ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಿರಂತರ ಹೆಣ್ಣು ಭ್ರೂಣ ಹತ್ಯೆಗೆ ಆಕ್ರೋಶ

Vishwanath S
Updated On : 8 Jan 2014, 1:01 am

ಕ.ಪ್ರ.ವಾರ್ತೆ ,  ರಾಮನಗರ ,  ಜ. 7
ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ನಿರಂತರವಾಗಿ ನಡೆಯುತ್ತಿದ್ದು, ಈ ಕೃತ್ಯಕ್ಕೆ ಸಹಕಾರ ನೀಡುತ್ತಿರುವ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತುಪಡಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದಲ್ಲಿ  ಮಂಗಳವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ, ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಬಸವರಾಜು ಅವರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಭ್ರೂಣಲಿಂಗ ಪತ್ತೆ ಕಾನೂನು ಪ್ರಕಾರ ಅಪರಾಧವಾಗಿದ್ದರೂ ಜಿಲ್ಲೆಯ ಹಲವಾರು ಖಾಸಗಿ ನರ್ಸಿಂಗ್ ಹೋಂಗಳು ಇದನ್ನೇ ದಂಧೆಯಾಗಿಸಿಕೊಂಡಿವೆ. ಇದನ್ನು ನಿಯಂತ್ರಿಸಬೇಕಾದ ಆರೋಗ್ಯಾಧಿಕಾರಿಗಳೇ ಕುಮ್ಮಕ್ಕು ನೀಡುವ ಮೂಲಕ ದಂಧೆಯ ಪರೋಕ್ಷ ಪಾಲುದಾರರಾಗಿದ್ದಾರೆ. ಇಂತಹ ಅನಿಷ್ಠ ಕಾರ್ಯದಲ್ಲಿ ತೊಡಗಿರುವ ಇವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಚನ್ನಪಟ್ಟಣದ ಬಾಲು ನರ್ಸಿಂಗ್ ಹೋಂನಲ್ಲಿ ಭ್ರೂಣಲಿಂಗ ಪತ್ತೆ ಮಾಡುತ್ತಿರುವುದನ್ನು ಇಬ್ಬರು ಗರ್ಭಿಣಿಯರ ನೆರವಿನಿಂದ ರಹಸ್ಯ ಕಾರ್ಯಾಚರಣೆ ಮೂಲಕ ಪತ್ತೆಹಚ್ಚಲಾಗಿತ್ತು. ಈ ಸಂಬಂಧ ಡಿಎಚ್‌ಒ ಅವರಿಗೆ ದಾಖಲೆ ಸಮೇತ ದೂರು ನೀಡಲಾಗಿತ್ತು. ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಕ್ಯಾನಿಂಗ್ ಯಂತ್ರವನ್ನು ಜಫ್ತಿ ಮಾಡಿ ವಶಕ್ಕೆ ಪಡೆದಿದ್ದರು ಎಂದರು.
ಸೂಕ್ತ ತನಿಖೆ ನಡೆಸಿ ದಂಧೆಯನ್ನು ಮಟ್ಟಹಾಕಬೇಕಿದ್ದ ಡಿಎಚ್‌ಒ ಅವರು ದಂಧೆಯಲ್ಲಿ ನಿರತವಾಗಿದ್ದ ಆಸ್ಪತ್ರೆ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸಲಿಲ್ಲ. ಇದೀಗ ಸ್ಕ್ಯಾನಿಂಗ್ ಯಂತ್ರವನ್ನು ಆಸ್ಪತ್ರೆಯ ಸುಪರ್ದಿಗೆ ನೀಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದರಿಂದ ಅವರು ಅನಿಷ್ಠ ದಂಧೆಗೆ ಕೈಜೋಡಿಸಿರುವುದ ಗೊತ್ತಾಗುತ್ತದೆ ಎಂದರು.
ಕರ್ತವ್ಯ ಲೋಪ: ಈ ಅನಿಷ್ಠ ದಂಧೆಯನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಚನ್ನಪಟ್ಟಣದಿಂದ ರಾಮನಗರ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ್ದವು. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಬಾಲು ನರ್ಸಿಂಗ್ ಹೋಂ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದರೂ ಡಿಎಚ್‌ಒ ಅವರು ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದರು.
ಕರ್ತವ್ಯ ಲೋಪ ಎಸಗಿರುವ ಡಿಎಚ್‌ಒ ಅವರನ್ನು ಸೇವೆಯಿಂದ ಅಮಾನತು ಪಡಿಸಬೇಕು. ಭ್ರೂಣ ಲಿಂಗ ಪತ್ತೆ ಮಾಡಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿರುವ ಬಾಲು ನರ್ಸಿಂಗ್ ಹೋಂ ವಿರುದ್ಧ ಮೊಕದಮ್ಮೆ ದಾಖಲಿಸಬೇಕು. ತಪ್ಪಿದಲ್ಲಿ ಆಮರಣಾಂತ ಉಪವಾಸ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಮುಖಂಡೆ ಅನುಸೂಯಮ್ಮ, ಕರುನಾಡ ಸೇನೆ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಜಗದೀಶ್, ವಿಮೋಚನಾ ಸಮಿತಿಯ ರವಿಕುಮಾರ್, ಪುಷ್ಪಲತಾ, ಮಮತಾ, ಸ್ವರಾಜ್ ಸಂಘಟನೆಯ ಸುಕನ್ಯಾ, ಪುಟ್ಟಮ್ಮ, ಪುಟ್ಟಗೌರಿ, ಶಿವಮ್ಮ, ವಕೀಲ ಸುರೇಶ್, ಗಾಯಿತ್ರಿಬಾಯಿ, ಅಬ್ದುಲ್ಲಾ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement