ಖಾಸಗೀಕರಣ ಪ್ರಸ್ತಾವನೆ ಕೈಬಿಡಿ, ಮಾಸಿಕ ವೇತನ ಹೆಚ್ಚಿಸಿ
ರಾಮನಗರ: ಅಂಗನವಾಡಿ ಕೇಂದ್ರಗಳ ನಿರ್ವಹಣೆಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆ ಕೈಬಿಡುವುದು, ಕಾರ್ಯಕರ್ತೆಯರಿಗೆ ಮಾಸಿಕ ವೇತನವನ್ನು ರು.10 ಸಾವಿರಕ್ಕೆ ಹೆಚ್ಚಳ ಮಾಡುವುದು ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರಿನ ವಾಟರ್ ಟ್ಯಾಂಕ್ ವೃತ್ತದ ಬಳಿಯಿಂದ ಕಂದಾಯ ಭವನದವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಕಾಲ ಧರಣಿ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಹಡೆದವರಿಗಿಂತ ಹೆಚ್ಚಿನ ರೀತಿಯಲ್ಲಿ ಮಕ್ಕಳ ಪಾಲನೆ, ಪೋಷಣೆ ಮಾಡುವ ಮೂಲಕ ಸಾಮಾಜಿಕ ವ್ಯವಸ್ಥೆಯ ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರಮಿಸುತ್ತಿದ್ದಾರೆ. ಆದರೆ, ಇವರ ಸೇವೆಯನ್ನು ಗಣೆನೆಗೆ ತೆಗೆದುಕೊಳ್ಳದ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವೇತನದಲ್ಲಿ ಶೋಷಣೆ: ಹೆಚ್ಚಿನ ಅವಧಿಗೆ ದುಡಿಸಿಕೊಂಡು ಅತ್ಯಂತ ಕನಿಷ್ಠ ವೇತನ ನೀಡುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರ ಶೋಷಿಸುತ್ತಿದೆ. ಪಿಂಚಣಿ ಯೋಜನೆ ಜಾರಿಯಲ್ಲಿದ್ದರೂ ಉಪಯೋಗವಿಲ್ಲದಂತಾಗಿದೆ. ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಇಬ್ಬರ ಕೆಲಸವನ್ನು ಒಬ್ಬರೇ ಮಾಡುತ್ತಿದ್ದರು ಕೇವಲ ರು.2250 ವೇತನ ನೀಡುತ್ತಿದೆ ಎಂದು ಸಮಸ್ಯೆ ತೋಡಿಕೊಂಡರು.
ಎಸ್ಎಸ್ಎಲ್ಸಿ ಉತ್ತೀರ್ಣರಾದವರನ್ನು ಕಾರ್ಯಕರ್ತೆಯಾಗಿ ಪರಿಗಣಿಸುತ್ತಿಲ್ಲ, ಸಹಾಯಕಿಯರಿಗೆ ಹೆರಿಗೆ ಭತ್ಯೆ ಸೇರಿದಂತೆ ಇನ್ನಿತರೆ ಸವಲತ್ತು ನೀಡುತ್ತಿಲ್ಲ. ಅವಶ್ಯವಿರುವವರಿಗೆ ವರ್ಗಾವಣೆ ನೀಡುತ್ತಿಲ್ಲ ಹಾಗೂ ಇಲಾಖೆಗೆ ಹೊರತಾದ ಕೆಲಸಗಳಿಗೂ ಕಾರ್ಯಕರ್ತೆಯರನ್ನು ಹಚ್ಚಲಾಗುತ್ತಿದ್ದು, ಕೆಲಸದ ಫಲಿತಾಂಶ ಸರಿಯಗಿ ಬರುತ್ತಿಲ್ಲ ಎಂದು ಆಪಾದಿಸಲಾಗುತ್ತಿದೆ ಎಂದು ಟೀಕಿಸಿದರು.
ಮೂಲ ಸೌಕರ್ಯವಿಲ್ಲ: ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ತಿಂಗಳಿಗೆ ಸರಿಯಾಗಿ ಉರುವಲು, ಬಾಡಿಗೆ, ಗೌರವ ಧನ ನೀಡದೆ ನಾಲ್ಕೈದುತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಇದನ್ನೂ ಕೂಡ ಹೋರಾಟ ಮಾಡಿಯೇ ಪಡೆದುಕೊಳ್ಳಬೇಕಾದ ದುಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.
ಅಂಗನವಾಡಿಯೇತರ ಕೆಲಸಗಳಾದ ಸ್ತ್ರೀಶಕ್ತಿ, ಭಾಗ್ಯಲಕ್ಷ್ಮಿ ಯೋಜನೆ ಕೆಲಸಗಳನ್ನೂ ಮಾಡಿಸುತ್ತಿರುವುದರಿಂದ ಕಾರ್ಯಕರ್ತೆಯರು ರಾಜಕೀಯ ಒತ್ತಡಗಳಿಗೆ ಒಳಗಾಗಿದ್ದೇವೆ. ತಮ್ಮದಲ್ಲದ ತಪ್ಪಿಗೆ ಎಷ್ಟೋ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇವರನ್ನು ಪುನ- ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಜಾರಿ ಕೈಬಿಡಬೇಕು: ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದರೂ ಕೂಡ ಅಂಗನವಾಡಿ ಕೇಂದ್ರಗಳ ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳ ಹೆಸರಿನಲ್ಲಿ ಶ್ರೀಮಂತರ ಸುಪರ್ದಿಗೆ ನೀಡುವ ಹುನ್ನಾರ ನಡೆದಿದೆ. ಈ ಅಪಾಯಕಾರಿ ಶಿಫಾರಸನ್ನು ರಾಜ್ಯದ 12 ಜಿಲ್ಲೆಗಳಲ್ಲಿ 2 ಹಂತದಲ್ಲಿ ಜಾರಿ ಮಾಡಲು ಯೋಜಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಯೋಜನೆ ಜಾರಿಗೊಂಡರೆ ರಾಜ್ಯದ 55 ಲಕ್ಷ ಫಲಾನುಭವಿಗಳಾದ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗೆ ಆಪತ್ತು ಎದುರಾಗಲಿದೆ. ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರ ಹಿತ ಕಾಪಾಡಲು ಮುಂದಾಗಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಪುಷ್ಪಲತಾ, ಜಯಲಕ್ಷ್ಮಿ, ಜಯಶೀಲಾ, ಭಾಗ್ಯ, ಲೀಲಾ, ಕಲ್ಪನಾ, ಮಂಜುಳಾ, ಸುವರ್ಣ, ಕಲಾವತಿ, ನಾಗರತ್ನ, ಹೇಮಲತಾ ಮತ್ತಿತರರಿದ್ದರು.
ಪ್ರಮುಖ ಬೇಡಿಕೆಗಳು
ಅಂಗನವಾಡಿ ಕೇಂದ್ರಗಳ ಖಾಸಗೀಕರಣ ಕೈಬಿಟ್ಟು ಅದನ್ನೊಂದು ಇಲಾಖೆಯನ್ನಾಗಿ ರೂಪಿಸಬೇಕು.
ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂ ನೌಕರರು ಎಂದು ಪರಿಗಣಿಸಬೇಕು.
ಬೆಲೆ ಏರಿಕೆಗೆ ತಕ್ಕ ಹಾಗೆ ಕಾರ್ಯಕರ್ತೆಯರಿಗೆ ರು.15 ಹಾಗೂ ಸಹಾಯಕಿಯರಿಗೆ ರು.10 ಸಾವಿರ ವೇತನ ನೀಡಬೇಕು.
ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಕಾಯಂ ಶಿಶು ವಿಹಾರಗಳನ್ನಾಗಿಸಬೇಕು.
ಕಾರ್ಯಕರ್ತೆಯರಿಂದ ಅಂಗನವಾಡಿ ಕೇಂದ್ರಗಳಿಗೆ ಹೊರತಾದ ಕೆಲಸಗಳನ್ನು ಮಾಡಿಸುವುದನ್ನು ಕೈಬಿಡಬೇಕು.
ಐಸಿಡಿಎಸ್ ಜಾರಿಗಾಗಿ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಕನಿಷ್ಠ ರು.3 ಲಕ್ಷ ಕೋಟಿ ಮೀಸಲಿಡಬೇಕು.