ಕೂಲಿಗೆ ಹೋದ ದಲಿತ ಮಹಿಳೆ ಅನುಮಾನಾಸ್ಪದ ಸಾವು
ದೊಡ್ಡಬಳ್ಳಾಪುರ: ಕೂಲಿ ಕೆಲಸಕ್ಕೆ ಹೋಗಿದ್ದ ದಲಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದ ಗಂಡರಾಜಪುರದಲ್ಲಿ ನಡೆದಿದೆ. ಕೆಲಸಕ್ಕೆ ಹೋಗಿದ್ದ ಜಮೀನಿನ ಮಾಲೀಕರೇ ಆಕೆಯ ಮೇಲೆ ಹಲ್ಲೆ ಮಾಡಿ ಕೊಂದಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬ ಗಂಭೀರ ಆರೋಪ ಮಾಡಿದೆ.
ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಜಮೀನಿನ ಮಾಲೀಕ ಕುಬೇರ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಆದರೆ ಆರೋಪ ಎದುರಿಸುತ್ತಿರುವ ಇಬ್ಬರು ಪೊಲೀಸರಿಗೆ ಸಿಕ್ಕಿಲ್ಲ. ಮೃತಪಟ್ಟ ಮಹಿಳೆಯ ದಾಸಗೊಂಡನಹಳ್ಳಿ ಕಾಲೋನಿಯ ಜಯಲಕ್ಷ್ಮಿ. ಈಕೆ ಗಂಡರಾಜಪುರದ ತೋಟವೊಂದಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. 2 ದಿನಗಳ ಕಾಲ ಆಕೆಗೆ ಕೆಲಸಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಜಮೀನಿನ ಮಾಲೀಕರು ಹಲ್ಲೆ ನಡೆಸಿ, ನಂತರ ಕ್ರಿಮಿನಾಶಕ ಕುಡಿಸಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೆಂಪೇಗೌಡ ಮತ್ತು ಮುನೇಗೌಡ ಎಂಬಿಬ್ಬರು ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಮೃತಳ ಗಂಡ ನಾರಾಯಣಸ್ವಾಮಿ, ಕಳೆದ 5 ವರ್ಷಗಳಿಂದ ಈಕೆ ಕೆಲಸಕ್ಕೆ ಹೋಗುತ್ತಿದ್ದಳು. ಕೆಲವು ವೇಳೆ ಅವಾಚ್ಯ ಶಬ್ದಗಳ ನಿಂದನೆಯನ್ನೂ ಕೇಳಿದ್ದೇವೆ. ದೈಹಿಕ ಹಲ್ಲೆ ಆರೋಪವೂ ಇದೆ. ಜಯಲಕ್ಷ್ಮಿ ತಿರುಗಿಬಿದ್ದಾಗ ಈ ಕೃತ್ಯ ನಡೆದಿದೆ ಎಂದು ಮಗ ಮಂಜುನಾಥ ಹೇಳುತ್ತಾನೆ. ಸ್ಥಳದಲ್ಲೇ ಅಸ್ವಸ್ಥಳಾದ ಆಕೆಯನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಕೆ ಸಾವನ್ನಪ್ಪಿದ್ದಾಳೆ ಎಂದು ವಿವರಿಸಿದ್ದಾರೆ. ಸದ್ಯ ಪೊಲೀಸರು ಜಾತಿ ನಿಂದನೆ ಮತ್ತು ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.