ಆರ್‌ಟಿಇ ಕಾಯಿದೆಯಂತೆ ಫೆ.8 ರವರೆಗೆ ಖಾಸಗಿ ಶಾಲೆಗಳಲ್ಲಿ ಅರ್ಜಿ ಸ್ವೀಕಾರ
ದೇವನಹಳ್ಳಿ: ಆರ್‌ಟಿಇ ಕಾಯಿದೆಯಂತೆ 2014-15 ನೇ ಸಾಲಿಗೆ ಶಾಲಾವಾರು ಮೀಸಲಾತಿ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು ಜ.7 ರಿಂದ ಫೆ.8 ರವರೆಗೆ ಶಾಲಾ ದಾಖಲಾತಿ ಕೋರಿ ಎಲ್‌ಕೆಜಿ, ಒಂದನೇ ತರಗತಿ ಹಾಗೂ ಸಿಬಿಎಸ್‌ಸಿ ಶಾಲೆಗಳಿಗೂ ಮಕ್ಕಳ ಪೋಷಕರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವನಹಳ್ಳಿ ತಾಲೂಕಿನ 18 ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿಗಾಗಿ 282 ಮಂದಿ, ಒಂದನೇ ತರಗತಿಗೆ 24 ಶಾಲೆಗಳಲ್ಲಿ 250 ಮಂದಿ ಹಾಗೂ ಮೂರು ಸಿಬಿಎಸ್‌ಸಿ ಶಾಲೆಗಳಲ್ಲಿ 43 ಮಂದಿ ಸೇರಿ ಒಟ್ಟು ತಾಲೂಕಿನಲ್ಲಿ 575 ಮಂದಿ ಮಕ್ಕಳು ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ.
ಪ್ರತಿ ಖಾಸಗಿ ಶಾಲೆಯಲ್ಲಿ ಲಭ್ಯವಿರುವ ಶೇ.25 ರಂತೆ ಸೀಟುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಜ.6 ರಂದು ಪ್ರಕಟಣೆ, ಶಾಲಾ ದಾಖಲಾತಿ ಕೋರಿ ಪೋಷಕರು ಫೆ.8 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಶಾಲೆಯವರು ಸ್ವೀಕರಿಸಿದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಆಯ್ಕೆ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಫೆ.17 ರೊಳಗಾಗಿ ತಲುಪಿಸಬೇಕು, ಬಿಇಒರವರು ಫೆ.28 ರಂದು ದಾಖಲಾತಿಗಳ ಅನುಮೋದನೆ ಪಟ್ಟಿ ಕಳುಹಿಸಲಿದ್ದಾರೆ.
ಶಾಲೆಗಳಲ್ಲಿ ಮಾ.3 ರಿಂದ ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಆದೇಶದ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.