ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಾಳೆ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ

Vishwanath S
Updated On : 11 Jan 2014, 1:38 am

ನೆಲಮಂಗಲ: ಕರ್ನಾಟಕ ರಾಜ್ಯ ಹಿಂದುಳಿದ  ಜಾತಿಗಳ ಒಕ್ಕೂಟದ ದಶಮಾನೋತ್ಸವ ಸಮಾರಂಭ ಮತ್ತು ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶವನ್ನು ಜನವರಿ 12 ರ ಭಾನುವಾರದಂದು  ಬೆಳಿಗ್ಗೆ 11-00 ಗಂಟೆಗೆ  ನೆಲಮಂಗಲ ರಸ್ತೆ (ನೈಸ್ ರಸ್ತೆಯ ಸಮೀಪ) ಮಾದಾವಾರ, ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಜಾಗದ ಎದುರಿಗಿರುವ ಮೈದಾನದಲ್ಲಿ  ಏರ್ಪಡಿಸಲಾಗಿದೆ.  
ದಶಮಾನೋತ್ಸವ ಉದ್ಘಾಟನಾ ಸಮಾರಂಭ ಮತ್ತು ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ  ನೆರವೇರಿಸಲಿದ್ದಾರೆ. ಕೇಂದ್ರದ ಇಂಧನ ಮತ್ತು ಪರಿಸರ ಇಲಾಖೆ ಸಚಿವ ಎಂ.ವೀರಪ್ಪ ಮೊಯ್ಲಿ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಎಸ್.ಸಿದ್ದಗಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ತಾಯಿ-ಮಗಳು ಆತ್ಮಹತ್ಯೆ
ಕಪ್ರ.ವಾರ್ತೆ , ದೊಡ್ಡಬಳ್ಳಾಪುರ ್ಣಜ.10
ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ಮುತ್ಸಂದ್ರ ಸಮೀಪ ನಂದಿ ಸೇತುವೆ ಬಳಿ ರೈಲಿಗೆ ಸಿಕ್ಕಿ ತಾಯಿ-ಮಗಳು ಮೃತಪಟ್ಟಿರುವ ಧಾರುಣ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಮೃತಪಟ್ಟವರನ್ನು ತಾಲೂಕಿನ ಸಿದ್ದೇನಾಯಕನಹಳ್ಳಿಯ ಪ್ರಸನ್ನ ಎಂಬುವವರ ಪತ್ನಿ ಸುಜಾತ (37) ಮತ್ತು ತೇಜಸ್ವಿನಿ (6) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದ್ದು, ದೊಡ್ಡಬಳ್ಳಾಪುರ ನಗರ ರೇಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಶವಗಳು ಸಂಪೂರ್ಣವಾಗಿ ಚಿಂದಿಯಾಗಿವೆ. ಕೈ ಕಾಲುಗಳು ಕತ್ತರಿಸಿ ಬಿದ್ದಿದ್ದು ಅತ್ಯಂತ ಬರ್ಬರವಾಗಿ ಸಾವನ್ನಪ್ಪಿದ್ದಾರೆ. ಈಗ ಘಟನೆ ನಡೆದಿರುವ ಸ್ಥಳ ಆತ್ಮಹತ್ಯೆ ಪ್ರದೇಶವಾಗಿಯೇ ಗುರುತಿಸಲ್ಪಟ್ಟಿದೆ.
ಕೂಲಿಗೆ ಹೋದ ದಲಿತ
ಮಹಿಳೆ ಅನುಮಾನಾಸ್ಪದ ಸಾವು
ದೊಡ್ಡಬಳ್ಳಾಪುರ: ಕೂಲಿ ಕೆಲಸಕ್ಕೆ ಹೋಗಿದ್ದ ದಲಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದ ಗಂಡರಾಜಪುರದಲ್ಲಿ ನಡೆದಿದೆ. ಕೆಲಸಕ್ಕೆ ಹೋಗಿದ್ದ ಜಮೀನಿನ ಮಾಲೀಕರೇ ಆಕೆಯ ಮೇಲೆ ಹಲ್ಲೆ ಮಾಡಿ ಕೊಂದಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬ ಗಂಭೀರ ಆರೋಪ ಮಾಡಿದೆ.
ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಜಮೀನಿನ ಮಾಲೀಕ ಕುಬೇರ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಆದರೆ ಆರೋಪ ಎದುರಿಸುತ್ತಿರುವ ಇಬ್ಬರು ಪೊಲೀಸರಿಗೆ ಸಿಕ್ಕಿಲ್ಲ. ಮೃತಪಟ್ಟ ಮಹಿಳೆಯ ದಾಸಗೊಂಡನಹಳ್ಳಿ ಕಾಲೋನಿಯ ಜಯಲಕ್ಷ್ಮಿ. ಈಕೆ ಗಂಡರಾಜಪುರದ ತೋಟವೊಂದಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. 2 ದಿನಗಳ ಕಾಲ ಆಕೆಗೆ ಕೆಲಸಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಜಮೀನಿನ ಮಾಲೀಕರು ಹಲ್ಲೆ ನಡೆಸಿ, ನಂತರ ಕ್ರಿಮಿನಾಶಕ ಕುಡಿಸಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೆಂಪೇಗೌಡ ಮತ್ತು ಮುನೇಗೌಡ ಎಂಬಿಬ್ಬರು ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಮೃತಳ ಗಂಡ ನಾರಾಯಣಸ್ವಾಮಿ, ಕಳೆದ 5 ವರ್ಷಗಳಿಂದ ಈಕೆ ಕೆಲಸಕ್ಕೆ ಹೋಗುತ್ತಿದ್ದಳು. ಕೆಲವು ವೇಳೆ ಅವಾಚ್ಯ ಶಬ್ದಗಳ ನಿಂದನೆಯನ್ನೂ ಕೇಳಿದ್ದೇವೆ. ದೈಹಿಕ ಹಲ್ಲೆ ಆರೋಪವೂ ಇದೆ. ಜಯಲಕ್ಷ್ಮಿ ತಿರುಗಿಬಿದ್ದಾಗ ಈ ಕೃತ್ಯ ನಡೆದಿದೆ ಎಂದು ಮಗ ಮಂಜುನಾಥ ಹೇಳುತ್ತಾನೆ. ಸ್ಥಳದಲ್ಲೇ ಅಸ್ವಸ್ಥಳಾದ ಆಕೆಯನ್ನು ದೊಡ್‌ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಕೆ ಸಾವನ್ನಪ್ಪಿದ್ದಾಳೆ ಎಂದು ವಿವರಿಸಿದ್ದಾರೆ. ಸದ್ಯ ಪೊಲೀಸರು ಜಾತಿ ನಿಂದನೆ ಮತ್ತು ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಬೈಕ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು
ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರ ವಲಯದಲ್ಲಿರುವ ಸಂಗಬಸವನದೊಡ್‌ಡಿ ಬಳಿ ಗುರುವಾರ ರಾತ್ರಿ ಸಂಭವಿಸಿದೆ.  ತಾಲೂಕಿನ ಚಿಕ್ಕರಸನಹಳ್ಳಿಯ ಗೋಪಾಲಕೃಷ್ಣ (30) ಮತ್ತು ರವಿ (32) ಮೃತರು. ಅವರಿಬ್ಬರೂ ರಾಮನಗರದಿಂದ ಬಿಡದಿ ಕಡೆ ತೆರಳುತ್ತಿದ್ದಾಗ ಬೈಕ್ ಆಯತಪ್ಪಿ ತಡೆಗೋಡೆಗೆ ಡಿಕ್ಕಿಯಾಯಿತು. ತೀವ್ರ ರಕ್ತಸ್ರಾವದಿಂದ ಇಬ್ಬರೂ ಸ್ಥಳದಲ್ಲೇ ಅಸುನೀಗಿದರು. ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದರ್ಶನಕ್ಕೆ ಸೂಕ್ತ ವ್ಯವಸ್ಥೆ
ಮಾಗಡಿ: ಐತಿಹಾಸಿಕ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮುಕ್ಕೋಟಿ ದ್ವಾದಶಿ ಪ್ರಯುಕ್ತ  ಜ.12 ರಂದು ಭಾನುವಾರ ಮುಂಜಾನೆ 5 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆವಿಗೂ ವೈಕುಂಠ ದ್ವಾರ ನಿರ್ಮಿಸಿ ಭಕ್ತರ ದರ್ಶನಭಾಗ್ಯಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ನಾಳೆ ಹಾಸ್ಯ ಕಾರ್ಯಕ್ರಮ
ಮಾಗಡಿ:  ಆರ್ಯ ವೈಶ್ಯ ಮಹಿಳಾ ಮಂಡಳಿ ವತಿಯಿಂದ ಪಟ್ಟಣದ ಕನ್ನಿಕಾ ಮಹಲ್‌ನಲ್ಲಿ ಜ.12 ರಂದು ಭಾನುವಾರ ಸಂಜೆ 6 ಗಂಟೆಗೆ  ಮುಕ್ಕೋಟಿ ದ್ವಾದಶಿ ಮತ್ತು ವಾರ್ಷಿಕೋತ್ಸವದ ಪ್ರಯುಕ್ತ ಹೊಸ ಇಸವಿ-ಹಾಸ್ಯದ ಸವಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಗುಂಡೂರಾವ್, ಹನಿಗವನಗಳ ರಾಜ ಎಚ್. ದುಂಡುರಾಜ್ ಇವರುಗಳಿಂದ ಗುಂಡಿ-ದುಂಡಿ-ಜಗಲ್ ಬಂದಿ ಹಾಸ್ಯ ಕಾರ್ಯಕ್ರಮ ನಡೆಯಲಿದ್ದು, ಈ ಎಲ್ಲಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ಯವೈಶ್ಯ ಮಹಿಳಾ ಮಂಡಲಿ ಅಧ್ಯಕ್ಷೆ ಮೀನಾ ಸುಧೀರ್ ವಹಿಸಲಿದ್ದಾರೆ ಎಂದು ವಿಜಯನಾಗೇಶ್ ತಿಳಿಸಿದ್ದಾರೆ.
ಗಿರಿಜಾ ಕಲ್ಯಾಣೋತ್ಸವ
ನೆಲಮಂಗಲ: ತಾಲೂಕಿನ ಶ್ರೀ ಹೊನ್ನಾದೇವಿ ಗಂಗಾಧರೇಶ್ವರ ಸ್ವಾಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ  ದಕ್ಷಿಣಕಾಶಿ ಶಿವಗಂಗಾ ಕ್ಷೇತ್ರದಲ್ಲಿ ಜ. 14ರಂದು ಸಂಜೆ 5-30 ರಿಂದ 6-00ಕ್ಕೆ ಗಂಗೋತ್ಪತ್ತಿ ಹಾಗೂ  ಶ್ರೀ ಗಂಗಾಧರೇಶ್ವರ ಸ್ವಾಮಿಗೆ ಶ್ರೀ ಗಿರಿಜಾ ಕಲ್ಯಾಣೋತ್ಸವ ಮತ್ತು ಜ.15ರಂದು ಮಧ್ಯಾಹ್ನ 12-00 ಗಂಟೆಯಿಂದ ಭಕ್ತಾದಿಗಳಿಗೆ ಅನ್ನದಾಸೋಹ ಏರ್ಪಡಿಸಲಾಗಿದೆ.    
19ರಂದು ಪಲ್ಸ್ ಪೊಲಿಯೋ ಕಾರ್ಯಕ್ರಮ
ನೆಲಮಂಗಲ:  ತಾಲೂಕಿನಲ್ಲಿ ಜನವರಿ 19ರ ಭಾನುವಾರದಂದು ಪಲ್ಸ್ ಪೊಲಿಯೋ ಕಾರ್ಯಕ್ರಮ ನಡೆಯಲಿದೆ ಎಂದು ತಹಸೀಲ್ದಾರ್ ಡಾ.ಗೀತಾ ಹೇಳಿದರು.  ಅವರು ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಪಲ್ಸ್ ಪೊಲಿಯೋ ಕಾರ್ಯಕ್ರಮ ನಡೆಸುವ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು. ತಾಲ್ಲೂಕಿನಲ್ಲಿರುವ ಸುಮಾರು 22 ಸಾವಿರಕ್ಕೂ ಹೆಚ್ಚು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ನೀಡಲು ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಆರೋಗ್ಯ  ಇಲಾಖೆಯ ಮಾರ್ಗದರ್ಶನದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ನರಸಿಂಹಯ್ಯ, ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement