ದೊಡ್ಡಬಳ್ಳಾಪುರದಲ್ಲಿ ಗೀತಾ ಜಯಂತಿ ಸಮಾರೋಪ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀಶಂಕರಾನಂದ ಪಾರ್ಥಸಾರಥಿ ಗೀತಾ ಮಂದಿರ ನೇತೃತ್ವದಲ್ಲಿ ಗೀತಾ ಜಯಂತಿ ಮತ್ತು ಗೀತಾ ಪಾರಾಯಣ ಕಾರ್ಯಕ್ರಮ ಡಿಕ್ರಾಸ್ ರಸ್ತೆಯಲ್ಲಿರುವ ಶ್ರೀಸದ್ಗುರು ಗಗನಾರ್ಯರ ಮಠದಲ್ಲಿ 3 ದಿನಗಳ ಕಾಲ ನಡೆಯಿತು.
ಕಾರ್ಯಕ್ರಮನದಲ್ಲಿ ಪ್ರವಚನ ನೀಡಿದ ಶ್ರೀಜ್ಞಾನಾನಂದಸ್ವಾಮೀಜಿ, ಜೀವನದಲ್ಲಿ ಸಂಕಷ್ಟಗಳನ್ನು ಗೆಲ್ಲುವ ಸಾಮರ್ಥ್ಯ ಮತ್ತು ಜೀವನಪ್ರೀತಿಯನ್ನು ಬೆಳೆಸಿಕೊಳ್ಳುವ ಮಾರ್ಗದರ್ಶಿ ಸೂತ್ರವೇ ಭಗವದ್ಗೀತೆ. ಸೋಲುಗಳನ್ನು ಯಾವಾಗಲೂ ಅತ್ಯಂತ ಆದರದಿಂದ ಸ್ವಾಗತಿಸಬೇಕು. ಅದೇ ರೀತಿಯಾಗಿ ಗೆಲ್ಲುವ ಚಿಂತನೆಯನ್ನು, ನಿರ್ದಿಷ್ಟ ಗೊತ್ತುಗುರಿಗಳನ್ನು ಪರಿಶ್ರಮವಹಿಸಿ ಚಿಂತಿಸಬೇಕು. ಆಗ ಮಾತ್ರ ಯಶಸ್ವಿ ಬದುಕು ನಮ್ಮದಾಗುತ್ತದೆ. ಇಂದಿನ ದಿನಗಳಲ್ಲಿ ಶಾರೀರಿಕ ಹಿತಗಳಿಗೆ ಪ್ರಾಧಾನ್ಯತೆ ಕೊಡುತ್ತಿರುವ ನಾವು ಮನುಷ್ಯ ಭಾವನೆಗಳನ್ನು ಗೌರವಿಸುತ್ತಿಲ್ಲ. ಮನುಷ್ಯ-ಮನುಷ್ಯರ ಮಧ್ಯೆ ಉತ್ತಮ ಬಾಂಧವ್ಯ ಇದ್ದಾಗ ಮಾತ್ರವೇ ಸುಖೀ ಜೀವನ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಶ್ರೀಆನಂದಭಾರತಿ ಸ್ವಾಮೀಜಿ ಕೂಡ ಪ್ರವಚನ ನೀಡಿದರು. ಸೀತಕೆಂಪನಹಳ್ಳಿ ಅಪ್ಪಯ್ಯದಾಸರು ಮತ್ತು ಸಂಗಡಿಗರಿಂದ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಗಳಲ್ಲಿ ಗೀತಾ ಮಂದಿರ ಟ್ರಸ್ಟ್ನ ಪದಾಧಿಕಾರಿಗಳು, ಭಕ್ತವೃಂದದ ಸದಸ್ಯರು ಭಾಗವಹಿಸಿದ್ದರು. ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಅರ್ಚಕರಿಂದ ಭಕ್ತರ ನಿಂದನೆ: ಕ್ರಮಕ್ಕೆ ಆಗ್ರಹ
ನೆಲಮಂಗಲ: ಅರ್ಚಕರೊಬ್ಬರು ದೇವಸ್ಥಾನದ ಭಕ್ತರೊಬ್ಬರಿಗೆ ನಿಂದಿಸಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್ ಡಾ.ಗೀತಾ ಅವರಿಗೆ ಮಹಿಳೆಯರು ದೂರು ನೀಡಿದ ಘಟನೆ ಬುಧವಾರ ನಡೆದಿದೆ.
ಪಟ್ಟಣದ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನದ ಅರ್ಚಕರಾದ ಗಂಗಾಧರಶರ್ಮ ಎಂಬುವರು ಪೂಜೆ ಕಾರ್ಯ ನೆರವೇರಿಸಲು ಕಲಾವತಿ ಎಂಬ ಭಕ್ತರು ವಿನಂತಿಸಿದಾಗ, ಅರ್ಚಕರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದರು. ಪೂಜಾ ಕಾರ್ಯವನ್ನು ತಿರಸ್ಕರಿಸಿರುವ ಅರ್ಚಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಮಹಿಳಾ ಸಂಘಗಳ ಜೊತೆಗೂಡಿ ನಿಂದನೆಗೊಳಗಾಗಿದ್ದ ನೊಂದ ಕಲಾವತಿ ದೂರು ಸಲ್ಲಿಸಿದ್ದಾರೆ.
ದೂರು ಸ್ವೀಕರಿಸಿದ ಡಾ.ಗೀತಾ ಅರ್ಚಕರ ವರ್ತನೆಯನ್ನು ಖಂಡಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ರಾಜಸ್ವ ನಿರೀಕ್ಷಕ ನಂಜಪ್ಪ, ಗ್ರಾಮ ಲೆಕ್ಕಾಧಿಕಾರಿ ರವಿ ಅವರಿಗೆ ಸೂಚಿಸಿದ್ದಾರೆ.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ರಾಜಮ್ಮ, ಜಯಂತಿ, ಗಾಯಿತ್ರಿ, ಕಲಾವತಿ ಇದ್ದರು.