ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತಾಳ್ಕೆರೆ ಗ್ರಾಪಂನಲ್ಲಿ ಅವ್ಯವಹಾರ, ತನಿಖೆಗೆ ಆಗ್ರಹ

Vishwanath S
Updated On : 9 Jan 2014, 1:23 am

ತುರುವೇಕೆರೆ: ತಾಲೂಕಿನ ತಾಳಕೆರೆ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮಸ್ಥರಿಂದ ಸಂಗ್ರಹಿಸಿದ ತೆರಿಗೆ ಪಾವತಿಯಿಂದ ಹಿಡಿದು ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾಡಲಾಗಿದೆ ಎಂದು ಬಿಂಬಿಸಲಾಗಿರುವ ಕಾಮಗಾರಿಯ ತನಕ ಲೋಪವಾಗಿದೆ. ಇದನ್ನು ಕೂಡಲೇ ಸಂಪೂರ್ಣ ತನಿಖೆಗೆ ಒಳಪಡಿಸಬೇಕು ಎಂದು ತಾಳ್ಕೆರೆಯ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಟಿಎಪಿಸಿಎಂಎಸ್‌ನ ನಿರ್ದೇಶಕ ಡಿ.ಪಿ.ರಾಜು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯದರ್ಶಿಯವರನ್ನು ಒತ್ತಾಯಿಸಿದ್ದಾರೆ.
 ತಾಳ್ಕೆರೆಯ ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಗ್ರಾಮಸ್ಥರಿಂದ ತೆರಿಗೆ ಸಂಗ್ರಹಿಸಿರುವ ನಗದು ಒಂದಾದರೆ ಅವರು ಪಂಚಾಯ್ತಿಗೆ ನೀಡಿರುವ ಲೆಕ್ಕವೇ ಬೇರೆ. ಸಾರ್ವಜನಿಕರಿಗೆ ನೀಡಿರುವ ಪಾವತಿ ರಸೀತಿಯಲ್ಲಿ ಹೆಚ್ಚು ಹಣವನ್ನು ಪಡೆದಿದ್ದರೂ ಗ್ರಾಮ ಪಂಚಾಯ್ತಿಗೆ ಸಲ್ಲಿಸಿರುವ ಲೆಕ್ಕದಲ್ಲಿ ರಸೀತಿಯನ್ನು ತಿದ್ದಿ ಕಡಿಮೆ ಹಣ ಜಮಾ ಮಾಡಿರುವ ಸಂಗತಿಯು ಮಾಹಿತಿ ಹಕ್ಕಿನಿಂದ ಬಟ್ಟಾ ಬಯಲಾಗಿದೆ ಎಂದು ತಿಳಿಸಿದ್ದಾರೆ.
ಬಿಲ್ ಕಲೆಕ್ಟರ್ ಕೆಂಪಯ್ಯನವರು ಕಳೆದ ಏಪ್ರಿಲ್‌ನಿಂದ ಸಾರ್ವಜನಿಕರಿಂದ ಕಂದಾಯ ವಸೂಲು ಮಾಡಿರುವ ಕಂದಾಯವನ್ನು ಅವರು ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಸರಿಯಾಗಿ ಪಾವತಿ ಮಾಡಬೇಕಾದುದು ಕರ್ತವ್ಯ. ಆದರೆ ಪ್ರತಿ ತಿಂಗಳೂ ಸಾವಿರಾರು ರು.ಗಳನ್ನು ಸ್ವಂತ ಬಳಕೆಗೆ ಉಳಿಸಿಕೊಂಡಿರುವುದೂ ಮಾಹಿತಿ ಹಕ್ಕಿನಿಂದ ಬಹಿರಂಗವಾಗಿದೆ ಎಂದು ಡಿ.ಪಿ.ರಾಜು ತಿಳಿಸಿದ್ದಾರೆ.  ಕಳೆದ ಸೆಪ್ಟಂಬರ್‌ವರೆಗೂ ಬಿಲ್ ಕಲೆಕ್ಟರ್ ಸುಮಾರು 91 ಸಾವಿರಕ್ಕೂ ಹೆಚ್ಚು ಹಣ ಪಾವತಿ ಮಾಡದೇ ಕರ್ತವ್ಯ ಚ್ಯುತಿ ಮಾಡಿರುವುದು ಬೆಳಕಿಗೆ ಬಂದಿದೆ.
13- 14 ನೇ ಸಾಲಿನ 13 ನೇ ಹಣಕಾಸಿನ 1 ನೇ ಹಂತದ ಕಾಮಗಾರಿಯಲ್ಲಿ ಎಸ್ ಸಿ, ಎಸ್ ಟಿ ಜನಾಂಗದ ಅಭಿವೃಧ್ಧಿಗಾಗಿ ಮೀಸಲಿಟ್ಟಿದ್ದ ಸುಮಾರು 1.65 ಲಕ್ಷ ರು.ಗಳನ್ನು ಹಾಗೂ ಅಂಗವಿಕಲರ ಕಲ್ಯಾಣ ನಿಧಿಯನ್ನು ಸದರಿ ಯೋಜನೆಗೆ ಬಳಸದೇ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದೂ ಸಹ ಮಾಹಿತಿ ಹಕ್ಕಿನಿಂದ ಬಹಿರಂಗವಾಗಿದೆ.
ಮಾಡಲಾಗಿರುವ ಕಾಮಗಾರಿಯಲ್ಲಿ ಲೋಪ, ಕಾಮಗಾರಿ ನಡೆಯುವ ಮುನ್ನವೇ ಹಣ ಪಾವತಿ, ಕೆಲವು ಶಾಲೆಗಳಿಗೆ ನೀಡಲಾಗಿರುವ ಪೀಠೋಪಕರಣಗಳೂ ಕಳಪೆ ಹೀಗೆ  ಹತ್ತಾರು ಅಕ್ರಮಗಳನ್ನು ಎಸಗಿರುವ ತಾಳ್ಕೆರೆಯ ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಹಾಗೂ ಅಕ್ರಮವಾಗಲು ಅವಕಾಶ ನೀಡಿರುವ ಅಧ್ಯಕ್ಷರ ವಿರುದ್ಧ ಕ್ರಮ ಜರುಗಿಸಬೇಕು, ಅಧಿಕಾರಿಗಳನ್ನು ಅಮಾನತಿನಲ್ಲಿಡಬೇಕು  ಡಿ.ಪಿ.ರಾಜು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯದರ್ಶಿಗಳನ್ನು ಒತ್ತಾಯಿಸಿದ್ದಾರೆ. ತಾಳ್ಕೆರೆ ಗ್ರಾಮ ಪಂಚಾಯ್ತಿಯ ಅವ್ಯವಹಾರ ಸಂಬಂಧ ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸುವುದಾಗಿಯೂ ಡಿ.ಪಿ.ರಾಜು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement