ಫುಟ್ಪಾತ್ ವ್ಯಾಪಾರಿಗಳಿಗೆ ಸ್ಥಳಾವಕಾಶ
ಚನ್ನಪಟ್ಟಣ: ಪಟ್ಟಣದ ಫುಟ್ಪಾತ್ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಂದಾಗಿರುವ ನಗರಸಭಾ ನೂತನ ಸದಸ್ಯರು, ಫುಟ್ಪಾತ್ ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಇಲ್ಲಿನ ಕಲರಬಲ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಂ.ಜಿ.ರಸ್ತೆ ಹಾಗೂ ಅಂಚೇಕಚೇರಿ ರಸ್ತೆಯಲ್ಲಿ ಫುಟ್ಪಾತ್ ವ್ಯಾಪಾರದಿಂದ ಸಾಕಷ್ಟು ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ ನೀಡಿ ರಸ್ತೆಯನ್ನು ಸಂಚಾರ ಮುಕ್ತಗೊಳಿಸಲು ನಗರಸಭಾ ಸದಸ್ಯರು, ಕರಬಲ ಮೈದಾನದಲ್ಲಿ ಲಭ್ಯವಿರುವ ಅಂಗಡಿ ಮಳಿಗೆಗಳನ್ನು ಪರಿಶೀಲನೆ ನಡೆಸಿದರು.
ತರಕಾರಿ ಮಾರುಕಟ್ಟೆ ಸ್ಥಾಪಿಸುವ ಉದ್ದೇಶದಿಂದ ಕರಬಲ ಮೈದಾನದಲ್ಲಿ 10 ವರ್ಷಗಳ ಹಿಂದೆ 130 ಅಂಗಡಿ ಮಳಿಗೆಗಳನ್ನು ಸ್ಥಾಪಿಸಿದ್ದು, ಇಲ್ಲಿ ಹಣ್ಣು, ಹೂ, ತರಕಾರಿ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗಿದೆ. ಕೆಲ ಅಂಗಡಿಮಳಿಗೆಗಳನ್ನು ಹರಾಜು ಮೂಲಕ ವಿಲೇಮಾಡಲಾಗಿದೆಯಾದರೂ ಫುಟ್ಪಾತ್ ವ್ಯಾಪಾರದ ನೆಪಹೇಳಿ ಕೆಲಮಂದಿ ಈ ಮೈದಾನದ ಅಂಗಡಿ ಮಳಿಗೆಗಳಿಗೆ ಬಾರದಿದ್ದು ಇದರಿಂದಾಗಿ ಒಂದು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ ಈ ಕಟ್ಟಡದಿಂದ ನಗರಸಭೆಗೆ ನಯಾಪೈಸೆ ಆದಾಯ ಸಿಗದಂತಾಗಿದೆ ಎಂದು ಸದಸ್ಯರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಕರಲಬಲ ಮೈದಾನದಲ್ಲಿ ಕೆಲ ಮಂದಿ ಅಂಗಡಿ ಮಳಿಗೆಯನ್ನು ಬಿಟ್ಟು ಖಾಲಿ ಜಾಗದಲ್ಲಿ ಅಂಗಡಿ ನಿರ್ಮಿಸಿ ಕೊಂಡಿದ್ದು ಇಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ. ನಗರಸಭೆಗೆ ಯಾವುದೇ ಬಾಡಿಗೆ ಸಂದಾಯ ವಾಗದ್ದರಿಂದ ಹತ್ತುವರ್ಷಗಳಲ್ಲಿ ಸಾಕಷ್ಟು ಆದಾಯ ಸೋರಿಕೆಯಾಗಿದ್ದು ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಫುಟ್ಪಾತ್ ವ್ಯಾಪಾರವನ್ನು ಇಲ್ಲಿಗೆ ಸ್ಥಳಾಂತರಿಸುವಂತೆ ಸದಸ್ಯರು ತಿಳಿಸಿದರು.
ಸಂಕ್ರಾಂತಿ ವೇಳೆಗೆ ಪೂರ್ಣ: ಕೂಡಲೇ ಕರಲಬಲ ಮೈದಾನದಲ್ಲಿ ಖಾಲಿ ಉಳಿದಿರುವ ಜಾಗವನ್ನು ತೆರವು ಗೊಳಿಸಿ ಫುಟ್ಪಾತ್ ವ್ಯಾಪಾರಿಗಳ ಮನ ಒಲಿಸಿ ಕರಬಲ ಮೈದಾನಕ್ಕೆ ಸ್ಥಳಾಂತರಿಸುವ ಮೂಲಕ ನಗರಸಭೆಗೆ ಆದಾಯ ತರುವಂತೆ ಪೌರಾಯುಕ್ತರಿಗೆ ಸೂಚಿಸಿದ ಸದಸ್ಯರು, ನಾಳೆಯಿಂದಲೇ ಈ ಕಾರ್ಯಕ್ಕೆ ಮುಂದಾಗಿ ಸಂಕ್ರಾಂತಿ ವೇಳೆಗೆ ಎಲ್ಲವನ್ನೂ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಜಗದೀಶ್ ನಾಳೆಯಿಂದಲೇ ಫುಟ್ಪಾತ್ ವ್ಯಾಪಾರವು ಕಾರ್ಯಾಚರಣೆಗೆ ಚಾಲನೆ ನೀಡಲಿದ್ದು, ವ್ಯಾಪಾರಿಗಳ ಮನ ಒಲಿಸಿ ಕರಬಲ ಮೈದಾನಕ್ಕೆ ಕರೆತರಲಾಗುವುದು. ಇದಕ್ಕೆ ಒಪ್ಪದಿದ್ದಲ್ಲಿ ಪೊಲೀಸ್ ರಕ್ಷಣೆಯಲ್ಲಿ ತೆರವು ಕಾರ್ಯಾಚರಣೆ ನಡೆಸಬೇಕಾದ್ದು ಅನಿವಾರ್ಯ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಜೆಸಿಬಿ ಲೋಕೇಶ್, ವಿಷಕಂಠಮೂರ್ತಿ, ಎಂ.ರಾಮು, ಮಧು, ವಿಲ್ಸನ್ ಮುಂತಾದವರು ಉಪಸ್ಥಿತರಿದ್ದರು.