ಕಲಾವಂತಿಕೆ ಉಳಿಸುವುದು ಅನಿವಾರ್ಯ
ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜಾತ್ರೆ ಅಂಗವಾಗಿ ತಾಲೂಕು ಪಂಚಾಯಿತಿ ಮತ್ತು ಮುಜರಾಯಿ ಇಲಾಖೆ ಸಹಯೋಗದಲ್ಲಿ 3 ದಿನಗಳ ಕಾಲ ನಡೆದ ನಾಟಕೋತ್ಸವ ಮತ್ತು ವಿವಿಧ ಸಾಂಸ್ಕೃತಿಕ ಉತ್ಸವದ ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಸರ್ಕಾರ ಕಲಾವಿದರಿಗೆ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ರೂಪಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಂತಹ ಸಂಸ್ಥೆಗಳು ಕಲಾವಿದರಿಗೆ ಪೂರಕವಾದ ಯೋಜನೆಗಳ ಮೂಲಕ ಅಶಕ್ತ ಕಲಾವಿದರಿಗೆ ನೆರವಾಗಬೇಕು. ಪೀಳಿಗೆಗಳಿಗೆ ಉಳಿಯುವಂತಹ ಕಲಾವಂತಿಕೆಯನ್ನು ರೂಪಿಸುವ ಹೊಣೆಗಾರಿಕೆ ಸಮಾಜ ಮತ್ತು ಸರ್ಕಾರಗಳ ಮೇಲಿದೆ. ರಂಗಕಲೆಯ ನಿರ್ಲಕ್ಷ್ಯ ಸಲ್ಲದು ಎಂದರು.
3 ದಿನಗಳ ಕಾಲ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಭಜನೆ, ಸಾಂಸ್ಕೃತಿಕ ರಂಗ ಕಾರ್ಯಕ್ರಮಗಳು, ಯಕ್ಷಗಾನ, ಸಾಮಾಜಿಕ ನಾಟಕಗಳು, ಪೌರಾಣಿಕ ನಾಟಕಗಳ ಪ್ರದರ್ಶನ ನಡೆಯಿತು.
ಕಲಾವಿದರಿಗೆ ನೆನಪಿನ ಕಾಣಿಕೆ ಮತ್ತು ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ತಾಲೂಕಿನ ಮೆಳೇಕೋಟೆ ಗ್ರಾಮದ ರಾಮಾಂಜನೇಯ ರಂಗಭೂಮಿ ಕಲಾವಿದರ ಸಂಘದಿಂದ ಪ್ರದರ್ಶನಗೊಂಡ ಕುರುಕ್ಷೇತ್ರ ನಾಟಕಕ್ಕೆ ಪ್ರಥಮ, ದೇವನಹಳ್ಳಿಯ ಕುಂದಾಣದ ಎ.ಗೋಪಾಲ್ ಡ್ರಾಮಾ ಮಾಸ್ಟರ್ ಮತ್ತು ತಂಡದ ರಾಜಸತ್ಯವ್ರತ ನಾಟಕಕ್ಕೆ 2ನೇ ಬಹುಮಾನ ಮತ್ತು ತಿಮ್ಮಸಂದ್ರದ ಮಾರುತಿ ಕೃಪಾ ಪೋಷಿತ ನಾಟಕ ಮಂಡಲಿಯ ಕುರುಕ್ಷೇತ್ರ ನಾಟಕಕ್ಕೆ 3ನೇ ಬಹುಮಾನ ನೀಡಿ ಗೌರವಿಸಿಲಾಯಿತು.
ನಾಟಕೋತ್ಸವವನ್ನು ಜಾತ್ರೆ ಸಂದರ್ಭಕ್ಕಿಂತ ಮುಖ್ಯವಾಗಿ ದನಗಳ ಜಾತ್ರೆ ವೇಳೆಯೇ ನಡೆಸಿದರೆ ಉತ್ತಮ.
ಇದಕ್ಕೆ ಸಂಬಂಧಿಸಿದಂತೆ ಕಲಾವಿದರ ಸಹಕಾರ ದೊರೆತರೆ ಮುಂದಿನ ಜಾತ್ರೆ ವೇಳೆಗೆ ಘಾಟಿ ದೇವಾಲಯ ಆಡಳಿತದಿಂದಲೇ ಈ ನಾಟಕೋತ್ಸವ ಆಯೋಜನೆ ಮಾಡುವ ಕುರಿತು ಚಿಂತನೆ ನಡೆಯಲಿದೆ.
ತಾಲೂಕು ಪಂಚಾಯಿತಿ ಅಧ್ಯಕ್ಷೆ ನರಸಮ್ಮ, ಉಪಾಧ್ಯಕ್ಷ ಕೆ.ಮುನಿಯಪ್ಪ, ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣಕುಮಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥರೆಡ್ಡಿ, ಘಾಟಿ ಗ್ರಾ.ಪಂ ಪಿಡಿಓ ನಾರಾಯಣಪ್ಪ, ತಾ.ಪಂ ಸದಸ್ಯ ಡಾ.ವಿಜಯಕುಮಾರ್, ನಾಗರಾಜ್, ಶ್ಯಾಮಲ, ದೀಪಾ, ಮಂಜುಳಮ್ಮ, ರಾಜಣ್ಣ, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೆಂಪಣ್ಣ, ಕಲಾವಿದ ಆಂಜನಪ್ಪ, ರಾಮಾಂಜಿನಪ್ಪ ಮತ್ತಿತರರು ಭಾಗವಹಿಸಿದ್ದರು.