ಕಾರೇಹಳ್ಳಿಯಲ್ಲಿ ಕೊಳವೆಬಾವಿ ರಾದ್ಧಾಂತ
ದೊಡ್ಡಬಳ್ಳಾಪುರ: ತಾಲೂಕಿನ ಕಾರೇಹಳ್ಳಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕೊಳವೆ ಬಾರಿ ತೆಗೆಯುತ್ತಿದ್ದ ಅಧಿಕಾರಿಗಳನ್ನು ರೈತನೊಬ್ಬ ತಡೆದ ಪರಿಣಾಮವಾಗಿ ಕೊಳವೆ ಬಾವಿ ಸ್ಥಳಾಂತರ ಮಾಡುವ ಪ್ರಯತ್ನ ನಡೆದಿದೆ.
ಇದನ್ನು ಖಂಡಿಸಿದ 4 ಮಂದಿ ಯುವಕರನ್ನು ದೊಡ್ಡಬೆಳವಂಗಲ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಇದೀಗ ತೀವ್ರ ವಿವಾದಕ್ಕೆ ಗ್ರಾಸವಾಗಿದೆ. ಗ್ರಾಮದ ನೀರಿನ ಬವಣೆ ತಗ್ಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸರ್ಕಾರಿ ಜಾಗದಲ್ಲಿ ಕೊಳವೆ ಬಾವಿ ಕೊರೆಯುತ್ತಿದ್ದರು. ಸುಮಾರು 100 ಅಡಿ ಕೊರೆದೂ ಆಗಿತ್ತು. ಅದಕ್ಕೆ ಕೇಸಿಂಗ್ ಪೈಪ್ ಕೂಡ ಬಿಡಲಾಗಿತ್ತು. ಈ ವೇಳೆ ಹತ್ತಿರದ ಜಮೀನು ಮಾಲೀಕರೊಬ್ಬರು ಬೋರ್ ಕೊರೆಯದಂತೆ ತಾಕೀತು ಮಾಡಿದ್ದಾರೆ. ಇಲ್ಲಿ ಬೋರ್ ಕೊರೆದರೆ ತನ್ನ ತೋಟದ ಕೊಳವೆ ಬಾವಿ ನೀರು ಪ್ರಮಾಣ ಕುಸಿಯುತ್ತದೆ ಎಂಬ ಆತಂಕ ಅವರದ್ದು ಎನ್ನಲಾಗಿದೆ.
ಈ ವೇಳೆ ದೊಡ್ಡಬಳ್ಳಾಪುರ ಶಾಸಕರು ಸ್ಥಳಕ್ಕೆ ಬಂದು ಕೆಲಸ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು. ಇದನ್ನು ವಿರೋಧಿಸಿದ ನಾಲ್ವರನ್ನು ಬಂಧಿಸಿರುವುದು ಖಂಡನೀಯ ಎಂಬುದು ಗ್ರಾಮದ ಜನರ ಆರೋಪ. ಸಾಮಾನ್ಯವಾಗಿ ಸಾರ್ವಜಿಕ ಉಪಯೋಗಕ್ಕಾಗಿ ಕೊರೆಸುವ ಬೋರ್ವೆಲ್ಗಳಿಗೆ ಕೆಲ ಕಾನೂನುಗಳು ಅನ್ವಯಿಸುವುದಿಲ್ಲ. ಇದರಿಂದ ಅಕ್ಕಪಕ್ಕದ ಕೊಳವೆ ಬಾವಿಗಳಿಗೂ ತೊಂದರೆಯೇನಿಲ್ಲ. ಆದಾಗ್ಯೂ ಖುದ್ದು ಶಾಸಕರೇ ಅಧಿಕಾರಿಗಳಿಗೆ ಆದೇಶಿಸಿದ್ದೇಕೆ ಎಂಬುದು ಈಗ ಚರ್ಚೆಯ ವಿಷಯ. ಆದರೆ ಜನರ ವಿರೋಧದ ನಡುವೆಯೂ ಅಧಿಕಾರಿಗಳು ಶಾಸಕರ ಮಾತಿನಂತೆ ಬೇರೆಡೆ ಬೋರ್ ಕೊರೆಯುತ್ತಿದ್ದಾರೆ.
ಸ್ಪಷ್ಟನೆ: ಈ ಕುರಿತು ಸ್ಪಷ್ಟನೆ ನೀಡಿರುವ ಶಾಸಕ ಟಿ. ವೆಂಕಟರಮಣಯ್ಯ ನಾನು ಯಾರ ಪರವಾಗಿಯೂ ಮಾತನಾಡಿಲ್ಲ. ಈಗ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಎಲ್ಲ ಜನರಿಗೂ ಉಪಯೋಗವಾಗುವ ಜಾಗದಲ್ಲಿ ಕೊಳವೆ ಬಾವಿ ಕೊರೆಯಿರಿ ಎಂದಷ್ಟೇ ಹೇಳಿದ್ದೇನೆ.ಶಾಂತ ಪರಿಸ್ಥಿತಿ ನಿರ್ವಹಿಸುವ ದೃಷ್ಟಿಯಲ್ಲಿ ಪೊಲೀಸರು ನಾಲ್ವರನ್ನು ವಿಚಾರಣೆಗೊಳಪಡಿಸಿದ್ದಾರೆ. ಇದರಲ್ಲಿ ರಾಜಕೀಯವಿಲ್ಲ ಎಂದಿದ್ದಾರೆ.