ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆಟೋ ಗ್ಯಾಸ್ ದರ ಏರಿಕೆಗೆ ಆಕ್ರೋಶ

Vishwanath S
Updated On : 8 Jan 2014, 1:01 am

ಕ.ಪ್ರ.ವಾರ್ತೆ ,  ರಾಮನಗರ ,  ಜ.7
ಆಟೋ ಎಲ್‌ಪಿಜಿ ದರ ಏರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಆಟೋ ಘಟಕದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಬಿ.ಶ್ರೀಧರ್ ಹೊಸೂರು ಮಾತನಾಡಿ, ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಿಂದ ಎಲ್‌ಪಿಜಿ ಗ್ಯಾಸ್ ದರವನ್ನು 3-4 ಪಟ್ಟು ಏರಿಸಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕೇಂದ್ರ ಸರ್ಕಾರ ಆಟೋ ಗ್ಯಾಸ್ ದರ ಏರಿಸುವ ಮೂಲಕ ಆಟೋ ಚಾಲಕರು ಮಾಲೀಕರ ಹೊಟ್ಟೆಮೇಲೆ ಹೊಡೆಯುತ್ತಿದೆ. ಕಷ್ಟಪಟ್ಟು ದುಡಿಯುವ ವರ್ಗದ ಮೇಲೆ ಮತ್ತಷ್ಟು ಹೊರೆ ಹಾಕುವ ಮೂಲಕ ಸಂಕಷ್ಟಕ್ಕೀಡುಮಾಡುತ್ತಿದೆ ಎಂದು ಟೀಕಿಸಿದರು.
ಸಾಮಾನ್ಯವಾಗಿ ಆಟೋ ಚಾಲನೆ ಮಾಡುವವರು ಬಡವರಾಗಿದ್ದಾರೆ. ಇದೀಗ ಕೇಂದ್ರ ಸರ್ಕಾರವು ರು.6 ಇದ್ದ ಪ್ರತಿ ಕೆ.ಜಿ. ಎಲ್‌ಪಿಜಿ ಗ್ಯಾಸ್ ದರವನ್ನು ರು.12ಕ್ಕೆ ಹೆಚ್ಚಿಸಿದೆ. ಆದರೆ, ಆಟೋ ಪ್ರಯಾಣ ದರವನ್ನು ಏರಿಕೆ ಮಾಡಿಲ್ಲ. ಇದರಿಂದಾಗಿ ಆಟೋ ಚಾಲಕರಿಗೆ ಭಾರೀ ನಷ್ಟ ಉಂಟಾಗುತ್ತಿದೆ. ಆಟೋವನ್ನೇ ನಂಬಿ ಬದುಕು ದೂಡುತ್ತಿರುವ ಚಾಲಕರ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎಂದು ಅಳಲು ತೋಡಿಕೊಂಡರು.
ಈಗ ಜನರು ಆಟೋದಲ್ಲಿ ಪ್ರಯಾಣಿಸುವುದೇ ವಿರಳವಾಗುತ್ತಿದ್ದು, ಆಟೋ ಚಾಲಕರ ಸಂಪಾದನೆ ಅಷ್ಟಕ್ಕಷ್ಟೆ. ಇಂತಹ ಸನ್ನಿವೇಶದಲ್ಲಿ ಆಟೋ ಗ್ಯಾಸ್ ದರವನ್ನು ದುಪ್ಪಟ್ಟು ಮಾಡಿರುವುದರಿಂದ ಪ್ರಯಾಣ ದರವನ್ನೂ ದುಪ್ಪಟ್ಟು ಮಾಡಬೇಕಾಗುತ್ತದೆ. ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರು ಆಟೋ ಹತ್ತುವುದನ್ನೇ ನಿಲ್ಲಿಸುವ ಆತಂಕವಿದ್ದು, ಆಟೋ ಚಾಲಕರು ಬೀದಿಗೆ ಬೀಳಲಿದ್ದಾರೆ ಎಂದರು.
ಆಟೋ ಚಾಲಕರಿಗೆ ಸಾಮೂಹಿಕ ವಿಮಾ ಸೌಲಭ್ಯ, ಬಡ್ಡಿ ರಹಿತ ಸಾಲ ಸೇರಿದಂತೆ ಇನ್ನಿತರೆ ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಮೂಲಕ  ನೆರವಾಗಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಕೂಡಲೇ ಹೆಚ್ಚಿಸಿರುವ ಗ್ಯಾಸ್ ದರವನ್ನು ವಾಪಸ್ ಪಡೆಯಬೇಕು. ತಪ್ಪಿದಲ್ಲಿ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಆಟೋ ಘಟಕದ ಜಿಲ್ಲಾಧ್ಯಕ್ಷ ರೇಣುಕಾಪ್ರಸಾದ್, ತಾಲೂಕು ಅಧ್ಯಕ್ಷ ಟಿ.ಆರ್.ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್, ಪದಾಧಿಕಾರಿಗಳಾದ ರಮಾನಂದಗೌಡ, ಪುಟ್ಟೇಗೌಡ, ಕೀರ್ತಿ, ರಘುರಾಮ್, ರಾ.ಶಿ.ಉಮೇಶ್, ಮಹದೇವ್, ಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.
ಪೊಲೀಸರ ಕ್ರಮಕ್ಕೆ ಸಾರ್ವಜನಿಕರ ಟೀಕೆ: ಆಟೋ ಅನಿಲ ದರ ಏರಿಕೆ ವಿರುದ್ಧ ಕರವೇ ಆಟೋ ಘಟಕದ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಲಾಠಿ ತೂರುವ ಮೂಲಕ ಸಾರ್ವಜನಿಕರ ಟೀಕೆಗೆ ಗುರಿಯಾದ ಘಟನೆ  ನಡೆಯಿತು.  ಸರ್ಕಲ್ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ಅವರು ಸ್ಥಳಕ್ಕೇ ಆಗಮಿಸುವಷ್ಟರಲ್ಲಾಗಲೇ ಪ್ರತಿಭಟನೆ ಅಂತಿಮ ಘಟಕ್ಕೆ ತಲುಪಿತ್ತು. ಬಂದ ಕೂಡಲೇ ಅವಾಚ್ಯ ಶಬ್ದಗಳಿಂದ ಪ್ರತಿಭಟನಾಕಾರರ ವಿರುದ್ಧ ಹರಿಹಾಯ್ದರು. ಏಕಾಏಕಿ ಲಾಠಿ ಪ್ರಯೋಗಿಸಲು ಮುಂದಾದರು. ಲಾಠಿ ಪ್ರಹಾರ ನಡೆಸಿಲಿಲ್ಲವಾದರೂ ಲಾಠಿಯಿಂದ ಗುದ್ದಿ ದೌರ್ಜನ್ಯ ನಡೆಸಿದರು.
ಕರವೇ ಆಟೋ ಘಟಕವು ಯಾವುದೇ ಪೂರ್ವಾನುಮತಿ ಪಡೆಯದೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ನೇತೃತ್ವದ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಲಾಠಿಯಿಂದ ತಿವಿದಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇನ್ನು ಮುಂದೆ ಯಾರೂ ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸಬಾರದು ಅಂತಹ ಮೊಕದಮ್ಮೆಗಳನ್ನು ಜಡಿಯುತ್ತೇನೆ ಎಂದು ದರ್ಪ ತೋರಿದರು.  
ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ತಿರುಗಿಬಿದ್ದು, ಘೋಷಣೆ ಕೂಗಿದರು. ಪ್ರತಿಭಟನೆ ನಡೆಸಲು ಸೋಮವಾರವೇ ಅನುಮತಿ ಪಡೆಯಲಾಗಿದೆ ಎಂದು ಅನುಮತಿ ಪತ್ರವನ್ನೂ ತೋರಿಸಿದರು. ಇದನ್ನೊಪ್ಪದ ಸುಬ್ರಹ್ಮಣ್ಯ ಅವರು ಪ್ರತಿರೋಧ ಒಡ್ಡಿದ ಇಬ್ಬರು ಆಟೋ ಚಾಲಕರನ್ನು ವಶಕ್ಕೆ ಪಡೆದು, ಠಾಣೆಗೆ ಎಳೆದೊಯ್ದರು. ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಮನಗಂಡು ಬಿಡುಗಡೆ ಮಾಡಿದರು.
ಎಚ್‌ಡಿಕೆ ಗರಂ: ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ದೃಶ್ಯ ಮಾಧ್ಯಮಗಳಲ್ಲಿ ವರದಿ ಭಿತ್ತರವಾಗಿದ್ದನ್ನು ಗಮನಿಸಿದ ಸ್ಥಳೀಯ ಶಾಸಕ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಪೊಲೀಸರ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ರಾಮನಗರವೇನೂ ರಾವಣ ರಾಜ್ಯ ಅಲ್ಲ. ಇಲ್ಲಿ ಪೊಲೀಸರು ದರ್ಪ, ದೌರ್ಜನ್ಯ ನಡೆಸುವುದು ಸರಿಯಲ್ಲ. ಈ ಘಟನೆ ಹೊಸದೇನೂ ಅಲ್ಲ. ಹಿಂದೆಯೂ ಅಮಾಯಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ವರ್ತನೆ ಮತ್ತೊಮ್ಮೆ ಮರುಕಳಿಸಿದರೆ ಖುದ್ದು ತಾವೇ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಉನ್ನತಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಎಚ್ಚರಿಕೆ ನೀಡಿರುವುದಾಗಿ ತಿಳಿಸಿದ್ದಾರೆ. ಘಟನೆ ಕುರಿತು ಎಚ್.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಆಪ್ತ ಮೂಲಗಳಿಂದ ಮಾಹಿತಿ ಪಡೆದಿದ್ದು, ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement