ಲಾರಿ ಮಾಲೀಕರ ಸಂಘದ ಕಾರ್ಯಕರ್ತನ ಮೇಲೆ ಹಲ್ಲೆ
ದೊಡ್ಡಬಳ್ಳಾಪುರ: ಮರಳು ಲಾರಿ ಮುಷ್ಕರದ ಹಿನ್ನಲೆಯಲ್ಲಿ ಪಕ್ಕದ ಆಂಧ್ರಪ್ರದೇಶದಿಂದ ಮರಳು ತುಂಬಿಕೊಂಡು ಬರುತ್ತಿದ್ದ ಲಾರಿಗಳನ್ನು ದೊಡ್ಡಬಳ್ಳಾಪುರ ಲಾರಿ ಮಾಲೀಕರ ಸಂಘದ ಕಾರ್ಯಕರ್ತರು ತಡೆಯಲು ಮುಂದಾದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ತಾಲೂಕಿನ ಸಾಸಲು ಹೋಬಳಿ ಮಚ್ಚೇನಹಳ್ಳಿ ಬಳಿ ಸೋಮವಾರ ಸಂಜೆ ನಡೆದಿದೆ.
ಇಲ್ಲಿನ ವಿನಾಯಕನಗರದ ಲಾರಿ ಮಾಲೀಕ ಮೂರ್ತಿ ಎಂಬಾತ ಹಲ್ಲೆಗೊಳಗಾಗಿದ್ದು, ಕೊಲಂಬಿಯಾ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಲೆಗೆ ತೀವ್ರ ಪೆಟ್ಟಾಗಿದ್ದು 8 ಹೊಲಿಗೆಗಳು ಬಿದ್ದಿವೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿದ ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಆರ್. ಕೆಂಪರಾಜು, ಲಾರಿ ಮುಷ್ಕರ ಇದ್ದಾಗ್ಯೂ ಮರಳು ಸಾಗಾಣಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಸಂಘದ 5 ಮಂದಿ ಕಾರ್ಯಕರ್ತರು ಲಾರಿಗಳನ್ನು ತಡೆದಾಗ ಬುಲೇರೋ ಜೀಪ್‌ನಲ್ಲಿ ಬಂದ ವೈಎನ್‌ಆರ್ ಲಾರಿ ಕಡೆಯವರು ಲಾಂಗುಗಳಿಂದ ಹಲ್ಲೆ ನಡೆಸಿ ಲಾರಿಗಳೊಂದಿಗೆ ಪರಾರಿಯಾಗಿದ್ದಾರೆ.
ಈ ಕುರಿತು ದೊಡ್ಡಬೆಳವಂಗಲ ಠಾಣೆಯಲ್ಲಿ ಸಂಘ ದೂರು ದಾಖಲಿಸಿದೆ. ಪರಾರಿಯಾದ ಲಾರಿಗಳನ್ನು ಖಚಿತ ಮಾಹಿತಿ ಮೇರೆಗೆ ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಠಾಣೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ.
ಮರಳು ಲಾರಿಗಳ ಮುಷ್ಕರವಿದ್ದರೂ ಮರಳು ಸಾಗಾಣಿಕೆ ಮಾಡಿದ್ದು ತಪ್ಪು. ಅದನ್ನೂ ಮೀರಿ ಪ್ರಶ್ನಿಸಿದ ಸಂಘದ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ ಕೂಡಲೇ ಆರೋಪಿಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.