ಸುದ್ದಿ ಸಂಕ್ಷೇಪ
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
ರಾಮನಗರ: ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜ.8ರ ಬೆಳಗ್ಗೆ 10.30ಕ್ಕೆ ನಗರದ ಗುರುಭವನದಲ್ಲಿ 2013-14ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸುವರು. ವಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಬಹುಮಾನ ವಿತರಿಸುವರು. ಸಂಸದ ಡಿ.ಕೆ.ಸುರೇಶ್, ಶಾಸಕರಾದ ಸಿ.ಪಿ. ಯೋಗೇಶ್ವರ್, ಎಚ್.ಸಿ.ಬಾಲಕೃಷ್ಣ, ಕೆ.ಶ್ರೀನಿವಾಸಮೂರ್ತಿ, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ತಾ.ಪಂ. ಅಧ್ಯಕ್ಷೆ ಲಕ್ಷ್ಮೀಮಂಜುನಾಥ್ ಭಾಗವಹಿಸುವರು.
6 ತಿಂಗಳ ಉಚಿತ ತರಬೇತಿ
ರಾಮನಗರ: ತಾಲೂಕಿನ ಬಿಡದಿ ಹೋಬಳಿಯ ವಾಜರಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕರಿಗೆ ಮರ ಮತ್ತು ಕಲ್ಲು ಕೆತ್ತನೆ ಹಾಗೂ ಲೋಹ ಶಿಲ್ಪ ವಿಭಾಗಗಳಲ್ಲಿ 18 ತಿಂಗಳು ಮತ್ತು ಕುಂಭ ಕಲೆಯಲ್ಲಿ (ಟೆರ್ರಾಕೋಟಾ) 6 ತಿಂಗಳ ಉಚಿತ ತರಬೇತಿ ನೀಡಲಿದೆ. ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿ ಪಾಸಾಗಿರಬೇಕು, 18 ರಿಂದ 35 ವರ್ಷದೊಳಗಿರಬೇಕು. ತರಬೇತಿ ಅವಧಿಯಲ್ಲಿ ಊಟ, ವಸತಿ, ಸಮವಸ್ತ್ರ, ಉಪಕರಣಗಳು ಹಾಗೂ ಕಚ್ಚಾ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗುವುದು. ತರಬೇತಿ ವೇಳೆ ಅಧ್ಯಯನ ಪ್ರವಾಸ ಏರ್ಪಡಿಸಲಾಗುವುದು, ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುವುದು. ಆಸಕ್ತರು ಜ.16 ರಿಂದ 21ರವರೆಗೆ ಸಂಸ್ಥೆಯ ಕಚೇರಿಯಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಅದೇ ದಿನ ತರಬೇತಿಗೆ ಸೇರಿಸಿಕೊಳ್ಳಲಾಗವುದು. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ನಿರ್ದೇಶಕ ಎಂ.ವೆಂಕಟೇಶ ಶೇಷಾದ್ರಿ ಮೊ.9900158885 ಸಂಪರ್ಕಿಸಬಹುದು.
ಸಿ.ಎ.ಶಾಂತಕುಮಾರ್ ನಿಧನಕ್ಕೆ ಸಂತಾಪ
ರಾಮನಗರ: ಭಾನುವಾರ ನಿಧನ ಹೊಂದಿದ ಶಿಕ್ಷಕ, ಗಾಯಕ ಹಾಗೂ ಪತ್ರಕರ್ತ ಸಿ.ಎ.ಶಾಂತಕುಮಾರ್ ಇವರ ನಿಧನಕ್ಕೆ ಜಿಲ್ಲೆಯ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿ, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ್ದಾರೆ. ಡಾ.ಎಂ.ವಿ. ವೆಂಕಟೇಶ್, ಹಮೀದ್ಖಾನ್, ಡಾ.ರಘುನಾಥ್, ಡಾ.ಎಚ್.ಎನ್. ಪ್ರೇಮ, ನಾಗಲಾಂಬಿಕ, ಎಚ್.ಪಿ.ಜಯರಾಮ್ ಹಾಗೂ ಸಿಬ್ಬಂದಿ ವರ್ಗ ಸಂತಾಪ ಸೂಚಿಸಿದೆ.
ಕಾಡಾನೆ ಹಿಂಡಿನ ದಾಳಿ: ಬೆಳೆ ನಾಶ
ಮಾಗಡಿ: ಎಂಟು ಕಾಡಾನೆ ಹಿಂಡು ಗುಡ್ಡಹಳ್ಳಿಯ ರೈತರ ತೋಟಗಳಿಗೆ ದಾಳಿಯಿಟ್ಟು ಪಪ್ಪಾಯಿ ತೋಟ, ರಾಗಿ ಬಣವೆ ನಾಶಮಾಡಿವೆ. ಕಳೆದ ಐದಾರು ವರ್ಷಗಳಿಂದಲೂ ಕಾಡಾನೆ ದಾಳಿಗೆ ಇಲ್ಲಿನ ಸುತ್ತಮುತ್ತಲ ರೈತರ ಲಕ್ಷಾಂತರ ರು ಬೆಳೆ ನಾಶವಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು. ಕುಂಬಳಕಾಯಿ ಗಂಗಣ್ಣ ಅವರಿಗೆ ಸೇರಿದ 4 ಎಕರೆ ಪಪ್ಪಾಯ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು, ಕಾಯಿಗಳನ್ನು ಕಿತ್ತು ನಾಶ ಮಾಡಿವೆ. ನರಸಣ್ಣ, ರಾಮಣ್ಣ, ಲೋಕೇಶ ಇನ್ನಿತರೆ ರೈತರ ರಾಗಿ ಬಣವೆ ತುಳಿದು ಹಾಕಿವೆ.
ಶೀಲಾ ನಾಯಕ್ನೇಮಕ
ಕನಕಪುರ: ಜಾತ್ಯತೀತ ಜನತಾದಳದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾಗಿ ಬಂಜಾಲ, ಲಂಬಾಣಿ ಸಮುದಾಯದ ಶೀಲಾನಾಯಕ್ ಅವರನ್ನ ರಾಷ್ಟ್ರಾಧ್ಯಕ್ಷರಾದ ಎಚ್.ಡಿ.ದೇವೇಗೌಡ ನೇಮಕಮಾಡಿ ಆದೇಶ ಹೊರಡಿಸಿದ್ದಾರೆ. ಶ್ರೀಮತಿ ಶೀಲಾನಾಯಕ್ ನೇಮಕ ಕನಕಪುರದ ಬಂಜಾರ ಸಮುದಾಯದಲ್ಲಿ ಹರ್ಷ ಮೂಡಿಸಿದೆ ಎಂದು ಟಿ.ಬೇಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷೆ ಧನಲಕ್ಷ್ಮೀಬಾಯಿ ಬಾಲಾನಾಯಕ್ ಹೇಳಿದ್ದಾರೆ.
ಜೀವನ ದರ್ಶನ ಶಿಬಿರ ನೋಂದಣಿ
ದೊಡ್ಡಬಳ್ಳಾಪುರ: ತಾಲೂಕಿನ ತಪಸೀಹಳ್ಳಿಯ ಶ್ರೀಪುಷ್ಪಾಂಡಜಮುನಿ ಆಶ್ರಮದಲ್ಲಿ ಜ.10ರಿಂದ 3 ದಿನಗಳ ಕಾಲ ಜೀವನ ದರ್ಶನ ಮತ್ತು ಆಧ್ಯಾತ್ಮಿಕ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ 3 ದಿನಗಳ ಕಾಲ ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ದರ್ಶನ, ಉಪನಿಷತ್ತುಗಳ ಆಧ್ಯಾತ್ಮಿಕ ವಿಚಾರಗಳನ್ನು ಬೋಧಿಸುವ ಮತ್ತು ತರಬೇತಿ ನೀಡುವ ಕೆಲಸ ನಡೆಯುತ್ತದೆ. ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಆಶ್ರಮದ ಪ್ರಕಟಣೆ ತಿಳಿಸಿದೆ. ವಿವರಗಳಿಗೆ ವಿ.ಆರ್.ಕೃಷ್ಣಮೂರ್ತಿ(9241289551) ಸಂಪರ್ಕಿಸಬಹುದು.
ಐಟಿಐಗೆ ಸೆಮಿಸ್ಟರ್ ವಿರೋಧಿಸಿ ಎಬಿವಿಪಿ ಪ್ರತಿಭಟನೆ
ಕನಕಪುರ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಕನಕಪುರ ಶಾಖೆ ವತಿಯಿಂದ ಐಟಿಐ ಕಾಲೇಜುಗಳಲ್ಲಿ ಸೆಮಿಷ್ಟರ್ ಪದ್ಧತಿ ಅಳವಡಿಕೆ ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಜಿಲ್ಲಾ ಸಂಚಾಲಕ ರಘುರಾಂ ತಹಸೀಲ್ದಾರ್ ಡಾ.ದಾಕ್ಷಾಯಣಿ ಅವರಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ, ವರ್ಷಕ್ಕೊಮ್ಮೆ ನಡೆಯುತ್ತಿದ್ದ ಪರೀಕ್ಷೆಯನ್ನು ತೆಗೆದು ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಹಾಗೂ ಎರಡು ಬಾರಿ ಶುಲ್ಕ ವಸೂಲಿ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗಿದೆ. ಅಲ್ಲದೆ ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್ಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ದ್ವಿತೀಯ ವರ್ಷಕ್ಕೆ ದಾಖಲಾತಿ ನಿರಾಕರಿಸಲಾಗುತ್ತಿದೆ. ಆದ್ದರಿಂದ ಸರ್ಕಾರ ಈ ಅವೈಜ್ಞಾನಿಕ ನೀತಿಯನ್ನು ತೆಗೆದುಹಾಕಿ ಹಿಂದಿನ ಮಾದರಿಯಲ್ಲಿಯೇ ಪರೀಕ್ಷೆ ಹಾಗೂ ದಾಖಲಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಏಡ್ಸ್ ಅರಿವು, ಜಾಗೃತಿ ಜಾಥಾ
ಕನಕಪುರ: ಲಯನ್ಸ್ ಮತ್ತು ಲಿಯೋ ಕ್ಲಬ್ ಕನಕಪುರ ವತಿಯಿಂದ ಏಡ್ಸ್ ಅರಿವು ಮತ್ತು ಜಾಗೃತಿ ಜಾಥಾ ಇಲ್ಲಿನ ಮಾನಸಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ವೈದ್ಯರಾದ ಡಾ.ಟಿ.ಎನ್.ವಿಜಯಕುಮಾರ್ ಬಾವುಟ ಬೀಸಿ ಚಾಲನೆ ನೀಡಿದರು. ವಿದ್ಯಾರ್ಥಿಗಳು ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಪ್ರಾಂಶುಪಾಲ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಸಂಪದಾ ಕೆರಿಮನಿಗೆ ಯುವ ಸಾಹಿತ್ಯ ಪುರಸ್ಕಾರ
ನೆಲಮಂಗಲ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಸಂಪದಾ ಕೆರಿಮನಿ ಅವರ ಹುಯಿಲಗೊಳ್ ನಾರಾಯಣ ರಾಯರ ಕೃತಿಗೆ ಬಸವರಾಜ್ ಕಟ್ಟಿಮನಿ ಪ್ರತಿಷ್ಠಾನದ ಯುವ ಸಾಹಿತ್ಯ ಪುರಸ್ಕಾರ ಲಭಿಸಿದೆ.
ಈ ಪುರಸ್ಕಾರವು ಸನ್ಮಾನದೊಂದಿಗೆ ರು.10 ಸಾವಿರ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ ಗಣ್ಯರ ಸಮ್ಮುಖದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು. ಇವರ ಮೊದಲ ಕೃತಿ ಕೈವಲ್ಯ ಸಾಹಿತ್ಯಕ್ಕೆ ಕರ್ನಾಟಕ ಲೇಖಕಿಯರ ಸಂಘದ ನೀಳಾದೇವಿ ದತ್ತಿ ಪುರಸ್ಕಾರವು ಕೂಡ ಲಭಿಸಿದೆ.
ಉಪನ್ಯಾಸಕರಾದ ಸಂಪದಾ ಕೆರಿಮನಿ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್. ರಾಜಶೇಖರ್, ಮಾಜಿ ಅಧ್ಯಕ್ಷ ಎಂ.ವಿ. ನೆಗಳೂರ್, ಎನ್.ಜಿ. ಗೋಪಾಲ್ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಅವರನ್ನು ಅಭಿನಂದಿಸಿದ್ದಾರೆ.