ಗ್ರಾಮ ಸಂದರ್ಶನ
ಕನಕಪುರ: ವಿಧಾನಸಭೆ ವಿರೋಧ ಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಕನಕಪುರ ತಾಲೂಕಿನ ಮರಳವಾಡಿ ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮ ಸಂದರ್ಶನ ಸಭೆ ನಡೆಸಿದರು. ಕಡವೇಕೆರೆದೊಡ್ಡಿ, ಮಾವತ್ತೂರು, ಸುಂಡಘಟ್ಟ ಗ್ರಾಮಗಳಲ್ಲಿ ಜನ ಸಂದರ್ಶನ ನಡೆಸಿ ಸಾರ್ವಜನಿಕರ ಕುಂದು-ಕೊರತೆ ಆಲಿಸಿದರು.
ಅಹವಾಲುಗಳನ್ನು ಸ್ವೀಕರಿಸಿದರು. ತಹಸೀಲ್ದಾರ್ ಡಾ.ದಾಕ್ಷಾಯಣಿ, ಜಿಪಂ ಎಂಜಿನಿಯರ್ ಗುರುಸ್ವಾಮಿ ಮೊದಲಾದ ಅಧಿಕಾರಿಗಳು, ಮಾಜಿ ಶಾಸಕ ಕೆ.ರಾಜು, ಜೆಡಿಎಸ್ ಮುಖಂಡರಾದ ಬಿ.ನಾಗರಾಜು, ಪುಟ್ಟರಾಜು,ಬಿ.ಎಸ್.ಗೌಡ, ಸಿದ್ದಮರಿಗೌಡ, ತಿಮ್ಮೇಗೌಡ, ಮರಳವಾಡಿ ಙಬಾಬು, ರಾಮಕೃಷ್ಣ, ರಮೇಶ್, ಪುರುಷೋತ್ತಮ್, ಪುಟ್ಟಸ್ವಾಮಿ ಪಾಲ್ಗೊಂಡಿದ್ದರು. ಜವನಮ್ಮನದೊಡ್ಡಿ ಗ್ರಾಮದಲ್ಲಿ ಎಚ್ಡಿಕೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ತಮ್ಮ ನಾಯಕನ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಸಿಹಿ ಹಂಚಿ ಪಟಾಕಿಗಳನ್ನು ಸಿಡಿಸಿ ಸಂಭ್ರಮದಿಂದ ಆಚರಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಸಿದ್ಧಮರಿಗೌಡ, ಎಚ್ಡಿಕೆ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ ಶುಭಾಷಯ ಕೋರಿದರು.
ಚಾಕನಹಳ್ಳಿ ಗ್ರಾಪಂಗೆ ರೇಣುಕಮ್ಮಅಧ್ಯಕ್ಷೆ
ಕನಕಪುರ: ತಾಲೂಕಿನ ಚಾಕನಹಳ್ಳಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷೆಯಾಗಿ ರೇಣುಕಮ್ಮ ಮಹೇಶ್ ಅವಿರೋಧ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿತ್ತು. ಚುನಾವಣಾ ಅಧಿಕಾರಿಗಳಾಗಿ ತೋಟಗಾರಿಕಾ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಸಹಾಯಕ ಚುನಾವಣಾಧಿಕಾರಿಯಾಗಿ ಪಿಡಿಒ ಸತೀಶ್ ಕಾರ್ಯ ನಿರ್ವಹಿಸಿದರು. ಚಾಕನಹಳ್ಳಿ ಗ್ರಾಪಂನಲ್ಲಿ 21 ಸದಸ್ಯರ ಬಲವಿದ್ದು ವಿರೋಧ ಪಕ್ಷದ ಆರು ಮಂದಿ ಸದಸ್ಯರ ಗೈರು ಹಾಜರಿಯಲ್ಲಿ ಸಭೆಯಲ್ಲಿ ಒಟ್ಟಾರೆ 16 ಮಂದಿ ಸದಸ್ಯರು ಪಾಲ್ಗೊಂಡಿದ್ದರು. ರೇಣುಕಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರನ್ನು ಕಾಂಗ್ರೆಸ್ ಮುಖಂಡರಾದ ಎಂ.ಡಿ.ವಿಜಯದೇವ್, ಕೆ.ಎನ್.ದಿಲೀಪ್, ಜಿಲ್ಲಾ ಉಪಾಧ್ಯಕ್ಷ ವಿ.ಶ್ರೀನಿವಾಸ್, ಚಿಕ್ಕಮುದವಾಡಿ ಗ್ರಾಪಂ ಅಧ್ಯಕ್ಷ ಸಿ.ವಿಜಯ್, ರಮೇಶ್, ಕೆ.ಎಂ.ಮಲ್ಲೇಶ್, ಮಹೇಶ್ ಮತ್ತಿತರರು ಅಭಿನಂದಿಸಿದರು.
ಶಿಂಷಾ ಬ್ಯಾಂಕ್ಗೆ ಸಿಐಡಿ ಲಗ್ಗೆ
ಮದ್ದೂರು: ಕೇಂದ್ರ ಸರ್ಕಾರದ ರೈತರ ಸಾಲ ಮನ್ನಾ ಯೋಜನೆಯಡಿ ಅವ್ಯವಹಾರ ನಡೆಸಿರುವ ಆರೋಪ ಎದುರಿಸುತ್ತಿರುವ ಪಟ್ಟಣದ ಶಿಂಷಾ ಸಹಕಾರ ಬ್ಯಾಂಕ್ಗೆ ಸಿಐಡಿ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸಿಐಡಿ ಆರ್ಥಿಕ ಅಪರಾಧ ಘಟಕದ ವಿಭಾಗದ ಇನ್ಸ್ಪೆಕ್ಟರ್ ಕೆ.ಎಸ್.ವಿ ನಾಯ್ಡು ಅವರ ತಂಡ ಜ.7ರಿಂದ 3 ದಿನಗಳ ಕಾಲ ಬ್ಯಾಂಕಿನ ಕಡತಗಳನ್ನು ಪರಿಶೀಲನೆ ನಡೆಸಿದರು. ಕೇಂದ್ರ ಸರ್ಕಾರದ ರೈತರ ಸಾಲ ಮನ್ನಾ ಯೋಜನೆ ಅವ್ಯವಹಾರ ಕುರಿತಂತೆ ಬ್ಯಾಂಕಿನ ಕಡಿತಗಳನ್ನು ಪರಿಶೀಲನೆ ನಡೆಸಿದ ಸಿಐಡಿ ಪೊಲೀಸರ ತಂಡ ಕಡತಗಳನ್ನು ವಶಕ್ಕೆ ತೆಗೆದುಕೊಂಡು ತೆರಳಿದ್ದಾರೆ.
ದಾಖಲೆಗಳ ತಿದ್ದುಪಡಿ: 2011-12ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಯೋಜನೆಯಡಿ ಬಿಡುಗಡೆ ಮಾಡಿದ್ದ ಕೋಟ್ಯಂತರ ರು. ಹಣವನ್ನು ಬ್ಯಾಂಕಿನ ಆಡಳಿತ ಮಂಡಳಿ ದುರುಪಯೋಗ ಪಡಿಸಿಕೊಂಡಿತ್ತು.
ನಂತರ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕಿನ ಖಾತೆದಾರರ ವಾಣಿಜ್ಯ ಸಾಲವನ್ನು ರೈತರ ಸಾಲ ಮನ್ನಾ ಯೋಜನೆಗೆ ಅನ್ವಯಿಸುವಂತೆ ದಾಖಲೆಗಳನ್ನು ತಿದ್ದಿ ವಂಚಿಸಿರುವುದು ಸಿಎಜಿ ತನಿಖೆಯಲ್ಲಿ ಬಹಿರಂಗಗೊಂಡಿತ್ತು.
ದ್ವೇಷ: ವ್ಯಕ್ತಿ ಮೇಲೆ ಹಲ್ಲೆ
ಕನಕಪುರ: ಕನಕಪುರ ಪಟ್ಟಣದ ಚನ್ನಬಸಪ್ಪ ವೃತ್ತದಲ್ಲಿ ಹಳೆಯ ವಯಕ್ತಿಕ ದ್ವೇಷದಿಂದ ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಗೀಡಾದ ವ್ಯಕ್ತಿಯನ್ನು ಮಳಗಾಳು ಕಾಲೋನಿಯ ನಾರಾಯಣ (29)ಎಂದು ಗುರುತಿಸಲಾಗಿದೆ.
ಈತನ ಮೇಲೆ ಮಳಗಾಳು ಕಾಲೋನಿಯ ಯುವಕರಾದ ಮಂಜ,ಸುಮನ್, ಚಂದ್ರ, ಪರಮೇಶ್ ಎಂಬುವರು ಕಾರಿನಲ್ಲಿ ಬರುತ್ತಿದ್ದ ನಾರಾಯಣನನ್ನು ಚನ್ನಬಸಪ್ಪ ವೃತ್ತದಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮುಖ ಹಾಗೂ ಎದೆಯ ಮೇಲೆ ಸೈಜುಗಲ್ಲು ಎತ್ತಿಹಾಕಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನಾರಾಯಣನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ತಡರಾತ್ರಿ ನಡೆದ ಘಟನೆಯಿಂದ ಭಯಭೀತರಾದ ಜನರು ಅಂಗಡಿ ಮುಂಗಟ್ಟು ಮುಚ್ಚಿ ಮನೆಗೆ ತೆರಳಿದ್ದಾರೆ. ಘಟನಾ ಸ್ಥಳಕ್ಕೆ ಆರಕ್ಷಕ ವೃತ್ತ ನಿರೀಕ್ಷಕ ಸಿದ್ದೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕನಕಪುರ ಟೌನ್ಠಾಣೆಯಲ್ಲಿ ದೂರು ದಾಖಲಾಗಿದ್ದು ಉಪ ನಿರೀಕ್ಷಕ ಅಶೋಕ್ ತನಿಖೆ ಕೈಗೊಂಡಿದ್ದಾರೆ.
ಪಡಿತರ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
ಕನಕಪುರ: ದಲಿತ್ ಪ್ಯಾಂಥರ್ಸ್ ಆಫ್ ಇಂಡಿಯಾ(ಡಿಪಿಐ)ವತಿಯಿಂದ ಆಹಾರ ಪಡಿತರ ಅವ್ಯವಸ್ಥೆ, ತಾರತಮ್ಯ ವಿರೋಧಿಸಿ, ಕನಕಪುರದ ತಾಲೂಕು ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಯಿತು. ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸರ್ಕಾರದ ನೀತಿ ವಿರುದ್ಧವಾಗಿ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿ ಎದುರು ಘೇರಾವ್ನಡೆಸಿ ಪ್ರತಿಭಟಿಸಿದರು. ಮುಖಂಡ ಮಧುಗೌಡ ಮಾತನಾಡಿದರು. ಡಿಪಿಐ ಮುಖಂಡರಾದ ಭಾನು ಪ್ರಕಾಶ್,ಜಯಸಿಂಹ,ಪೈಂಟರ್ಬಾಬು, ತುಂಗಣಿ ಉಮೇಶ್, ಅಶೋಕ್ಕುಮಾರ್, ಗೋಪಿ ಮತ್ತಿತರರು ಪಾಲ್ಗೊಂಡಿದ್ದರು.
ನಾಳೆ ವೈಕುಂಠ ಏಕಾದಶಿ ಪೂಜೆ
ಮಾಗಡಿ: ಐತಿಹಾಸಿಕ ಪ್ರಸಿದ್ಧ ತಿರುಮಲೆ ಶ್ರೀನಿವಾಸಸ್ವಾಮಿ ದೇವಾಲಯದಲ್ಲಿ ಜ.11 ರಂದು ವೈಕುಂಠ ಏಕಾದಶಿ ಪ್ರಯುಕ್ತ ಮುಂಜಾನೆ 5 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆವಿಗೂ ದೇವಾಲಯದಲ್ಲಿ ವೈಕುಂಠ ದ್ವಾರ ಪ್ರವೇಶ ನಿರ್ಮಿಸಲಾಗಿರುತ್ತದೆ. ಭಕ್ತರು ಸಕಾಲಕ್ಕೆ ಅಗಮಿಸಿ ವೈಕುಂಠ ದ್ವಾರದ ಮೂಲಕ ಪ್ರವೇಶಿಸಿ ದೇವರ ದರ್ಶನಭಾಗ್ಯ ಪಡೆದಪ ತೀರ್ಥ ಪ್ರಸಾದ ಸ್ವೀಕರಿಸಿ ಪಾವನರಾಗುವಂತೆ ಅರ್ಚಕ ಶ್ರೀನಿವಾಸ ರಂಗನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಾ ಕಾರಂಜಿ ನಾಟಕ; ಶಾಂತಿನಿಕೇತನ ಶಾಲೆ ಪ್ರಥಮ
ರಾಮನಗರ: ಸಾರ್ವಜನಿಕ ಶಿಕ್ಷಣ ಇಲಾಖೆಯು ನಗರದ ಗುರುಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2013-14ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಗರದ ಶಾಂತಿನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಕಾಲ ಯೋಜನೆ ಕುರಿತು ಅಭಿನಯಿಸಿದ ನಾಟಕ ಪ್ರದರ್ಶನಕ್ಕೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಾಟಕ ಪ್ರದರ್ಶನ ತಂಡದಲ್ಲಿ ಭಾಗವಹಿಸಿದ್ದ 8 ಮಂದಿ ವಿದ್ಯಾರ್ಥಿಗಳಿಗೂ ಜಿಲ್ಲಾಡಳಿತ ತಲಾ ರು.500 ನಗದು ಹಾಗೂ ಪ್ರಶಸ್ತಿ ಪತ್ರ ನೀಡಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಆರ್.ಕುಮಾರಸ್ವಾಮಿ, ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ಅಭಿನಂದಿಸಿದೆ.
ಹಣ ದುರುಪಯೋಗ: ಪೇದೆ ಮೇಲೆ ಕ್ರಮಕ್ಕೆ ಆಗ್ರಹ
ದೇವನಹಳ್ಳಿ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಕೋರ್ಟ್ ಪೇದೆಯಾಗಿರುವ ಭೀಮರಾಜು ಎಂಬುವರಿಗೆ ಆಗಿನ ಎಸೈ ಆಗಿದ್ದ ಖಲಂದರ್ ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ಒಂದುವರೆ 1.5 ಲಕ್ಷ ನ್ಯಾಯಾಯಾಲಯದ ವಶಕ್ಕೆ ನೀಡದೆ, ದುರುಪಯೋಗ ಪಡಿಸಿಕೊಂಡು ದಾಖಲೆಗಳನ್ನು ನಾಶಪಡಿಸಿರುವುದರಿಂದ ಭೀಮರಾಜು ಮೇಲೆ ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದರೂ ಆತನನ್ನು ಸೇವೆಯಲ್ಲೇ ಮುಂದುವರೆಸುತ್ತಿರುವುದು ಕಾನೂನಿಗೆ ವಿರೋಧವಾಗಿದೆ. ಅಲ್ಲದೆ ಠಾಣಾಧಿಕಾರಿಗಳು ಆತನ ಮೇಲೆ ಯಾವುದೇ ತನಿಖೆ ನಡೆಸದೆ ಇರುವುದು ಮತ್ತು ದೂರು ಕೊಟ್ಟವರಿಂದ ವಿಚಾರಣೆ ನಡೆಸದೆ ಇರುವುದು ಆರೋಪಿಯನ್ನು ರಕ್ಷಣೆ ನೀಡುವುದೇ ಆಗಿರುತ್ತದೆ ಆದ್ದರಿಂದ ಆತನ ಮೇಲೆ ಕ್ರಮ ಕೈಗೊಳಬೇಕೆಂದು ಒತ್ತಾಯಿಸಿ ಅಂ.ರಾ.ವಿಮಾನ ನಿಲ್ದಾಣ ಪೊಲೀಸ್ ಠಾಣೆ ಮುಂಭಾಗದಲ್ಲಿ ಶುಕ್ರವಾರ ಧರಣಿ ನಡೆಸಲಾಗುವುದು ಎಂದು ನಿವೃತ್ತ ಎಸ್ಐ ಖಲಂದರ್ ಗುರುವಾರ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
'ಸರ್ಕಾರಿ ಸವಲತ್ತು ಸದ್ಬಳಕೆಯಾಗುತ್ತಿಲ್ಲ'
ಮಾಗಡಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಸಕ ಎಚ್.ಸಿ. ಬಾಲಕೃಷ್ಣ ಹಾಗೂ ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಸೈಕಲ್ ವಿತರಿಸಿದರು. ನಂತರ ಮಾತನಾಡಿದ ಶಾಸಕ ಎಚ್.ಸಿ. ಬಾಲಕೃಷ್ಣ, ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸವಲತ್ತುಗಳಿದ್ದರೂ ಅವುಗಳು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಈಗ ನೀಡುತ್ತಿರುವ ಸೈಕಲ್ ಸಹ ಅಷ್ಟೊಂದು ಗುಣಮಟ್ಟದಲ್ಲ, ಗುಣಮಟ್ಟದ ಸೌಲತ್ತುಗಳನ್ನು ಸರ್ಕಾರ ಒದಗಿಸಬೇಕು. ಈ ಎಲ್ಲ ಯೋಜನೆಗಳು ಪರಿಪೂರ್ಣವಾಗಿ ವಿದ್ಯಾರ್ಥಿಗಳು-ಶಿಕ್ಷಕರಿಗೆ ತಲುಪಿದರೆ ಶೈಕ್ಷಣಿಕವಾಗಿ ಮತ್ತಷ್ಟು ಸುಧಾರಣೆ ಕಾಣಬಹುದಿತ್ತು. ಸರ್ಕಾರಿ ಒದಗಿಸುವ ಸೌಲಭ್ಯವನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಅವುಗಳ ಬಗ್ಗೆ ಇತರರಿಗೂ ಅರಿವು ಮೂಡಿಸುವ ಪ್ರಯತ್ನವಾಗಬೇಕು. ಇವೆಲ್ಲವೂ ಶಿಕ್ಷಣದ ಗುಣಮಟ್ಟ ಮತ್ತು ಫಲಿತಾಂಶ ಸುಧಾರಣೆಗೆ ಸಹಕಾರಿಯಾಗುತ್ತದೆ ಎಂದರು. ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳು ಮಹತ್ವದ ಶೈಕ್ಷಣಿಕ ಸಾಧನೆಯಲ್ಲಿ ಗುರುತಿಸಿಕೊಂಡಿರುವುದನ್ನು ಶಾಸಕರು ಶ್ಲಾಘಿಸಿದರು. ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಜಿ.ಕೃಷ್ಣ, ಜಿಪಂ ಸದಸ್ಯ ರಂಗಸ್ವಾಮಿ, ಮಾಜಿ ಅಧ್ಯಕ್ಷ ಮುದ್ದುರಾಜ ಯಾದವ್ ಮಾತನಾಡಿದರು. ತಾಪಂ ಸದಸ್ಯೆ ಅರುಂಧತಿ ಚಿಕ್ಕಣ್ಣ, ಅನಸೂಯಮ್ಮ ಕಾಂತರಾಜು, ಎಚ್.ಗಂಗರಾಜು, ಚಲುವಯ್ಯ, ಮಲ್ಲಿಕಾರ್ಜುನಸ್ವಾಮಿ, ಕಾಂತರಾಜು, ಬಿಇಒ ಎ.ಆರ್. ರಂಗಸ್ವಾಮಿ, ಎಲ್.ನಂಜಯ್ಯ, ಬಿ.ಎನ್. ಜಯರಾಮು,ಕೆ.ಪಿ. ರಂಗಸ್ವಾಮಯ್ಯ, ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಸರ ಅಪಹರಣ
ರಾಮನಗರ: ಬೈಕ್ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ದನಗಾಹಿ ಮಹಿಳೆಯನ್ನು ಅಡ್ಡಗಟ್ಟಿ ಆಕೆಯ ಕತ್ತಿನಲ್ಲಿದ್ದ 32 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಸಿದು ಪರಾರಿಯಾಗಿರುವ ಘಟನೆ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಕರಾಮನಹಳ್ಳಿಯ ಗುಡ್ಡದಹಳ್ಳಿ ರಸ್ತೆಯಲ್ಲಿ ನಡೆದಿದೆ. ಕಾಕರಾಮನಹಳ್ಳಿಯ ಲಕ್ಷ್ಮಮ್ಮ ಸರ ಕಳೆದುಕೊಂಡವರು. ಈಕೆ ಜ.5ರ ಮಧ್ಯಾಹ್ನ ಹಸುಗಳನ್ನು ಮೇಯಿಸಲು ಗುಡ್ಡದಹಳ್ಳಿ ಕಡೆಗೆ ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ವಿಳಾಸ ಕೇಳುವ ನೆಪದಲ್ಲಿ ಹತ್ತಿರಕ್ಕೆ ಬಂದು ಚೈನ್ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತರಬೇತಿ ಶಿಬಿರ
ರಾಮನಗರ: ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದಿಂದ ತರಕಾರಿ ಮತ್ತು ಪುಷ್ಪ ಬೆಳೆಗಳ ಸಂರಕ್ಷಿತ ಬೇಸಾಯ ಕ್ರಮಗಳ ಬಗ್ಗೆ ಮೂರು ದಿನಗಳ ರಾಜ್ಯ ಮಟ್ಟದ ತರಬೇತಿ ಶಿಬಿರವನ್ನು ಜನವರಿ ಮಾಹೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಶಿಬಿರದಲ್ಲಿ ವಿವಿಧ ತರಕಾರಿ ಮತ್ತು ಪುಷ್ಪ ಬೆಳೆಗಳಲ್ಲಿ ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಸಂರಕ್ಷಿತ ಬೇಸಾಯ ಕ್ರಮಗಳು, ಸಾವಯವ ಕೃಷಿ ತಂತ್ರಜ್ಞಾನ, ಸೂಕ್ಷ್ಮ ನೀರಾವರಿ ಪದ್ಧತಿಗಳು, ಕೊಯ್ಲೋತ್ತರ ಹಾಗೂ ಸಂಸ್ಕರಣಾ ಕ್ರಮಗಳು, ಮಾರುಕಟ್ಟೆ ವಿಧಾನಗಳು, ಹಣಕಾಸಿನ ನಿರ್ವಹಣೆ ಇನ್ನಿತರೆ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಆಸಕ್ತ ರೈತರು ಹಾಗೂ ರೈತ ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ತಮ್ಮ ಹೆಸರು ವಿಳಾಸ, ದೂರವಾಣಿ, ಮೊಬೈಲಲ್ಸಂಖ್ಯೆ ಹಾಗೂ ಸ್ವವಿವರವನ್ನು ಜ.18ರೊಳಗೆ ಕಾರ್ಯ ನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ. ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರಸ್ತೆ, ಬಾಗಲಕೋಟ-587103 ಈ ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ-08354-244028, ಮೊ-8050502920 ಇಲ್ಲಿಗೆ ಸಂಪರ್ಕಿಸಬಹುದು.