ತಾಂತ್ರಿಕ ಶಿಕ್ಷಣದಲ್ಲಿ ಸೆಮಿಷ್ಟರ್ ಪದ್ಧತಿ ಜಾರಿ ವಿರೋಧಿಸಿ ಪ್ರತಿಭಟನೆ
ಮಾಗಡಿ: ತಾಂತ್ರಿಕ ಶಿಕ್ಷಣದಲ್ಲಿ ಸೆಮಿಷ್ಟರ್ ಪದ್ಧತಿ ಜಾರಿಗೆ ತಂದಿರುವ ಸರ್ಕಾರದ ಅವೈಜ್ಞಾನಿಕ ನೀತಿಯನ್ನು ಖಂಡಿಸಿ ಇಲ್ಲಿನ ಐಟಿಐ ವಿದ್ಯಾರ್ಥಿ ಎಬಿವಿಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಂಚಾಲಕ ಸಿ. ಶಂಕರ್ ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ಸೆಮಿಷ್ಟರ್ ಪದ್ಧತಿ ಜಾರಿಯಿಂದಾಗಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಹೊರೆಯಾಗಲಿದೆ. ಇದರಿಂದಾಗಿ ಬಡವಿದ್ಯಾರ್ಥಿಗಳು ಸಕಾಲಕ್ಕೆ ಶುಲ್ಕ ಕಟ್ಟಲಾಗದೆ ಶೈಕ್ಷಣಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಲಿದ್ದಾರೆ. ಜತೆಗೆ ಶೈಕ್ಷಣಿಕ ಪ್ರಗತಿಗೂ ಮಾರಕವಾಗಲಿದ್ದು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚು ಉಂಟಾಗಬಹುದು.
ಸರ್ಕಾರದ ಈ ಹೊಸ ಪದ್ಧತಿ ಪರೀಕ್ಷೆಗಳು ಮತ್ತು ತರಗತಿಗಳಿಗೆ ಮಾತ್ರ ಸೀಮಿತವಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿಯೂ ಅನುಕೂಲವಾಗುವುದಿಲ್ಲ. ಇಂಥ ಅವೈಜ್ಞಾನಿಕ ನೀತಿಯನ್ನು ಸರ್ಕಾರ ಕೂಡಲೆ ಕೈಬಿಡಬೇಕು. ಹಿಂದಿನ ಪದ್ಧತಿಯನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಗಾಂಧಿ ನಗರದಿಂದ ತಾಲೂಕು ಕಚೇರಿಯವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದರು. ಸಚಿವ ದೇಶಪಾಂಡೆ ವಿರುದ್ಧ ಧಿಕ್ಕಾರ ಕೂಗಿದರು. ವಿದ್ಯಾರ್ಥಿಗಳ ಶಕ್ತಿ ಗುಡಿಗಿದರೆ ವಿಧಾನ ಸೌಧವೇ ನಡುಗುವುದು ಎಂಬ ಘೋಷಣೆ ಮೊಳಗಿತು. ಇದೇ ವೇಳೆ ಹಿಂದಿನ ಪದ್ಧತಿಯನ್ನೇ ಮುಂದುವರೆಸುವಂತೆ ಸರ್ಕಾರವನ್ನು ಒತ್ತಾಯಿಸಿ ತಹಸೀಲ್ದಾರ್ ಕಚೇರಿಗೆ ತೆರಳಿ ಅಧಿಕಾರಿಗಳಲ್ಲಿ ಮನವಿ ಪತ್ರ ಸಲ್ಲಿಸಿದರು. ಸರ್ಕಾರಿ, ಮಾರುತಿ, ಜ್ಞಾನಜ್ಯೋತಿ ಐಟಿಐ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯದರ್ಶಿ ಶಿವರಾಜು,
ಬಾಲರಾಜು, ರೇವಣ್ಣಸಿದ್ದಯ್ಯ, ಕೌಶಿಕ್, ನಾಗೇಂದ್ರ, ವಿನೋಧ ಇತರರು ಪ್ರತಿಭಟನಾ ನೇತೃತ್ವ ವಹಿಸಿದ್ದರು.