೆ ನೀಡಿಕೆಯನ್ನು ತಕ್ಷಣದಿಂದಲೇ ಪ್ರಾರಂಭಿಸಬೇಕು. ಈ ಮೂಲಕ ಪ್ರಸಕ್ತ ವರ್ಷ ರೋಗ ಮರುಕಳಿಸದಂತೆ ಜಾಗ್ರತೆ ವಹಿಸಬೇಕು ಎಂದು ಅವರು ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಅನ್ವರ್ ಪಾಷ, ಫೆಬ್ರವರಿ ಪ್ರಾರಂಭದಿಂದಲ್ಲೇ ಉಚಿತವಾಗಿ ಲಸಿಕೆ ನೀಡಿಕೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಸಭೆಗೆ ವಿವರಿಸಿದರು.
ಸರ್ಕಾರಕ್ಕೆ ಮನವಿ: ಹೊಸ ಕೈಗಾರಿಕಾ ನೀತಿಯಿಂದ ರಾಮನಗರ ಮತ್ತು ಚನ್ನಪಟ್ಟಣ ತಾಲೂಕುಗಳಲ್ಲಿ ಪ್ರಾರಂಭಿಸಿರುವ ಕೈಗಾರಿಕೆಗಳಿಗೆ ಸರ್ಕಾರಿ ಸವಲತ್ತು ದೊರಕುತ್ತಿಲ್ಲ. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲು ತಾ.ಪಂ. ಸಾಮಾನ್ಯ ಸಭೆ ಈಗಾಗಲೇ ತೀರ್ಮಾನಿಸಿದೆ ಎಂದು ಲಕ್ಷ್ಮೀ ಮಂಜುನಾಥ್ ತಿಳಿಸಿದರು.
ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕುಗಳಾದ ಮಾಗಡಿ ಮತ್ತು ಕನಕಪುರ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳಿಗಷ್ಟೇ ಸರ್ಕಾರಿ ಸವಲತ್ತು ದೊರಕುತ್ತಿದೆ. ರಾಮನಗರ ಮತ್ತು ಚನ್ನಪಟ್ಟಣ ತಾಲೂಕುಗಳು ವಂಚಿತವಾಗಿರುವುದು ಸರಿಯಲ್ಲ ಎಂದರು.
ನಿಗಾ ವಹಿಸಬೇಕು: ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ದುಃಸ್ಥಿತಿ ಬಗ್ಗೆ ಅಧಿಕಾರಿಗಳು ನಿಗಾವಹಿಸುತ್ತಿಲ್ಲ ಎಂದು ಸ್ಥಾಯಿ ಸಮತಿ ಅಧ್ಯಕ್ಷ ವೆಂಕಟರಂಗಯ್ಯ ಆರೋಪಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಮತ್ತು ಉಪಾಧ್ಯಕ್ಷ ಶಂಕರಪ್ಪ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ಇನ್ನು ಮುಂದೆ ತಮ್ಮ ಧೋರಣೆ ಬದಲಿಸಿಕೊಳ್ಳಬೇಕು. ವಿದ್ಯಾರ್ಥಿ ನಿಲಯಗಳಿಗೆ ದಿಢೀರ್ ಭೇಟಿ, ಅಲ್ಲಿನ ಊಟೋಪಚಾರ, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಆಗಾಗ್ಗೆ ಪರಿಶೀಲಿಸಬೇಕು ಎಂದು ಅವರು ಆದೇಶಿಸಿದರು.
ಸಿಬ್ಬಂದಿ ಕೊರತೆ: ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿರುವುದುನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಅದನ್ನು ಸರ್ಕಾರದ ಗಮನಕ್ಕೆ ತಂದು, ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಭರವಸೆ ನೀಡಿದರು.
ಇದೇ ವೇಳೆ ಬಿಡದಿ ಆಸ್ಪತ್ರೆ ಅವ್ಯವಸ್ಥೆ ಕುರಿತು ಉಪಾಧ್ಯಕ್ಷ ಶಂಕರಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಮೀನುಗಾರಿಕೆ, ಸಾಮಾಜಿಕ ಅರಣ್ಯ ಸಹಿತ ವಿವಿಧ ಇಲಾಖೆಗಳ ಪ್ರಗತಿಯ ಪರಾಮರ್ಶೆ ನಡೆಯಿತು. ತಾ.ಪಂ. ಇಒ ಟಿ.ಎಸ್. ವೆಂಕಟೇಶ್ ಹಾಜರಿದ್ದರು.