ಕುಡಿಯುವ ನೀರಿಗೆ ಆಗ್ರಹ
ಆನೇಕಲ್ಲು: ಆನೇಕಲ್ ಪಟ್ಟಣದಲ್ಲಿ 60 ಸಾವಿರಕ್ಕೂ ಹೆಚ್ಚು ಜನರು ವಾಸವಾಗಿದ್ದು ಬೇಸಗೆಗೆ ಮುಂಚೆಯೇ ನೀರಿನ ಅಭಾವ ಕಂಡು ಬಂದಿದೆ. ಮುನ್ನೆಚ್ಚರಿಕೆ ವಹಿಸಿ 10 ಬೋರ್ವೆಲ್ ಕೊರೆಸಬೇಕೆಂದು ಜೆಡಿಎಸ್ ಪುರಸಭಾ ಸದಸ್ಯರಾದ ಅಶ್ವತ್ಥನಾರಾಯಣ, ಕಾಂತರಾಜು, ರೇಣುಕಮ್ಮ ಮಲ್ಲಿಕಾರ್ಜುನ್ ಮತ್ತು ಪಕ್ಷೇತರ ಸದಸ್ಯ ವಿ. ಮೋಹನ್ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ತಾಲೂಕು ಪಂಚಾಯ್ತಿ ಸಭೆಗೆ ಆಗಮಿಸಿದ್ದ ಜಿಲ್ಲಾಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ಪಟ್ಟಣದ ಸಮಸ್ಯೆಗಳನ್ನು ವಿವರಿಸಿ ಪರಿಹಾರ ಕಂಡುಕೊಳ್ಳಲು 5 ಗಂಟೆಗಳಿಗೂ ಹೆಚ್ಚು ಕಾಲ ಸಂಯಮದಿಂದ ಕಾದರು. ಕೆಲ ವಾರ್ಡುಗಳಲ್ಲಿ 12 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಟ್ಯಾಂಕರ್ನಲ್ಲಿ ನೀರು ಪೂರೈಸಲು ಪುರಸಭೆಗೆ ಸಾಧ್ಯವಾಗುತ್ತಿಲ್ಲ. ದಿನ ಬೆಳಗಾದರೇ ವಾರ್ಡ್ ಜನರು ಪುರಸಭಾ ಸದಸ್ಯರ ಮನೆ ಮುಂದೆ ಬಂದು ನಿಲ್ಲುತ್ತಾರೆ. ಜನರಿಗೆ ಉತ್ತರ ಹೇಳಲು ಪುರಸಭೆಗೆ ನಿಯೋಜನೆಯಾಗಿರುವ ಆಡಳಿತಾಧಿಕಾರಿಯೂ ಸಿಗುತ್ತಿಲ್ಲ ಎಂದರು.
ಪುರಸಭಾ ಸದಸ್ಯರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಪ್ರತಿ ಗುರುವಾರ ಆಡಳಿತಾಧಿಕಾರಿಯವರು ಪುರಸಭೆಗೆ ಹಾಜರಾಗಿ ಕುಂದು ಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ನೀಡಬೇಕೆಂದು ಸೂಚಿಸಿದುರು.
ಪುರಸಭೆಗೆ ಚುನಾವಣೆ ಕಳೆದು 10 ತಿಂಗಳಾದರೂ ಅಧ್ಯಕ್ಷ ಉಪಾಧ್ಯಕ್ಷರ ನೇಮಕವಾಗಿಲ್ಲ. ಸಭೆಯೂ ನಡೆದಿಲ್ಲ. ಜನಪ್ರತಿನಿಧಿಗಳು ಒಂದೆಡ ಕಲೆತು ಅಭಿವೃದ್ಧಿ ಪರ ಚಿಂತನೆ ನಡೆಸಲು ವೇದಿಕೆಯಿಲ್ಲವಾಗಿದೆ. ಕಟ್ಟಡ ಪರವಾನಗಿ ಪಡೆಯಲು ಆನೇಕಲ್ ಅಭಿವೃದ್ಧಿ ಪ್ರಾಧಿಕಾರಿಕ್ಕೆ ತೆರಳಬೇಕಿದೆ. ಸಿಬ್ಬಂದಿ ನೇಮಕ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ ಎಂದರು.
ಕಟ್ಟಣಡ ಪರವಾನಗಿ ಪಡೆಯಲು ಹಳೆಯ ಗ್ರಾಮಕ್ಕೆ ಹೊಸ ಕಾಯಿದೆ ಅನ್ವಯಿಸುವುದಿಲ್ಲ. ಅಭಿವೃದ್ಧಿಗಾಗಿ ನಿಯಮ ಸಡಿಲಿಕೆ ಬಗ್ಗೆ ಪುನರ್ಪರಿಶೀಲಿಸಿ ಎಂದು ವಿನಂತಿ ಮಾಡಿದರು.
ಕಸ ವಿಲೆಗೆ ಸರ್ಕಾರಿ ಜಾಗ: ಬೆಳೆಯುತ್ತಿರುವ ಆನೇಕಲ್ ಪಟ್ಟಣದಲ್ಲಿ ಕಸ ಸಂಗ್ರಹ ಹಾಗೂ ವಿಲೇಗಾಗಿ ಪ್ರತ್ಯೇಕ ಸ್ಥಳ ಗುರುತಿಸಿಕೊಡಬೇಕೆಂದು ಸದಸ್ಯರು ಬೇಡಿಕೆಯಿಟ್ಟಾಗ ತಹಸೀಲ್ದಾರರು ಗೌರೇನಹಳ್ಳಿ ಬಳಿ 3 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ ಎಂದರು. ಜಿಲ್ಲಾಧಿಕಾರಿಗಳು ಕೂಡಲೇ ಜಮೀನಿಗೆ ಬೇಲಿ ಹಾಕಿ ಕಲ್ಲು ಗುರುತಿಸಿ ಪೊಸೆಷನ್ ನೀಡಬೇಕೆಂದು ಸೂಚನೆ ನೀಡಿದರು. ಆಧಾರ್ ಕಾರ್ಡ್ ನೀಡಿಕೆ ಬಗ್ಗೆ ಮೋಹನ್ ಪ್ರಸ್ಥಾಪಿಸಿ 23 ವಾರ್ಡಿಗೂ ಒಂದು ಆಧಾರ ಕೇಂದ್ರ ನೀಡಿ 2 ತಿಂಗಳೊಳಗೆ ಆಧಾರ್ ಪ್ರಕ್ರಿಯೆ ಪೂರ್ಣಗೊಳಿಸಿದಲ್ಲಿ ಗ್ಯಾಸ್ ಹಾಗೂ ಬ್ಯಾಂಕ್ ಸೇವೆಗೆ ಸಹಕಾರಿಯಾಗುತ್ತದೆ ಎಂದರು.