ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸೆಮಿಸ್ಟರ್ ಪದ್ಧತಿ ಹಿಂಪಡೆಯಲು ಆಗ್ರಹ

Vishwanath S
Updated On : 9 Jan 2014, 1:22 am

ರಾಮನಗರ: ಐಟಿಐ ಕಾಲೇಜುಗಳ ಕುಶಲಕರ್ಮಿ ತರಬೇತಿ ಕೋರ್ಸ್‌ಗಳಲ್ಲಿ ಏಕಾಏಕಿ ಜಾರಿಗೊಳಿಸಿರುವ ಸೆಮಿಸ್ಟರ್ ಪದ್ಧತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಐಟಿಐ ವಿದ್ಯಾರ್ಥಿಗಳ ಹೋರಾಟ ಸಮಿತಿಯಿಂದ  ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ನೂರಾರು ಐಟಿಐ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಅಪರ ಜಿಲ್ಲಾಧಿಕಾರಿ ಬಸವರಾಜು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಐಟಿಐ ಕಾಲೇಜುಗಳಿಗೆ ಆ. 2013ರಲ್ಲಿ ಬಹುಪಾಲು ಪ್ರವೇಶ ಪ್ರಕ್ರಿಯೆ ಮುಗಿದ ಮೇಲೆ ದೀರ್ಘ ಕಾಲೀನ ಬೋಧನಾ ಪದ್ಧತಿ ಹಾಗೂ ತರಬೇತಿಯನ್ನು ಬದಲಾಯಿಸಿ ಸೆಮಿಸ್ಟರ್ ಪದ್ಧತಿಯನ್ನು ಜಾರಿಗೊಳಿಸಿದೆ. ಇದು ಅವ್ಶೆಜ್ಞಾನಿಕ ತೀರ್ಮಾನವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.  
ಸೆಮಿಸ್ಟರ್ ಪದ್ಧತಿಯನ್ನು ಜಾರಿಗೊಳಿಸುವ ಮುನ್ನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಮಾಲೋಚನೆ ನಡೆಸಿಲ್ಲ. ಸೆಮಿಸ್ಟರ್ ಪದ್ಧತಿಯಲ್ಲಿ ಕೆಲವೊಂದು ಹೊಸ ಕೋರ್ಸ್‌ಗಳನ್ನು ಸೇರಿಸಲಾಗಿದ್ದು, ಇದನ್ನು ಬೋಧಿಸುವ ಉಪನ್ಯಾಸಕರಿಗೂ ಈ ಬಗ್ಗೆ ಸೂಕ್ತ ತರಬೇತಿ ನೀಡಿಲ್ಲ ಎಂದು ಹೇಳಿದರು.
ಗೊಂದಲ: ದೀರ್ಘ ಕಾಲೀನ ಬೋಧನಾ ಕ್ರಮದಲ್ಲಿ 2 ವರ್ಷಕ್ಕೆ ಒಂದು ಬಾರಿ ಪರೀಕ್ಷೆ ನಡೆಸಲಾಗುತ್ತಿತ್ತು. ಸೆಮಿಸ್ಟರ್ ಪದ್ಧತಿಯಲ್ಲಿ 2 ವರ್ಷಕ್ಕೆ 4 ಪರೀಕ್ಷೆ ನಡೆಸಲಾಗುತ್ತದೆ. ಪಠ್ಯಕ್ರಮದ ಬದಲಾಯಿಸಿರುವುದಕ್ಕೆ ಡೈರೆಕ್ಟರೇಟ್ ಜನರಲ್ ಆಫ್ ಎಂಪ್ಲಾಯ್‌ಮೆಂಟ್ ಅಂಡ್ ಟ್ರೈನಿಂಗ್ ಯಾವುದೇ ಸಕಾರಣ ನೀಡಿಲ್ಲ ಎಂದರು.
ಇದೊಂದು ಬೇಜವಾಬ್ದಾರಿ ನಡವಳಿಕೆಯಾಗಿದ್ದು, ಐಟಿಐ ಕಾಲೇಜಿನ ಪ್ರಾಂಶುಪಾಲರು ಹಾಗೂ ಬೋಧಕ ಸಿಬ್ಬಂದಿಯೂ ಕೂಡ ಗೊಂದಲಕ್ಕೊಳಗಾಗಿದ್ದಾರೆ ಎಂದು ತಿಳಿಸಿದರು. ಅದನ್ನು ತಕ್ಷಣ ಹಿಂಪಡೆಯುವಂತೆ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ಕಾಲ ದೂಡುತ್ತಿದ್ದಾರೆ. ಅವೈಜ್ಞಾನಿಕ ಆದೇಶ ಹಿಂತೆಗೆದುಕೊಳ್ಳದಿದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ನಾಯಕಿ ಎಸ್. ಶೋಭಾ ಹಾಗೂ ಎಐಡಿವೈಒ ಜಿಲ್ಲಾ ಮುಖ್ಯಸ್ಥ ಭರತ್ ಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ತಾಲೂಕಿನ ವಿವಿಧ ಐಟಿಐ ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಮುಖ ಬೇಡಿಕೆಗಳು
1. ಹೊಸದಾಗಿ ಜಾರಿಗೊಳಿಸಿರುವ ಸೆಮಿಸ್ಟರ್ ಪದ್ಧತಿಯನ್ನು ಕೂಡಲೆ ಕೈ ಬಿಟ್ಟು, ದೀರ್ಘಕಾಲೀನ ಪಠ್ಯಕ್ರಮವನ್ನೇ ಮುಂದುವರೆಸಬೇಕು.
2. ಪಠ್ಯಕ್ರಮ ಬದಲಾವಣೆಗೆ ಸಾಕಷ್ಟು ಸಮಯಾವಕಾಶ ನೀಡಿ, ತಜ್ಞರ ಹಾಗೂ ಎಲ್ಲಾ ಭಾಗೀದಾರರ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಂಡು ಮುಂದುವರೆಯಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement