ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಗಣರಾಜ್ಯೋತ್ಸವ ಆಚರಣೆಗೆ ಸಂಬಂಧ ಇಂದು ಸಭೆ

Vishwanath S
Updated On : 8 Jan 2014, 1:04 am

ಚನ್ನಪಟ್ಟಣ: 65ನೇ ಗಣರಾಜ್ಯೋತ್ಸವದ ಆಚರಣೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಗಾಗಿ ಜ.8 ರಂದು ಪೂರ್ವಭಾವಿ ಸಭೆಯನ್ನು ಹಮ್ಮಿ ಕೊಂಡಿರುವುದಾಗಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಇ.ಶಿವರುದ್ರಯ್ಯ ತಿಳಿಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಸಭೆಗೆ ತಾಲೂಕಿನ ಎಲ್ಲಾ ಅಧಿಕಾರಿಗಳು, ಪ್ರಗತಿಪರ ಚಿಂತಕರು, ಜನಪರ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮ ಆಚರಣೆ ಬಗ್ಗೆ ಸೂಕ್ತ ಸಲಹೆ ನೀಡುವಂತೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕ್ರಮಕ್ಕೆ ಸ್ವಾಗತ
ಚನ್ನಪಟ್ಟಣ: ತಾಲೂಕಿನ ಎಲೇಕೇರಿ ಮಾರ್ಗದಲ್ಲಿ ರೇಲ್ವೆ ಮೇಲುಸೇತುವೆ ನಿರ್ಮಾಣ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಿರುವ ಜಿಲ್ಲಾಧಿಕಾರಿಗಳ ಕ್ರಮವನ್ನು ನಗರಸಭಾ ಸದಸ್ಯ ಮುದ್ದುಕೃಷ್ಣ ಸ್ವಾಗತಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸ್ಥಳೀಯ ನಾಗರಿಕರಿಗೆ ಸಾಕಷ್ಟು ಅನಾನುಕೂಲವಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಲಿಖಿತ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕಾಮಗಾರಿಗೆ ತ್ವರಿತವಾಗಿ ಚಾಲನೆ ನೀಡುವಂತೆ ತಿಳಿಸಿದ್ದು ಇದರಿಂದಾಗಿ ಈ ಭಾಗದ ಜನತೆ ಹಲವಾರು ವರ್ಷಗಳಿಂದ ಅನುಭವಿಸುತ್ತಿದ್ದ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ ಎಂದಿದ್ದಾರೆ. ರೇಲ್ವೆ ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕೆ ಸಾಕಷ್ಟು ಶ್ರಮಿಸಿದ ಸಂಸದ ಡಿ.ಕೆ. ಸುರೇಶ್ ಮತ್ತು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ಈ ಮೂಲಕ ತಿಳಿಸಿದ್ದಾರೆ.
'ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡರೆ ಆರೋಗ್ಯವಂತರಾಗಿರಲು ಸಾಧ್ಯ'
ನೆಲಮಂಗಲ: ಮನುಷ್ಯರಾದವರು ಸದಾ ಮನಸ್ಸನ್ನು ಸ್ಥತಿಮಿತದಲ್ಲಿಟ್ಟುಕೊಂಡಿದ್ದರೆ ಆರೋಗ್ಯವಂತರಾಗಿರಲು ಸಾಧ್ಯ ಎಂದು ಪವಾಡ  ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪವಾಡ  ಬಸವಣ್ಣ ದೇವರ ಮಠದ ಆವರಣದಲ್ಲಿ ಹಾರ್ಟ್ ಆಫ್ ಲೀವಿಂಗ್  ವತಿಯಿಂದ ಏರ್ಪಡಿಸಿದ್ದ ಸುದರ್ಶನ ಕ್ರಿಯಾ ಯೋಗ ಕಾರ್ಯಕ್ರಮವನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು.
ಸುದರ್ಶನ ಕ್ರಿಯಾ ಯೋಗ ಮಾಡುವುದರಿಂದ ಮನುಷ್ಯನ ದೇಹ ಮನಸ್ಸು ಚೈತನ್ಯದಿಂದಿರುತ್ತದೆ ಎಂದು  ಯೋಗ ಗುರು ಚಂದ್ರಕಾಂತ್ ಗುರೂಜಿ ತಿಳಿಸಿದರು.
 ಶಿಬಿರಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಸಿ  ರೋಗ ರಹಿತ ದೇಹ ಹಾಗೂ ಒತ್ತಡ ರಹಿತ ಮನಸ್ಸು ಏಕಾಗ್ರತೆಗೊಳಿಸಿಕೊಳ್ಳಬೇಕು ಎಂಬುದನ್ನು ವಿವರಿಸಿದರು. ಸಂಘಟಕಿ ಗಾಯಿತ್ರಿ, ವಿದ್ಯಾ ಸೇರಿದಂತೆ ನೂರಾರು ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಅಯ್ಯಪ್ಪಸ್ವಾಮಿಗೆ ವಿಶೇಷ ಹೂವಿನ ಪಲ್ಲಕ್ಕಿ ಉತ್ಸವ
ನೆಲಮಂಗಲ: ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ 26 ನೇ ವರ್ಷದ ಅಂಗವಾಗಿ ಅಯ್ಯಪ್ಪಸ್ವಾಮಿ ದೇವರನ್ನು ವಿಶೇಷವಾಗಿ ಹೂವಿನ ಪಲ್ಲಕ್ಕಿಯಲ್ಲಿ ಅಲಂಕರಿಸಿ ವಾದ್ಯಘೋಷ್ಠಿಯೊಂದಿಗೆ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಪ್ರತಿ ವರ್ಷದಂತೆ ವಾಸವಿ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಮೆರವಣಿಗೆ ವೀಕ್ಷಿಸಲು ಸಾವಿರಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಭೇಟಿ ನೀಡಿ ಶ್ರೀಸ್ವಾಮಿಯ ವಿಶೇಷ ದರ್ಶನ ಪಡೆದರು. ರಾತ್ರಿವರೆಗೂ ಜನ ಸರತಿ ಸಾಲಿನಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ಸ್ವಾಮಿಯ ದರ್ಶನ ಪಡೆಯುತ್ತಿದ್ದ ದೃಶ್ಯ ಕಂಡು ಬಂತು. ಭಕ್ತಾಧಿಗಳೆಲ್ಲರಿಗೂ ಭಕ್ತ ಮಂಡಳಿಯ ನೇತೃತ್ವದಲ್ಲಿ ಪ್ರಸಾದ ವಿನಿಯೋಗ ನಡೆಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್. ರಾಜ್‌ಶೇಖರ್, ಮಂಡಳಿಯ ಗುರುಸ್ವಾಮಿಗಳಾದ ಎನ್.ಕೆ.ರಾಜಣ್ಣ , ಬಿ.ವಿ.ರಾಜಣ್ಣ , ಸಂತೋಷ್, ಎನ್.ಪಿ.ನರಸಿಂಹಯ್ಯ ,ಎನ್.ಜಿ. ಸುರೇಶ್‌ಸ್ವಾಮಿ, ನಾರಾಯಣಸ್ವಾಮಿ, ಸ್ನೇಕ್ ಲೋಕೇಶ್, ಪ್ರಸನ್ನಕುಮಾರ್ ಭಾಗವಹಿಸಿದ್ದರು.
ಸರಸ್ವತಿ ಶಾಲೆ ವಾರ್ಷಿಕೋತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ಸರಸ್ವತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಶಾಂತಿನಗರದಲ್ಲಿರುವ ಮಾಂಗಲ್ಯ ಕಲ್ಯಾಣ ಮಂದಿರದಲ್ಲಿ ಜ.8ರ ಬುಧವಾರ ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಪ್ರತಿಭಾವಂತ ವಿದ್ಯಾರ್ಥಿನಿ ಜಿ.ಲಾವಣ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಂ.ಗುರುರಾಜ್, ಬಿಇಓ ಎಚ್.ಎನ್.ತಿಮ್ಮೇಗೌಡ, ನವೋದಯ ಶಾಲೆ ಪ್ರಾಂಶುಪಾಲ ಟಿ. ಗೋಪಾಲಕೃಷ್ಣ ಭಾಗವಹಿಸಲಿದ್ದಾರೆ. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ರಾಜ್ಯಮಟ್ಟಕ್ಕೆ ಆಯ್ಕೆ
ಚನ್ನಪಟ್ಟಣ: ಇತ್ತೀಚಿಗೆ ರಾಮನಗರದ ಗುರಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವೃತ್ತಿಶಿಕ್ಷಣ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ  ಇಲ್ಲಿನ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡ ವಿದ್ಯಾರ್ಥಿನಿಯರಿಗೆ ದಯಟ್ ಉಪನ್ಯಾಸಕಿ ನಾಗಮ್ಮ ಬಹುಮಾನ ವಿತರಣೆ ಮಾಡಿದರು. ಶಿಕ್ಷಣಾಧಿಕಾರಿ ಶಿವರಾಮೇಗೌಡ, ವೃತ್ತಿಶಿಕ್ಷಣ ಸಂಘದ ಅಧ್ಯಕ್ಷ ಬಿ.ಎನ್.ಜಯರಾಮು, ಉಪಾಧ್ಯಕ್ಷ ಸಿ.ಎ.ಶಾಂತಕುಮಾರ್, ರಾಜ್ಯ ಕಾರ್ಯದರ್ಶಿ ಮುನಿಯಪ್ಪ ಮುಂತಾದವರು ಉಪಸ್ಥಿತರಿದ್ದರು.
ವಿ. ವೆಂಕಟಾಚಲ ನೇಮಕ
ಬೆಂಗಳೂರು: ಕರ್ನಾಟಕ ಪ್ರದೇಶ ಜನತಾದಳ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ರಾಜ್ಯ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾಗಿ ವಿ. ವೆಂಕಟಾಚಲ ಅವರನ್ನು ನೇಮಕ ಮಾಡಲಾಗಿದೆ.
'ಸ್ವರಕ್ಷಣಾ' ಕುರಿತ ಕಾರ್ಯಾಗಾರ
ಬೆಂಗಳೂರು: ಜೆನ್‌ಸ್ಪೋರ್ಟ್ಸ್ ಮತ್ತು ಫಿಟ್‌ನೆಸ್ ಸಂಸ್ಥೆ ಜ.11ರಂದು ಸಂಜೆ 5ಗಂಟೆಗೆ ಮಹಿಳೆಯರಿಗೆ ಅನುಕೂಲವಾಗುವ 'ಸ್ವರಕ್ಷಣಾ' ವಿಷಯ ಕುರಿತ ಕಾರ್ಯಾಗಾರ ಏರ್ಪಡಿಸಿದೆ. ಕಳ್ಳರಿಂದ ಪಾರಾಗುವ ಬಗೆ, ದಿನನಿತ್ಯ ಸಾಮಾಗ್ರಿಗಳನ್ನು ಆಯುಧಗಳಾಗಿ ಬಳಸುವುದು ಹೇಗೆ? ಎಂಬ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಗುತ್ತದೆ. ಕಾರ್ಯಾಗಾರದಲ್ಲಿ ಭಾಗವಹಿಸುವವರು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಸಂಸ್ಥೆ ಕೋರಿದೆ. ಹೆಚ್ಚಿನ ಮಾಹಿತಿಗೆ ಮೊ- 96635 35179.
ಕೆಪಿಸಿಸಿ ಕಚೇರಿಗೆ ಇಂದು ಕಿಮ್ಮನೆ
ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಬುಧವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಲಿದ್ದಾರೆ.  ಬೆಳಗ್ಗೆ 11 ಗಂಟೆಗೆ ಪಕ್ಷದ ಕಚೇರಿಗೆ ಆಗಮಿಸುವ ಅವರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ದಿನೇಶ್‌ಗೂಳಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕರ ತಂಡ ಇಂದು ಸ್ವದೇಶಕ್ಕೆ ವಾಪಸ್
ಬೆಂಗಳೂರು: ವಿರೋಧದ ಮಧ್ಯೆಯೂ ವಿದೇಶ ಪ್ರವಾಸಕ್ಕೆ ತೆರಳಿದ್ದ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಜ.8ರಂದು ಸ್ವದೇಶಕ್ಕೆ ವಾಪಸಾಗಲಿದೆ.
ಬಿ.ಆರ್. ಯಾವಗಲ್ ಅಧ್ಯಕ್ಷತೆಯಲ್ಲಿ ಸದಸ್ಯರಾದ ಬಿ.ಬಿ. ಚಿಮ್ಮನಕಟ್ಟಿ, ಬಿ.ಎನ್. ಶಿವಣ್ಣನವರ್, ಡಿ. ಸುಧಾಕರ್, ಡಿ.ಆರ್. ಸಿದ್ದಲಿಂಗಪ್ಪ, ಕೆ. ರಾಘವೇಂದ್ರ ಹಿಟ್ನಾಳ್, ಮಕ್ಬೂಲ್ ಎಸ್. ಬಾಗವಣ್ಣ, ಬಿ.ಎ. ಮೊಯ್ನುದ್ದೀನ್ ಬಾವಾ, ಸಿ.ಬಿ. ಸುರೇಶ್ ಬಾಬು, ಎ.ಬಿ. ರಮೇಶ್ ಬಂಡಿಸಿದ್ದೇಗೌಡ, ಎಸ್. ಅಂಗಾರಾ, ದತ್ತಾತ್ರಯ ಪಾಟೀಲ್ ರೇವೂರಾ, ಬಿ.ಆರ್. ಪಾಟೀಲ್, ಪಿ. ರಾಜೀವ, ಮಂಕಾಳ ಸುಬ್ಬ ವೈದ್ಯ, ರಾಮಚಂದ್ರ ಗೌಡ, ಅರುಣ್ ಶಹಾಪೂರ್, ಶ್ರೀನಿವಾಸ್ ವಿ. ಮಾನೆ, ಸೈಯದ್ ಮುದೀರ್ ಆಗಾ ಅವರನ್ನು ಒಳಗೊಂಡ ಸದಸ್ಯರ ತಂಡ ಎರಡು ವಾರಗಳ ಹಿಂದೆ ವಿದೇಶ ಪ್ರವಾಸಕ್ಕೆ ತೆರಳಿತ್ತು.
ಆದರೆ ವೀಸಾ ಸಮಸ್ಯೆಯಿಂದ ನಿಗದಿತ ದಿನಾಂಕದಂದು ಪ್ರವಾಸ ತೆರಳುವುದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಜ.5ರಂದು ರಾಜ್ಯಕ್ಕೆ ವಾಪಸ್ ಆಗಬೇಕಿದ್ದ ಶಾಸಕರ ತಂಡ ಪ್ರವಾಸ ಅವಧಿಯನ್ನು ಮೂರು ದಿನ ವಿಸ್ತರಿಸುವಂತೆಮಾಡಿದ್ದ ಮನವಿಗೆ ಸಚಿವಾಲಯದಿಂದ ಸಮ್ಮತಿ ದೊರಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement