ಪಲ್ಸ್ ಪೊಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಿ: ಜಿಲ್ಲಾಧಿಕಾರಿ
ರಾಮನಗರ: ಜ. 19ರಂದು ಜಿಲ್ಲಾದ್ಯಂತ ಪಲ್ಸ್ ಪೊಲಿಯೋ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಸೂಚನೆ ನೀಡಿದರು.
ಕಂದಾಯ ಭವನದ ಸಭಾಂಗಣದಲ್ಲಿ ಬುಧವಾರ ನಡೆದ ಪಲ್ಸ್ ಪೊಲಿಯೋ ಲಸಿಕೆ ಕಾರ್ಯಪಡೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೊಲಿಯೋ ಕಾರ್ಯಕ್ರಮಕ್ಕೆ ಅಂದು ನಿರಂತರ ವಿದ್ಯುತ್ ಪೂರೈಸಲು ಬೆಸ್ಕಾಂಗೆ ನಿರ್ದೇಶಿಸಿದರು.
ಲಸಿಕೆ ಹಾಕುವ ಸ್ಥಳಗಳಾದ ಅಂಗನವಾಡಿ, ಆರೋಗ್ಯ ಕೇಂದ್ರ, ಶಾಲಾ ಆವರಣಗಳಲ್ಲಿ ಸ್ವಚ್ಛತೆ ಕಾಪಾಡಲು ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು. ಎಲ್ಲ ಇಲಾಖೆಗಳು ಕಾರ್ಯಕ್ರಮದ ಸಾಫಲ್ಯಕ್ಕೆ ನೆರವಾಗಬೇಕು ಎಂದರು.
541 ಕೇಂದ್ರ ಸ್ಥಾಪನೆ: ರಾಮನಗರ ಜಿಲ್ಲೆಯಲ್ಲಿ ಒಟ್ಟಾರೆ 541 ಪೊಲಿಯೋ ಬೂತ್‌ಗಳನ್ನು ಸ್ಥಾಪಿಸಲಾಗುತ್ತಿದೆ. ರಾಮನಗರ ತಾಲೂಕಿನಲ್ಲಿ 134, ಕನಕಪುರದಲ್ಲಿ 176, ಮಾಗಡಿಯಲ್ಲಿ 91 ಹಾಗೂ ಚನ್ನಪಟ್ಟಣದಲ್ಲಿ 140 ಕೇಂದ್ರಗಳಿರುತ್ತವೆ ಎಂದು ವಿಶ್ವನಾಥ್ ಹೇಳಿದರು.
2164 ಕಾರ್ಯಕರ್ತರು ಹಾಗೂ 108 ಮೇಲ್ವಿಚಾರಕರು ಕಾರ್ಯ ನಿರ್ವಹಿಸಲಿದ್ದಾರೆ. ಪಲ್ಸ್ ಪೊಲಿಯೋ ಲಸಿಕೆ ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿ ಜನತೆಗೆ ಸಾಕಷ್ಟು ಅರಿವು ನೀಡುವ ಕೆಲಸ ಆಗಬೇಕು ಎಂದು ತಿಳಿಸಿದರು.
ಲಸಿಕೆ ಹಾಕಿಸಿ: 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಪಲ್ಸ್ ಪೊಲಿಯೋ ಲಸಿಕೆ ಹಾಕಿಸಲು ಪೋಷಕರು ಮುಂದಾಗಬೇಕು. ಜ.19ರಂದು ಲಸಿಕೆ ಹಾಕಿಸದ ಮಕ್ಕಳಿಗೆ ಜ.20 ರಿಂದ 22ರವರೆಗೆ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಸಿಕೆ ನೀಡುವರು ಎಂದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಘುನಾಥ್ ಮತ್ತಿತರರಿದ್ದರು.