ಕರ್ತವ್ಯಲೋಪ: ಸೇವೆಯಿಂದ ಪಿಡಿಒ ಅಮಾನತು
ರಾಮನಗರ: ಕನಕಪುರ ತಾಲೂಕಿನ ಹೇರಂದ್ಯಾಪನಹಳ್ಳಿ ಗ್ರಾ.ಪಂ. ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಜೆ.ಜಿ.ಶಿವಕುಮಾರ್ ಅವರನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಪಡಿಸಲಾಗಿದೆ.
ಶಿವಕುಮಾರ್ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಹೇರಂದ್ಯಾಪನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಿಜ್ಜನಹಳ್ಳಿ ಗ್ರಾಮದಲ್ಲಿ ಗಟ್ಟಿಗುಂದ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾಗಿತ್ತು.
ಇದೇ ಕಾಮಗಾರಿಗೆ ನರೇಗಾ ಯೋಜನೆಯಡಿ 960 ಮಾನವ ದಿನಗಳನ್ನು ಶಿವಕುಮಾರ್ ಸೃಷ್ಟಿಸಿದ್ದರು. ಉದ್ಯೋಗ ಖಾತ್ರಿ ಯೋಜನೆಯ ನಿಯಮಗಳನ್ನು ಪಾಲಿಸದೇ ಗ್ರಾಮ ಪಂಚಾಯತಿಯ ಹಿತಾಸಕ್ತಿಗೆ ದಕ್ಕೆ ತಂದಿರುವುದು, ಬೇಜವಾಬ್ದಾರಿತನ ಮತ್ತು ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಶಿವಕುಮಾರ್ ವಿರುದ್ಧ ತನಿಖೆ ನಡೆದಿತ್ತು.
ಮಹಿಳೆ ನಾಪತ್ತೆ
ರಾಮನಗರ: ತಾಲೂಕಿನ ಚಾಮುಂಡಿಪುರದ ನಿವಾಸಿ ಕೆ.ಎಸ್. ಕುಮಾರಸುಬ್ರಹ್ಮಣ್ಯ ಅವರ ಪತ್ನಿ 39 ವರ್ಷದ ಸವಿತಾ ಜ.2ರಿಂದ ಕಾಣೆಯಾಗಿದ್ದಾರೆ. ಗುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, 4.4 ಅಡಿ ಎತ್ತರವಿರುವ ಸವಿತಾ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆ ಮಾತನಾಡಬಲ್ಲಳು. ಈಕೆಯ ಸುಳಿವು ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಐಜೂರು ಠಾಣೆ ಎಸ್ಐ ಕೋರಿದ್ದಾರೆ.
ವಿದ್ಯುತ್ ಸರಬರಾಜು ಇಲ್ಲ
ರಾಮನಗರ: ಹಾಲಿ ಇರುವ ವಿದ್ಯುತ್ ಮಾರ್ಗಗಳಿಗೆ ಎ.ಬಿ. ಕೇಬಲ್ ಅಳವಡಿಸುವ ಕಾಮಗಾರಿ ನಡೆಸಬೇಕಿರುವುದರಿಂದ ಬಿಡದಿ ಉಪವಿಭಾಗ ವ್ಯಾಪ್ತಿಯ ವಂಡರ್ ಲಾ, ಟ್ರಿನಿಟಿ ಬೇವರೇಜಸ್, ಫೆದರ್ ಲೈಟ್, ಬಿ.ಎಂ.ರಸ್ತೆಯ ಹೆಜ್ಜಾಲ, ಮಂಚನಾಯಕಯನಹಳ್ಳಿ ಪ್ರದೇಶಗಳಲ್ಲಿ ಜ.9, 11, ಹಾಗೂ ಜ.10, 13 ರಂದು ಬಿಡದಿ, ಕೇತಿಗಾನಹಳ್ಳಿ, ವಾಜರಹಳ್ಳಿ ಮತ್ತು ಬನ್ನಿಕುಪ್ಪೆಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ದುಷ್ಕರ್ಮಿಗಳಿಂದ ಮಹಿಳೆ ಹತ್ಯೆ
ರಾಮನಗರ: ಅಪರಿಚಿತ ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ಹತ್ಯೆ ಮಾಡಿ ಗುರುತು ಸಿಗದಂತೆ ಶವವನ್ನು ಸುಟ್ಟು ಹಾಕಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ರಾಮಸಂದ್ರ ಗ್ರಾಮದಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ. ಮಾರಸಂದ್ರದ ಲೇಟ್ ಬೈರಲಿಂಗಯ್ಯ ಅವರ ಪತ್ನಿ ಮಾರಕ್ಕ (65) ಕೊಲೆಯಾದ ಮಹಿಳೆ. ಆಕೆ ವಾಸವಿದ್ದ ಮನೆಯ ಸಮೀಪವೇ ಶವವನ್ನು ಸುಟ್ಟು ಹಾಕಲಾಗಿದೆ. ಈ ಸಂಬಂಧ ಮೃತಳ ಪುತ್ರ ಗಣೇಶಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಜಮೀನು ವ್ಯಾಜ್ಯ ಅಥವಾ ಮನೆ ವಿಷಯದ ಕಲಹ ಹಿನ್ನೆಲೆಯಲ್ಲಿ ತನ್ನ ತಾಯಿಯನ್ನು ಕೊಲೆ ಮಾಡಿರಬಹುದು ಎಂದು ದೂರಿಲ್ಲಿ ಗಣೇಶಪ್ಪ ಮೂವರ ವಿರುದ್ಧ ಸಂಶಯ ವ್ಯಕ್ತಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಇಂದು ಸ್ವಾಮಿ ವಿವೇಕಾನಂದರ ಜಯಂತಿ
ವಿಜಯಪುರ: ಸ್ವಾಮಿ ವಿವೇಕಾನಂದರ 150ನೇ ಜಯಂತಿ ಕಾರ್ಯಕ್ರಮವನ್ನು ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವು ಜ. 9ರಂದು ಬೆಳಿಗ್ಗೆ 11 ಘಂಟೆಗೆ ನಡೆಯಲಿದ್ದು ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಸಮಿತಿ , ಶಕ್ತಿ ಸಂವರ್ಧಿನಿ ವತಿಯಿಂದ ಏರ್ಪಡಿಸಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಸಂಯೋಜಕರಾದ ಭಾರತಿ ಪ್ರಭುದೇವ್ ವಹಿಸಲಿದ್ದು, ಉದ್ಘಾಟನೆಯನ್ನು ಇನ್ನರ್ ವೀಲ್ ಸಂಸ್ಥೆಯ ಜಿಲ್ಲಾ ಚೇರ್ಮನ್ ನೆರವೇರಿಸಲಿದ್ದಾರೆ. ಕೆಂಪೇಗೌಡ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಪ್ರಭಾವತಿದೇವರಾಜ್ ಗೌರವಾಧ್ಯಕ್ಷರಾಗಿ, ಜಿಲ್ಲಾ ಯುವ ಪ್ರಭಾರಿ ನಿತ್ಯಾನಂದ, ತಾಲೂಕು ದಂಡಾಧಿಕಾರಿ ವಿ.ಸಿ.ವೆಂಕಟರಾಜು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಾಳೆ ಜಿ.ಪಂ. ವಿಶೇಷ ಸಭೆ
ರಾಮನಗರ: ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಜಿಲ್ಲಾ ಪಂಚಾಯಿತಿ ವಿಶೇಷ ಸಭೆಯು ಜ.10ರ ಬೆಳಗ್ಗೆ 11ಕ್ಕೆ ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಅವರ ಅಧ್ಯಕ್ಷತೆಯಲ್ಲಿ ಜಿ.ಪಂ. ಸಭಾಂಗಣದಲ್ಲಿ ನಡೆಯಲಿದೆ ಎಂದು ಸಿಇಒ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ. ಈ ಸಭೆಯಲ್ಲಿ ಸಾಮಾನ್ಯ ಸ್ಥಾಯ ಸಮಿತಿ, ಹಣಕಾಸು ಲೆಕ್ಕ ಪರಿಶೋಧನೆ, ಯೋಜನಾ ಸ್ಥಾಯಿ ಸಮಿತಿ ಹಾಗೂ ಕಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗಳ 2ನೇ ಅವಧಿಗೆ ಚುನಾಯಿತರಾಗಿದ್ದ ತಲಾ ಒಬ್ಬ ಸದಸ್ಯರ ರಾಜಿನಾಮೆಯಿಂದ ತೆರವಾಗಿರುವ ಉಳಿದ ಅವಧಿಯ ಸದಸ್ಯತ್ವಕ್ಕೆ ಚುನಾವಣೆ ನಡೆಸಲಾಗುವುದು.
ಕನಕಪುರ ತಾಲೂಕಿನ ವ್ಯಾಪ್ತಿಯಲ್ಲಿ ಎಚ್ಡಿಕೆ ಗ್ರಾಮ ಸಂಚಾರ
ರಾಮನಗರ: ವಿಧಾನಸಭೆ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ನಾಳೆ (ಜ.9)ಯಿಂದ ಮೂರು ದಿನ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಕನಕಪುರ ತಾಲೂಕಿನ ವ್ಯಾಪ್ತಿಯಲ್ಲಿ ಗ್ರಾಮ ಸಂಚಾರ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ. ಜ.9 ಮತ್ತು 10 ರಂದು ಮರಳವಾಡಿ, ಜ.11ರಂದು ಹಾರೋಹಳ್ಳಿ ಹೋಬಳಿಯಲ್ಲಿ ಅವರು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ಸಂಚಾರ ನಡೆಸಲಿದ್ದಾರೆ. ಈ ವೇಳೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಸ್ಥಳದಲ್ಲೇ ಪರಿಹರಿಸುವರು.
ವೈಕುಂಠ ಏಕಾದಶಿ
ಚೇಳೂರು: ಗುಬ್ಬಿ ತಾಲೂಕು, ಹೊಸಕೆರೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಕಾರ್ಯಕ್ರಮವನ್ನು ಜನವರಿ 11 ರಂದು ಶನಿವಾರ ಹಮ್ಮಿಕೊಳ್ಳಲಾಗಿದೆ.