ಧ್ವನಿ ಇಲ್ಲದ ಜನಕ್ಕೆ ಧ್ವನಿಯಾಗಲು ಜಾಗೃತಿ ಸಮಾವೇಶ: ರೇವಣ್ಣ
ನೆಲಮಂಗಲ: ಧ್ವನಿ ಇಲ್ಲದ ಜನಕ್ಕೆ ಧ್ವನಿಯಾಗಿ ಸಮಬಾಳು ಸಮಪಾಲು ಎಂಬ ದೃಷ್ಟಿಯಿಂದ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ಅವರು ಮಾದಾವಾರದ ನೈಸ್ ರಸ್ತೆ ಪಕ್ಕ ಒಕ್ಕೂಟದ ದಶಮಾನೋತ್ಸವ ಮತ್ತು ಜಾಗೃತಿ ಸಮಾವೇಶ ಸಜ್ಜುಗೊಳ್ಳುತ್ತಿರುವ ವೇದಿಕೆ ಹಾಗೂ ಆಸನಗಳ ವ್ಯವಸ್ಥೆಯನ್ನು ವೀಕ್ಷಿಸಿ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ರಾಜ್ಯದಲ್ಲಿರುವ ಜನಸಂಖ್ಯೆ ಶೇ. 52 ರಷ್ಟಿರುವ 55 ಜಾತಿಗಳ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಹಾಗೂ ಅವರ ಚಿಂತನೆ ಸೇರಿದಂತೆ ಸಮಾಜದ ಧ್ಯೇಯ ಉದ್ದೇಶಗಳನ್ನು ಯುವ ಪೀಳಿಗೆಯ ಅರಿವಿಗೆ ಬರುವ ದೃಷ್ಟಿಯಿಂದ ಸಮಾವೇಶ ನಡೆಸಲಾಗುತ್ತಿದೆ ಎಂದರು. ಪಕ್ಷಾತೀತ ಸಮಾವೇಶಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಬರಲಿದ್ದಾರೆ. 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ, ಊಟೋಪಚಾರ ಕಲ್ಪಿಸಲಾಗಿದೆ.
ಶಾಸಕ ಮುನಿರತ್ನ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ನೆ.ಲ.ನರೇಂದ್ರಬಾಬು, ವಿ.ಆರ್.ಸುದರ್ಶನ್, ಮಾಜಿ ಮೇಯರ್ ಪಿ.ಆರ್.ರಮೇಶ್, ಒಕ್ಕೂಟದ ಅಧ್ಯಕ್ಷ ಎಸ್.ಸಿದ್ದಗಂಗಯ್ಯ, ಗೌರವಾಧ್ಯಕ್ಷ ಎನ್.ವಿ.ನರಸಿಂಹಯ್ಯ, ಉಪಾಧ್ಯಕ್ಷ ಸುರೇಶ್.ಎಂ. ಲಾತೂರ್, ಕಾರ್ಯದರ್ಶಿ ಜಿ.ಡಿ.ಗೋಪಾಲ್ ಸೇರಿದಂತೆ ನೂರಾರು ಜನ ಇದ್ದರು.