ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ನ್ಯಾಯಾಂಗ ಬಂಧನಕ್ಕೆ
ಚನ್ನಪಟ್ಟಣ: ಬಾಲಕಿಯಮೇಲೆ ಅತ್ಯಾಚಾರ ನಡೆಸಿರುವ ಘಟನೆ ತಾಲೂಕಿನ ಬೇವೂರು ಮಂಡ್ಯ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ರಮ್ಯ (15, ಹೆಸರು ಬದಲಿಸಲಾಗಿದೆ) ಎಂಬ ಬಾಲಕಿಯ ಮೇಲೆ ಪಕ್ಕದ ಮನೆಯ ವೆಂಕಟೇಶ್ (28) ಅತ್ಯಾಚಾರ ಎಸಗಿದ್ದಾನೆ. ರೇಷ್ಮೆ ಹುಳುವಿನತಟ್ಟೆಗೆ ಹಾಸಲು ಪೇಪರ್ ತರುವಂತೆ ಬಾಲಕಿಯನ್ನು ಕರೆದ ವೆಂಕಟೇಶ್ ಮನೆ ಒಳಗೆ ಬಂದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಪ್ರಕರಣ ದಾಖಲಿಸಿ ಕೊಂಡಿರುವ ಎಂ.ಕೆ.ದೊಡ್ಡಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ವೆಂಕಟೇಶ್ ವಿವಾಹಿತನಾಗಿದ್ದು ಈತನ ಪತ್ನಿ ಹೆರಿಗೆಗೆಂದು ತವರಿಗೆ ಹೋಗಿರುವಾಗ ಈ ಕೃತ್ಯವೆಸಗಿದ್ದಾನೆ.
ಕೊಳವೆಬಾವಿಗಳ ಕೇಬಲ್ ಕಳವು
ಚನ್ನಪಟ್ಟಣ: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಮತ್ತೆ ಕೊಳವೆಬಾವಿಗಳ ಕೇಬಲ್ ಕಳ್ಳತನ ಮುಂದುವರೆದಿದ್ದು ಸೋಮವಾರ ರಾತ್ರಿ ಕಳ್ಳಿಹೊಸೂರು, ತಿಟ್ಟಮಾರನಹಳ್ಳಿ ಗ್ರಾಮದ 40ಕ್ಕೂ ಹೆಚ್ಚು ರೈತರ ಕೇಬಲ್ಗಳನ್ನು ಕಳವು ಮಾಡಲಾಗಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರಂತರವಾಗಿ ಕೇಬಲಲ್ಕಳ್ಳತನ ನಡೆಯುತ್ತಿದ್ದು, ಸೋಮುವಾರ ರಾತ್ರಿ 2 ಲಕ್ಷ ರು. ಗಳಿಗೂ ಅಧಿಕ ಮೌಲ್ಯದ ಕೇಬಲ್ಗಳನ್ನು ಕಳವು ಮಾಡಿದ್ದು, ಈ ಸಂಬಂಧ ರೈತರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ರೈತರ ಕೊಳವೆ ಬಾವಿಗಳಿಗೆ ಅಳವಡಿಸಿರುವ ಕೇಬಲ್ ಕಳವು ಮಾಡಿ ಅದರಲ್ಲಿರುವ ತಾಮ್ರದ ತಂತಿಗಳನ್ನು ತೆಗೆದು ಮಾರಾಟ ಮಾಡುವ ಕಳ್ಳರು ರಾತ್ರಿವೇಳೆ ನಿರಂತರವಾಗಿ ಕೇಬಲ್ಗಳನ್ನು ಕಳವು ಮಾಡುತ್ತಿದ್ದಾರೆ. ಕೊಳವೆಬಾವಿಗೆ ಅಳವಡಿಸಿರುವ ಕೇಬಲ್ ಕಳವು ಮಾಡುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಸ್ಮಶಾನದಲ್ಲಿ ಅಪರಿಚಿತ ಶವ ಪತ್ತೆ
ದೊಡ್ಡಬಳ್ಳಾಪುರ: ಇಲ್ಲಿನ ಸಂಜಯನಗರದಲ್ಲಿರುವ ಸ್ಮಶಾನ ಪ್ರದೇಶದಲ್ಲಿ ಅಪರಿಚಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಕಳೆದ ಕೆಲ ವರ್ಷಗಳಿಂದ ಶವಗಳನ್ನು ಹೂಳುವುದು ನಿಲ್ಲಿಸಲಾಗಿದೆ.
ಆದರೆ ಹಳೆಯ ಗೋರಿಗಳನ್ನೂ ಆವರಿಸಿಕೊಂಡು ಬೆಳೆದಿರುವ ಪೊದೆಯೊಂದರಲ್ಲಿ ಶವ ಪತ್ತೆಯಾಗಿದ್ದು ನಾಯಿಗಳು ಕಚ್ಚಿ ತಿನ್ನುತ್ತಿದ್ದವು ಎನ್ನಲಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಸುಮಾರು 7 ರಿಂದ 8 ದಿನಗಳ ಹಿಂದೆಯೇ ಮಹಿಳೆ ಸಾವನ್ನಪ್ಪಿರಬಹುದು. ಶವ ಗುರುತು ಸಿಗದಷ್ಟು ಕೊಳೆತು ಹೋಗಿದೆ.
ನಾಯಿಗಳು ದೇಹವನ್ನು ಕಿತ್ತು ತಿಂದಿವೆ. ಆದರೆ ಬಟ್ಟೆ, ಸಾವನ್ನಪ್ಪಿರಬಹುದಾದ ರೀತಿ ಪರಿಶೀಲಿಸಿದರೆ ಈಕೆ ಮಾನಸಿಕ ಅಸ್ವಸ್ಥೆ ಇರಬಹುದು ಎಂದು ಅನುಮಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ವಿವರ ಸಿಗಬಹುದು ಎಂದು ಪೊಲೀಸರು ಹೇಳಿದ್ದಾರೆ.