ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಉನ್ನತ ಶಿಕ್ಷಣದಿಂದ ದೇಶದ ಅಭಿವೃದ್ಧಿ

Vishwanath S
Updated On : 10 Jan 2014, 1:08 am

ಕ.ಪ್ರ.ವಾರ್ತೆ ,  ರಾಮನಗರ ,  ಜ.9
ದೇಶದ ಸಂಪತ್ತನ್ನು ಸಂರಕ್ಷಿಸಿ, ಭಾರತವನ್ನು ವಿಶ್ವದಲ್ಲೇ ಶಕ್ತಿಶಾಲಿ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ನಮ್ಮ ಸಂವಿಧಾನದ ಬಗ್ಗೆ ಅರಿವು ಮೂಡಿಸಬೇಕು ಎಂದು ತಾಪಂ ಉಪಾಧ್ಯಕ್ಷ ಕೆ.ಎಸ್.ಶಂಕರಯ್ಯ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗುರುವಾರ ನಡೆದ 2013-14ನೇ ಸಾಲಿನ ತಾಲೂಕು ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡದಿದ್ದರೆ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದರು.
ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾದುದು. ಸ್ವಾಮಿ ವಿವೇಕಾನಂದರು, ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದಲೇ ಜನಮಾನಸದಲ್ಲಿ ಶ್ರೇಷ್ಠ ಗುರುಸ್ಥಾನ ಪಡೆದಿದ್ದಾರೆ. ಬೇರಾವುದೇ ರಂಗದಲ್ಲಿ ವಿಫಲರಾದರೂ ಚಿಂತೆಯಿಲ್ಲ. ಆದರೆ, ಶಿಕ್ಷಕರು ಮಾತ್ರ  ಬೋಧನೆಯಲ್ಲಿ ವಿಫಲರಾಗಬಾರದು ಎಂದರು.
ದೇಶದ ಅಭಿವೃದ್ಧಿಗೆ ಯುವಜನರ ಕೊಡುಗೆ ಅಪಾರವಾದುದು. ಇಂತಹ ಯುವಕರನ್ನು ಸೃಷ್ಟಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮ ವಹಿಸಿ ದುಡಿಯಬೇಕು ಎಂದು ಕರೆ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಹಲಾವರು ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಆದರೆ, ಪೋಷಕರು ಮಾತ್ರ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಆಂಗ್ಲ ಭಾಷೆಯಲ್ಲಿ ಕಲಿತರೆ ಮಾತ್ರ ತಮ್ಮ ಮಕ್ಕಳ ಭವಿಷ್ಯ ಉತ್ತಮವಾಗಲಿದೆ ಎಂಬ ಭ್ರಮೆಯಲ್ಲಿದ್ದಾರೆ. ಇದು ತಪ್ಪು ಕಲ್ಪನೆಯಾಗಿದ್ದು, ಕನ್ನಡ ಮಾಧ್ಯಮದಲ್ಲೇ ಅಭ್ಯಸಿಸಿ ಉನ್ನತ ಹುದ್ದೆಯನ್ನು ಅಲಂಕರಿಸುವವರು ನಮ್ಮ ಕಣ್ಣ ಮುಂದೆಯೇ ಇದ್ದಾರೆ ಎಂದು ಶಂಕರಯ್ಯ ತಿಳಿಸಿದರು.
ಮಕ್ಕಳೇ ದೇಶದ ಸಂಪತ್ತು, ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ದೇಶಭಕ್ತಿ ಬೆಳೆಸಬೇಕು. ಮಹನೀಯರ ಜೀವನ ಚರಿತ್ರೆಯನ್ನು ಬೋಧಿಸುವ ಮೂಲಕ ಅವರಲ್ಲಿ ಶಿಸ್ತು ಮೂಡಿಸಬೇಕು ಹಾಗೂ ಕಲಿತ ಪಾಠಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಶಿಕ್ಷಕರು ತಿಳಿಹೇಳಬೇಕು ಎಂದು ತಾಪ ಅಧ್ಯಕ್ಷೆ ಲಕ್ಷ್ಮಿಮಂಜು ನಾಥ್ ತಿಳಿಸಿದರು.
ಕಲಿಕೋತ್ಸವವು ಸರ್ಕಾರಿ ಶಾಲೆಗಳ ಮಕ್ಕಳ ಅಭಿವೃದ್ಧಿಗೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶ ಹೊಂದಿದೆ. ಕಲಿಕೆಯಲ್ಲಿ ವಿಶೇಷ ಪ್ರತಿಭೆ ತೋರುವ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ, ಪ್ರೋತ್ಸಾಹಿಸಲಾಗುವುದು. ಕ್ಲಸ್ಟರ್, ಬ್ಲಾಕ್ಹಾಗೂ ಜಿಲ್ಲಾ 3 ಹಂತಗಳಲ್ಲಿ 1 ರಿಂದ 5 ಹಾಗೂ 6 ರಿಂದ 8ನೇ ತರಗತಿಯ ಮಕ್ಕಳಿಗೆ ಆಯೋಜಿಸಲಾಗುತ್ತಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗಿಂತ ಕಲಿಕೆ ಹಾಗೂ ಪ್ರತಿಭೆಯಲ್ಲಿ ಕಡಿಮೆ ಇಲ್ಲ ಎಂಬುದನ್ನು ಕಲಿಕೋತ್ಸವವು ಸಾಬೀತು ಪಡಿಸಿದೆ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಆರ್.ರುಕ್ಮಿಣಿ ತಿಳಿಸಿದರು.
ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟರಂಗಯ್ಯ, ಜಿ.ಪಂ. ಸದಸ್ಯೆ ಶಾಂತಮ್ಮ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಸಮನ್ವಯಾಧಿಕಾರಿ ಕೃಷ್ಣೇಗೌಡ, ಡಯಟಟ್ಹಿರಿಯ ಉಪನ್ಯಾಸಕಿ ಭಾರತಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣಯ್ಯ, ಬಿಇಒ ಎಂ.ಜಿ.ಕುಮಾರಸ್ವಾಮಿ ಮತ್ತಿತರರು ಹಾಜರಿದ್ದರು.
ಕಲಿಕೋತ್ಸವದಲ್ಲಿ ಉಕ್ತಲೇಖನ, ಪದ ಬರೆಯುವುದು, ಪತ್ರ ಲೇಖನ, ಕಂಠಪಾಠ, ಗುಣಾಕಾರದ ಮಗ್ಗಿ, ಜ್ಞಾನ ಪರೀಕ್ಷೆ, ಆಶುಭಾಷಣ ಸ್ಪರ್ಧೆ, ರಸಪ್ರಶ್ನೆ, ಸಂಭಾಷಣೆ, ನಾಟಕ, ಇಂಗ್ಲಿಷ್ ರಸಪ್ರಶ್ನೆ ಮುಂತಾದ ಸ್ಪರ್ಧೆ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement